Karnataka Transport Strike: ಸಾರಿಗೆ ಮುಷ್ಕರ: ಹಲವೆಡೆ ರಸ್ತೆಗಿಳಿಯದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು
KSRTC BMTC Employees Protest; ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬಂದ್ ಆರಂಭಿಸಿದ್ದಾರೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೆಲಸಕ್ಕೆ ಗೈರು ಹಾಜರಿ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಮುಂದಾಗಿದೆ. ಸುಗಮ ಸಂಚಾರಕ್ಕೆ ತನ್ನದೇ ಆದ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಭಾಗಶಃ ಬಂದ್ ಇದ್ದು, ಹಲವೆಡೆ ಬಿಎಂಟಿಸಿ ಬಸ್ಗಳು ಸಂಚರಿಸುತ್ತಿವೆ.

ಬೆಂಗಳೂರು, ಆಗಸ್ಟ್ 5: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ (Karnataka Transport Strike) ಆರಂಭಿಸಿದ್ದಾರೆ. ಇದರಿಂದಗಿ ಸಾರ್ವಜನಿಕರಿಗೆ ಆತಂಕ ಶುರುವಾಗಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್‌ಗಳನ್ನೇ (BMTC, KSRTC Buses) ಅವಲಂಬಿಸಿರುವ ಜನರು ಕೆಲಸಗಳಿಗೆ, ಶಾಲೆಗಳಿಗೆ ಕಾಲೇಜುಗಳಿಗೆ ಹೋಗಲು ಪರದಾಡಬೇಕಾದ ಆತಂಕದಲ್ಲಿದ್ದಾರೆ. ಹೀಗಿದ್ದರೂ, ಯಾವುದೇ ಚಿಂತೆ ಬೇಡ ಎಂದು ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅಭಯ ನೀಡಿದೆ. ಯಾಕೆಂದರೆ, ಸಾರಿಗೆ ನಿಗಮಗಳು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಭಾಗಶಃ ತಟ್ಟಿದೆ. ಹಲವೆಡೆ ಬಸ್ಗಳು ಸಂಚರಿಸುತ್ತಿವೆ. ಏರ್ಪೋರ್ಟ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.
ಸಾರ್ವನಿಕರಿಗೆ ತೊಂದರೆ ತಪ್ಪಿಸಲು ಸಾರಿಗೆ ಇಲಾಖೆ ಕ್ರಮಗಳೇನು?
- ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ
- ಖಾಸಗಿ ಶಾಲಾ ವ್ಯಾನ್‌ಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಅವಕಾಶ
- ಹೆಚ್ಚುವರಿ ಟ್ರಿಪ್ ಮೆಟ್ರೋ ರೈಲುಗಳನ್ನ ನಿಯೋಜಿಸಲು ಸೂಚನೆ
- ರೈಲ್ವೆ ಇಲಾಖೆಯು ಒಳ ಜಿಲ್ಲೆ ರೈಲುಗಳ ಸಂಚಾರ ಹೆಚ್ಚಿಸಬೇಕು
- ಡಿಸಿ, ಎಸ್‌ಪಿಗಳು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು
ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಸಾರಿಗೆ ಮುಷ್ಕರದಿಂದಾಗಿ ಬಿಎಂಟಿಸಿ ಬಸ್‌ಗಳ ಸಂಚಾರ ಭಾಗಶಃ ಸ್ಥಗಿತವಾಗಿದೆ. ಹೀಗಾಗಿ, ಬೆಂಗಳೂರು ಒಂದರಲ್ಲೇ 4 ಸಾವಿರ ಖಾಸಗಿ ಬಸ್‌ಗಳನ್ನ ನೀಡುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಸಾರಿಗೆ ಆಯುಕ್ತರು ಬೇಡಿಕೆ ಇಟ್ಟಿದ್ದಾರೆ. ರಾಜ್ಯಾದ್ಯಂತ 11 ಸಾವಿರ ಬಸ್ ಕೇಳಿದ್ದಾರೆ. ಆದರೆ, ಇನ್ನೂ ಅಂತಿಮಗೊಳಿಸಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂದ ನಟರಾಜ್ ಶರ್ಮಾ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬುಧವಾರಕ್ಕೆ ಬಸ್ ನೀಡುವಂತೆ ಕೋರಿದ್ದಾರೆ ಎಂದಿರುವುದು ಹೊಸ ಗೊಂದಲ ಸೃಷ್ಟಿಸಿದೆ.
ಈ ಮಧ್ಯೆ, ಸರ್ಕಾರದ ಸೂಚನೆ ದೊರೆಯುತ್ತಿದ್ದಂತೆಯೇ ಜಿಲ್ಲೆಗಳ ಸಾರಿಗೆ ನಿಗಮದ ಮುಖ್ಯಸ್ಥರು ಪ್ರತ್ಯೇಕ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳನ್ನೇ ಇಳಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಸೇರಿದ 85 ಸಿಬ್ಬಂದಿಯನ್ನು ಬಳಸಿ ಚಾಲನೆ ಮಾಡಲು, ಖಾಸಗಿಯಾಗಿ ನೇಮಕವಾದ 100 ಸಿಬ್ಬಂದಿ ಬಳಸಲ ತೀರ್ಮಾನಿಸಲಾಗಿದೆ. ಖಾಸಗಿ ಬಸ್ ಮತ್ತು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ದಾವಣಗೆರೆಯಲ್ಲಿ ಪ್ರಯಾಣಿಕರ ನೆರವಿಗೆ ಸಹಾಯವಾಣಿ
ದಾವಣಗೆರೆ ಜಿಲ್ಲೆಯಲ್ಲಿರುವ 126 ರೂಟ್‌ಗಳ ಪೈಕಿ 80 ರೂಟ್‌ಗಳಲ್ಲಿಈಗಾಗಲೇ ಖಾಸಗಿ ಬಸ್‌ಗಳ ಸಂಚಾರವಿದೆ. ಉಳಿದ 46 ರೂಟ್‌ಗಳಿಗೂ ಖಾಸಗಿ ಬಸ್ ನಿಯೋಜನೆ ಮಾಡುವ ಸಾಧ್ಯತೆಯಿದೆ. ಇದಕ್ಕಾಗಿ 98 ಖಾಸಗಿ ಬಸ್‌ಗಳನ್ನ ಬಳಸಿಕೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ತುರ್ತು ಸಹಾಯವಾಣಿಯನ್ನೂ ಆರಂಭಿಸಲಾಗಿದೆ. KSRTC ನಿಯಂತ್ರಣ ಕೊಠಡಿ ಫೋನ್ ನಂಬರ್ 70220300175, ಪ್ರಾದೇಶಿಕ ಸಾರಿಗೆ ಕಚೇರಿ ದೂರವಾಣಿ ಸಂಖ್ಯೆ 08192259848, ದಾವಣಗೆರೆ ಪೊಲೀಸ್ ಕಂಟ್ರೋಲ್ ರೂಂ ನಂಬರ್ 9480803200, ಡಿಸಿ ಕಚೇರಿ ಸಹಾಯವಾಣಿ ಸಂಖ್ಯೆ 1077ಕ್ಕೆ ಸಂಪರ್ಕಿಸಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರಕ್ಕೆ 100 ಗುತ್ತಿಗೆ ನೌಕರರನ್ನ ಮತ್ತು 65 ಟ್ರೈನಿ ಸಿಬ್ಬಂದಿಯನ್ನು ಬಳಸಿಕೊಂಡು 80 ಬಸ್‌ಗಳ ಸಂಚಾರ ಮಾಡಿಸಲ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಖಾಸಗಿ ಬಸ್, ಆಟೋ, ಶಾಲಾ ವಾಹನಗಳನ್ನೂ ಬಳಸಲು ನಿರ್ಧರಿಸಿದ್ದಾರೆ. ಸರ್ಕಾರಿ ಬಸ್ ದರದಲ್ಲೇ ಸ್ಥಳೀಯವಾಗಿ ಖಾಸಗಿ ವಾಹನಗಳ ಬಳಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಎಫೆಕ್ಟ್: ರಸ್ತೆಗಳಿದ ಖಾಸಗಿ ವಾಹನಗಳು
ಚಿಕ್ಕಬಳ್ಳಾಪುರದಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಖಾಸಗಿ ಬಸ್‌ಗಳ ಮೊರೆ ಹೋಗಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. 400ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಸರ್ಕಾರಿ ಬಸ್ ನಿಲ್ದಾಣಗಳಿಂದಲೇ ಖಾಸಗಿ ಬಸ್‌ಗಳ ಸಂಚಾರ ನಡೆಸಲಿದ್ದು, ಸರ್ಕಾರಿ ಬಸ್ ಪ್ರಯಾಣದಷ್ಟೇ ಹಣ ಪಡೆಯಲು ಸೂಚಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಸಾರಿಗೆ ನೌಕರರಿಗೆ ರಜೆ ರದ್ದು ಮಾಡಿ ಆದೇಶಿಸಲಾಗಿದೆ. ಕೆಲಸಕ್ಕೆ ಹಾಜರಾಗದಿದದರೆ ‘ನೋ ವರ್ಕ್ ನೋ ಸ್ಯಾಲರಿ’ ಪಾಲಸಿ ಅಳವಡಿಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ರವಾನಿಸಲಾಗಿದೆ.
ಹಾಸನದಲ್ಲಿ ಸೋಮವಾರದಿಂದಲೇ ಬಸ್ ಬಂದ್
ಹಾಸನದಲ್ಲಿ ಸೋವಾರವೇ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನದಿಂದಲೇ ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ಚಿತ್ರದುರ್ಗದಲ್ಲೂ ರಾತ್ರಿಯೇ ಸಾರಿಗೆ ನೌಕರರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಕಾದು ನೋಡಲು ಮುಂದಾದ್ರಾ ಕೆಎಸ್ಆರ್ಟಿಸಿ ಅಧಿಕಾರಿಗಳು?
ಒಂದೆಡೆ ಹಲವು ಜಿಲ್ಲೆಗಳಲ್ಲಿ ಮುಷ್ಕರ ಎದುರಿಸಲು ಅಧಿಕಾರಿಗಳು ಸಿದ್ಧವಾಗಿದ್ದರೆ ಮತ್ತಷ್ಟು ಜಿಲ್ಲೆಗಳಲ್ಲಿ ಕಾದು ನೋಡಲು ಮುಂದಾಗಿದ್ದಾರೆ. ಬಳ್ಳಾರಿಯಲ್ಲಿ ಸಿಬ್ಬಂದಿ ಕೆಲಸಕ್ಕೆ ಬರುತ್ತೇವೆ ಎಂದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನೆಯ ಸುಳಿವು ಇದೆ. ಹೀಗಾಗಿ, ಧಾರವಾಡ, ಮೈಸೂರು, ವಿಜಯಪುರ, ಕೊಪ್ಪಳ, ದಕ್ಷಿಣ ಕನ್ನಡ, ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡೇ ಅಂತಿಮ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನ ತೆರೆದಿಟ್ಟುಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Tue, 5 August 25




