ಬೆಂಗಳೂರಿನಲ್ಲಿ ರೌಡಿಶೀಟರ್ ಅಟ್ಟಹಾಸಕ್ಕೆ ಅಮಾಯಕ ಬಲಿ: ಚಿಕಿತ್ಸೆಗೆ ಹಣವಿಲ್ಲದೇ ನರಳಿ ನರಳಿ ಪ್ರಾಣಬಿಟ್ಟ
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಾಲ್ವರು ರೌಡಿಗಳು ಕುಡಿದ ಮತ್ತಿನಲ್ಲಿ ಅಮಾಯಕ ಪ್ರೇಮ್ ಎಂಬುವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ರೌಡಿಶೀಟರ್‌ಗಳಾದ ವಿಶಾಲ್, ಪುನೀತ್, ಹೇಮಂತ್‌ರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಎಂಬ ರೌಡಿಶೀಟರ್‌ಗಾಗಿ ಹುಡುಕಾಟ ನಡೆಯುತ್ತಿದೆ. ಈ ಘಟನೆಯಿಂದ ಪೀಣ್ಯ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರು, ಆಗಸ್ಟ್ 04: ಕುಡಿದ ಅಮಲಿನಲ್ಲಿದ್ದ ನಾಲ್ವರು ರೌಡಿಗಳು ಡ್ಯಾಗರ್ನಿಂದ ಇರಿದು ಅಮಾಯಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಪೀಣ್ಯ (Peenya) ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ವಿಶಾಲ್, ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ನವೀನ್, ಹೇಮಂತ್, ಪುನೀತ್ ಕುಡಿದು ಬಂದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಬಳಿ ಗಲಾಟೆ ಮಾಡುತ್ತಿದ್ದರು. ರೌಡಿಗಳು ಕುಡಿದ ಅಮಲಿನಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದರು.
ಈ ವೇಳೆ ಸ್ನೇಹಿತರ ಜೊತೆ ಹೋಗುತ್ತಿದ್ದ ಪ್ರೇಮ್ನನ್ನು ರೌಡಿಗಳ ಗ್ಯಾಂಗ್ ಅಡ್ಡಗಟ್ಟಿದೆ. ಅನಗತ್ಯವಾಗಿ ಪ್ರೇಮ್ ಜೊತೆ ಜಗಳ ತೆಗೆದು ಆತನ ಕೈಗೆ ಡ್ಯಾಗರ್ನಿಂದ ಇರಿದು ಹಲ್ಲೆ ಮಾಡಿದೆ. ಈ ವೇಳೆ, ಮಧ್ಯಪ್ರವೇಶಿಸಿದ ಪ್ರೇಮ್ನ ಸ್ನೇಹಿತ ಮಾದೇಶ ಜಗಳ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪ್ರೇಮ್ನನ್ನು ಅಡ್ಮಿಟ್ ಮಾಡುವಂತೆ ಹೇಳಿದ್ದಾರೆ. ಆದರೆ, ಚಿಕಿತ್ಸೆಗೆ ಹಣವಿಲ್ಲವೆಂದು ಮಾದೇಶ್ ಸ್ನೇಹಿತ ಪ್ರೇಮ್ಗೆ ಪ್ರಥಮ ಚಿಕಿತ್ಸೆ ಕೊಡಿಸಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಮಾದೇಶ್, ಪ್ರೇಮ್ ಕೆಲಸ ಮಾಡುತ್ತಿದ್ದ ಸರ್ವಿಸ್ ಸ್ಟೇಷನ್ನಲ್ಲೇ ಆತನನ್ನು ಮಲಗಿಸಿ ತೆರಳಿದ್ದಾನೆ.
ಇದನ್ನೂ ಓದಿ: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿಯಿಂದ ಅಸಭ್ಯ ವರ್ತನೆ!
ಸ್ವಲ್ಪ ಸಮಯ ಬಿಟ್ಟು ಮಾದೇಶ, ಪ್ರೇಮ್ನನ್ನು ನೋಡಲು ಬಂದಿದ್ದನು. ಅಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ಪ್ರೇಮ್ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ರೌಡಿಶೀಟರ್‌ಗಳಾದ ವಿಶಾಲ್, ಪುನೀತ್, ಹೇಮಂತ್ನನ್ನು ಬಂಧಿಸಿದ್ದಾರೆ. ಮತ್ತೋರ್ವ ರೌಡಿಶೀಟರ್ ನವೀನ್ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರೇಮ್ ಕೊಲೆ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Mon, 4 August 25




