ಇರುವ ಕ್ಯಾಂಟೀನ್ ನಿರ್ವಹಣೆ ಬಿಟ್ಟು 20 ಕೋಟಿ ರೂ. ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್ಗಳ ಆರಂಭಿಸಲು ಮುಂದಾದ ಬಿಬಿಎಂಪಿ
ಬೆಂಗಳೂರಿನಲ್ಲಿರುವ ಕೆಲ ಇಂದಿರಾ ಕ್ಯಾಂಟೀನ್ಗಳು ನಿರ್ವಹಣೆಯಾಗದೇ ಸೊರಗಿದ್ದರೆ, ಮೆನು ಬದಲಾಯಿಸುವುದಕ್ಕೂ ಪಾಲಿಕೆ ಮೀನಾಮೇಷ ಎಣಿಸುತ್ತಿದೆ. ಇದೀಗ ಬರೋಬ್ಬರಿ 20 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲು ಹೊರಟಿದೆ. ಇರುವ ಕ್ಯಾಂಟೀನ್ಗಳನ್ನೇ ಸರಿಯಾಗಿ ನಿರ್ವಹಿಸದ ಪಾಲಿಕೆ ಹೊಸ ಕ್ಯಾಂಟೀನ್ ಆರಂಭಿಸಲು ಹೊರಟಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಬೆಂಗಳೂರು, ಆಗಸ್ಟ್ 5: ಬಡಜನರ ಅಕ್ಷಯ ಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್ಗಳನ್ನು (Indira Canteens) ಸರಿಯಾಗಿ ನಿರ್ವಹಣೆ ಮಾಡದೇ ಸರ್ಕಾರ ಹಾಗೂ ಪಾಲಿಕೆ (BBMP) ಜನರ ಕೋಪಕ್ಕೆ ಗುರಿಯಾಗಿತ್ತು. ಇತ್ತ ರಾಜಧಾನಿ ಬೆಂಗಳೂರಿನ (Bengaluru) ಹಲವೆಡೆ ಇಂದಿರಾ ಕ್ಯಾಂಟೀನ್ಗಳ ಬಿಲ್ ಬಾಕಿ ಉಳಿಸಿಕೊಂಡು ಕ್ಯಾಂಟೀನ್ಗಳಿಗೆ ಬೀಗ ಬಿದ್ದಿತ್ತು. ಇರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯಲ್ಲೇ ಎಡವಿದ್ದ ಪಾಲಿಕೆ ಇದೀಗ ಹೊಸದಾಗಿ 52 ಕ್ಯಾಂಟೀನ್ ಆರಂಭಿಸಲು ಸಜ್ಜಾಗಿದೆ. ಬರೋಬ್ಬರಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್ಗಳ ನಿರ್ಮಾಣಕ್ಕೆ ಸಜ್ಜಾಗಿದೆ.
2017ರಲ್ಲಿ ವಾರ್ಡ್‌ಗೆ ಒಂದರಂತೆ 198 ಇಂದಿರಾ ಕ್ಯಾಂಟೀನ್ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸೂಕ್ತ ಜಾಗ ಸಿಗದ ಹಿನ್ನೆಲೆಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಈ ಪೈಕಿ ಸದ್ಯ ಸುಮಾರು 160 ಇಂದಿರಾ ಕ್ಯಾಂಟೀನ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ಹೊಸ ಕ್ಯಾಂಟೀನ್ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ.
ಬಿಬಿಎಂಪಿಯ ವಾರ್ಡ್ ಸಂಖ್ಯೆ 198 ರಿಂದ 225ಕ್ಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ 52 ಹೊಸ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಸದ್ಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಗುತ್ತಿಗೆದಾರರ ತಾಂತ್ರಿಕ ಅರ್ಹತೆ ಪರಿಶೀಲನೆ ಪೂರ್ಣಗೊಂಡಿದೆ. ಮುಂದಿನ ವಾರದಲ್ಲಿ ಟೆಂಡರ್ ಬಿಡ್ ಪರಿಶೀಲನೆ ಮಾಡಿ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸಲು ಸೂಚನೆ ನೀಡಲು ಸಿದ್ಧತೆ ನಡೆದಿದೆ.
ಮತ್ತೊಂದೆಡೆ, ಈಗಾಗಲೇ ಇರುವ ಇಂದಿರಾ ಕ್ಯಾಂಟೀನ್ಗಳನ್ನು ನಿರ್ವಹಣೆ ಮಾಡದ ಪಾಲಿಕೆ ಈಗ ಹೊಸ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಸಾರಿಗೆ ಮುಷ್ಕರ: ರಸ್ತೆಗಿಳಿಯದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು, ಖಾಸಗಿ ಬಸ್ಗಳಿಗೆ ಮೊರೆ
ಈಗಾಗಲೇ ಹೊಸ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಹುತೇಕ ಕಡೆ ಜಾಗ ಸಹ ಗುರುತಿಸುವ ಕೆಲಸ ಮಾಡಲಾಗಿದೆ. ಸುಮಾರು 10 ರಿಂದ 12 ಕಡೆ ಸ್ಥಳ ಗುರುತಿಸುವುದು ಬಾಕಿ ಇದೆ. ಬೆಂಗಳೂರಿನಲ್ಲಿ ಹಲವು ಮೂಲಭೂತ ಸೌಕರ್ಯ ಇದ್ದರೂ ಕೂಡ ಅದಕ್ಕೆ ಗಮನಹರಿಸದ ಸರ್ಕಾರದ ನಡೆಗೆ ಜನರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಇಂದಿರಾ ಕ್ಯಾಂಟೀನ್ ಬದಲು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕೊಡಿ ಎಂದು ಜನರು ಆಗ್ರಹಿಸಿದ್ದಾರೆ.



