ಬೆಂಗಳೂರಿನಲ್ಲಿ ಸಿಮ್ ಕರೆಗಳ ಕನ್ವರ್ಟ್ ಜಾಲ: ಸೈಬರ್ ಕ್ರೈಂ ಪೊಲೀಸರಿಂದ ಕೇರಳದ ಇಬ್ಬರ ಬಂಧನ
ಅವರಿಗೆ ವಿದೇಶದಲ್ಲಿರುವ ಬಡ ಕಾರ್ಮಿಕರೇ ಬಂಡವಾಳ. ದೂರದ ದೇಶದಿಂದ ತಮ್ಮವರಿಗೆ ಕರೆ ಮಾಡಬೇಕು ಅಂದರೆ ಅಪಾರ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ. ಅದರೆ, ಬೆಂಗಳೂರಿನ ಈ ಇಬ್ಬರು ಆಸಾಮಿಗಳು ವಿದೇಶಿ ಕರೆಗಳನ್ನು ಕನ್ವರ್ಟ್ ಮಾಡುತ್ತೇವೆಂದು ಕೋಟ್ಯಂತರ ರೂ. ವಂಚಿಸಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು, ಆಗಸ್ಟ್ 5: ಬೆಂಗಳೂರಿನಲ್ಲಿ (Bengaluru) ದೂರವಾಣಿ ಕರೆಗಳನ್ನು ಕನ್ವರ್ಟ್ ಮಾಡಿ ವಂಚಿಸುತ್ತಿದ್ದ ಗ್ಯಾಂಗ್ ಮತ್ತೆ ಪತ್ತೆಯಾಗಿದೆ. ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡಿ ಸರ್ಕಾರ ಮತ್ತು ದೂರಸಂಪರ್ಕ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಲಾಗಿದೆ. ವೈಟ್ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಇಬ್ಬರು ಆರೋಪಿಗಳು ಈ ಸಿಮ್ ಕಾರ್ಡ್ ದಂಧೆ ನಡೆಸುತ್ತಿದ್ದು, ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಬಂಧಿತರು ಕೇರಳ ಮೂಲದವರು
ಕೇರಳ ಮೂಲದ ಮೊಹಮ್ಮದ್ ಸಫ್ಪಾಪ್ ಮತ್ತು ಫಯಾಜ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರು ಕೂಡ ಇಮ್ಮಡಿಹಳ್ಳಿಯ ಮನೆಯಲ್ಲಿ ರಹಸ್ಯವಾಗಿ ಟೆಲಿಫೋನ್ ಎಕ್ಸ್ಚೇಂಜ್ ಇಟ್ಟುಕೊಂಡಿದ್ದರು. ಆ ಮೂಲಕ ವಿದೇಶದಲ್ಲಿ ಕೆಲಸ ಮಾಡುವ ಭಾರತ ಮೂಲದ ಬಡ ಕಾರ್ಮಿಕರನ್ನು ಸಂರ್ಪಕಿಸಿ ಕಡಿಮೆ ಹಣದಲ್ಲಿ ತಾಯ್ನಾಡಿಗೆ ಕರೆ ಮಾಡಿ ತಮ್ಮವರ ಜೊತೆ ಮಾತನಾಡಬಹುದು ಎಂದು ಆಮಿಷವೊಡ್ಡಿ ಅವರ ವಿವರ ಪಡೆಯುತ್ತಿದ್ದರು. ಕಾರ್ಮಿಕರ ದಾಖಲಾತಿ ಪಡೆದು ಸಿಮ್ ಕಾರ್ಡ್ ಮತ್ತು ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಸೆಟಪ್ ತೆರೆದಿದ್ದಾರೆ. ನಂತರ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡಿ ಸರ್ಕಾರ ಮತ್ತು ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚಿಸಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಇಮ್ಮಡಿಹಳ್ಳಿ ಮನೆ ಮೇಲೆ ದಾಳಿ ಮಾಡಿ ಅಲ್ಲಿದ್ದ ಸೆಟಫ್ ಬಾಕ್ಸ್ಗಳು, 702 ಸಿಮ್ ಕಾರ್ಡ್, 9 ಸಿಮ್ ಬಾಕ್ಸ್, 6 ರೌಟರ್, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕರೆಗಳ ಪರಿವರ್ತನೆಯಿಂದ ಆರೋಪಿಗಳಿಗೆ ಹವಾಲ ಮೂಲಕ ತಿಂಗಳಿಗೆ 4-5 ಲಕ್ಷ ರೂ. ಹಣ ಕೂಡ ಬರುತ್ತಾ ಇತ್ತು ಎಂಬುದು ಗೊತ್ತಾಗಿದೆ. ಸದ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಕೂಡ ಇಂಥದ್ದೇ ದಂಧೆ ನಗರದಲ್ಲಿ ಕಂಡು ಬಂದಿತ್ತು. ಆಗ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದರು.
ಆನ್ಲೈನ್ನಲ್ಲಿ ಕಾನೂನು ಸೇವೆ ಹೆಸರಿನಲ್ಲಿ ವಂಚನೆ: ಬೃಹತ್ ಜಾಲ ಪತ್ತೆ
ಆನ್ಲೈನ್ನಲ್ಲಿ ಕಾನೂನು ಸೇವೆ ಒದಗಿಸುತ್ತೆವೆ ಎಂದು ನಕಲಿ ಕಾನೂನು ಸೇವೆ ಒದಗಿಸುತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ಒರ್ವ ವ್ಯಕ್ತಿಗೆ ಸೋಲಾರ್ ಪ್ಲಾಂಟ್ ಅಳವಡಿಸುವುದಾಗಿ ನಂಬಿಸಿ ಒಂದುವರೆ ಕೋಟಿ ರೂ. ವಂಚನೆ ಎಸಗಲಾಗಿತ್ತು. ಈ ಘಟನೆ ಬಳಿಕ, ಹಣ ಕಳೆದುಕೊಂಡವರು ಅನ್ಲೈನ್ನಲ್ಲಿ ಕಾನೂನು ಸೇವೆಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ Quickmoto legal service ಎಂಬ ವೆಬ್‌ಸೈಟ್ ಸಂಪರ್ಕ ಮಾಡಿದ್ದಾರೆ. ನಂತರ ಲೀಗಲ್ ಸರ್ವಿಸ್ ಎಂದು ಟಿಲಿಕಾಲರ್ಗಳ ಮೂಲಕ ಮಾತನಾಡಿದ್ದಾರೆ. ಹೀಗೆ ಹಂತ ಹಂತವಾಗಿ 12.5 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕಾನೂನು ಸೇವೆ ನೀಡಿಲ್ಲ. ಹೀಗಾಗಿ ವಂಚನೆಗೆ ಒಳಗಾದವರು ಸೈಬರ್ ಹೆಲ್ಪ್ ಲೈನ್ 1930 ಮೂಲಕ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಕೇಸ್ ಸಿಸಿಬಿಗೆ ವರ್ಗಾವಣೆ ಆಗಿತ್ತು. ತನಿಖೆ ವೇಳೆ, ಕಸ್ತೂರಿ ನಗರದಲ್ಲಿ ಇಂಡಿಯಾ ಲೀಗಲ್ ಸರ್ವಿಸ್ ಎಂದು ಕಚೇರಿ ಮಾಡಿಕೊಂಡಿರುವುದು ಹಾಗು ಇದೊಂದು ಬೃಹತ್ ಜಾಲ ಎಂಬುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್ ಅಟ್ಟಹಾಸಕ್ಕೆ ಅಮಾಯಕ ಬಲಿ: ಚಿಕಿತ್ಸೆಗೆ ಹಣವಿಲ್ಲದೇ ನರಳಿ ನರಳಿ ಪ್ರಾಣಬಿಟ್ಟ
ಆರೋಪಿಗಳು Zoiper -5 ಎನ್ನುವ VoIP (voice over internet protocol) ಆಧಾರಿತ ಅಪ್ಲಿಕೇಶನ್ ಬಳಸಿ ಸೈಬರ್ ವಂಚನೆ ಮಾಡಿದ್ದರು. ಅದರಲ್ಲೂ ಈ ಹಿಂದೆ ಸೈಬರ್ ವಂಚನೆಗೆ ಒಳಗಾಗಿದ್ದವರನ್ನು ಮತ್ತೆ ಸಂಪರ್ಕ ಮಾಡಿಕೊಂಡು ಅವರಿಗೆ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿ ಮತ್ತೆ ಹಣ ಪಡೆದು ವಂಚನೆ ಮಾಡಿದ್ದರು. ಈ ಪ್ರಕರಣ ಕಿಂಗ್ ಪಿನ್ ತೋಫುಲ್ ಮಹಮದ್ ಅರೆಸ್ಟ್ ಮಾಡಿದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ಆರೋಪಿಗಳು ಇಂಡಿಯಾ ಲೀಗಲ್ ಎನ್ನುವ ನಕಲಿ ಕಂಪನಿ ತೆರೆದಿರುವುದನ್ನು ಪತ್ತೆಮಾಡಿದ್ದಾರೆ. ಈ ಕಂಪನಿಯಲ್ಲಿ ಹನ್ನೆರಡು ಜನರು ಟೆಲಿಕಾಲರ್ಗಳನ್ನು ನೇಮಿಸಿಕೊಂಡು ಕೃತ್ಯ ಎಸಗಿದ್ದರು. ಪ್ರಮುಖ ಆರೋಪಿಯ ಸಹೋದರ ಒರ್ವ ದುಬೈಯಲ್ಲಿ ನಕಲಿ ಕಂಪನಿ ತೆರದು ಸೈಬರ್ ವಂಚನೆ ಮಾಡಿರುವುದು ಪತ್ತೆಯಾಗಿದ್ದು, ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



