Lockup Death?: ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರ ವಿಚಾರಣೆ ವೇಳೆ ಗಾಂಜಾ ವ್ಯಸನಿ ಸಾವು

| Updated By: ಆಯೇಷಾ ಬಾನು

Updated on: Nov 12, 2022 | 12:33 PM

ಗಾಂಜಾ ಕೇಸ್​ನಲ್ಲಿ ವಶಕ್ಕೆ ಪಡೆದಿದ್ದ ಬಸನಗೌಡ ಪಾಟೀಲ್​ ಎಂಬುವವರು ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದು ಇದರ ಹಿಂದೆ ಅನೇಕ ಅನುಮಾನಗಳು ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ಕೇಸ್ ದಾಖಲಾಗಿದ್ದು ತನಿಖೆ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

Lockup Death?: ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರ ವಿಚಾರಣೆ ವೇಳೆ ಗಾಂಜಾ ವ್ಯಸನಿ ಸಾವು
ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರ ವಿಚಾರಣೆ ವೇಳೆ ಬಸನಗೌಡ ಪಾಟೀಲ್ ಸಾವು
Follow us on

ಬೆಳಗಾವಿ: ಗಾಂಜಾ(Ganja) ಕೇಸ್​ನಲ್ಲಿ ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರ ವಶದಲ್ಲಿದ್ದ ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಪಾಟೀಲ್(45) ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

ಗಾಂಜಾ ಕೇಸ್​ನಲ್ಲಿ ಬಸನಗೌಡ ಪಾಟೀಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬೆಲ್ಲದ ಬಾಗೇವಾಡಿಯಿಂದ ಬೆಳಗಾವಿಗೆ ಕರೆತಂದು ವಿಚಾರಣೆ ನಡೆಸಿದ್ದು ಈ ವೇಳೆ ಬಸನಗೌಡ ಪಾಟೀಲ್ ಅಸ್ವಸ್ಥಗೊಂಡರು. ಬಳಿಕ ಪೊಲೀಸರು ಬಸನಗೌಡ ಪಾಟೀಲ್​ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಿಸದೆ ಬಸನಗೌಡ ಪಾಟೀಲ್ ಮೃತಪಟ್ಟಿದ್ದಾರೆ. ಪೊಲೀಸರ ವಶದಲ್ಲಿದ್ದಾಗ ಬಸನಗೌಡ ಸಾವು ಎಂದು ಕೇಸ್​ ದಾಖಲಾಗಿದ್ದು ಕಸ್ಟೋಡಿಯಲ್​ ಡೆತ್​ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಭೇಟಿ ನೀಡಿ ಮೃತ ಆರೋಪಿಯ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಮಾತನಾಡಿದ ಅವರು, ಹಳೇ ಪ್ರಕರಣವೊಂದರ ಸಂಬಂಧ ಬಸವನಗೌಡ ಪಾಟೀಲ್ ಎಂಬಾತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ಪೊಲೀಸ್ ವಶದಲ್ಲಿ ಇರುವ ಸಂದರ್ಭದಲ್ಲಿ ವಾಂತಿ, ಬೆವರು ಬಂದಿದೆ. ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಠಾಣೆಗೆ ಕರೆದುಕೊಂಡ ಬಂದ ಮೇಲೆ ವಾಂತಿ, ಬೆವರು ಜಾಸ್ತಿ ಆಗಿದೆ. ಹೀಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯಾಘಾತ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ತಕ್ಷಣ ಇಸಿಜಿ ಸೇರಿ ಚಿಕಿತ್ಸೆ ಕೊಡಿಸಿದ್ರು ಪ್ರಯೋಜನ ಆಗಿಲ್ಲ. ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಸನಗೌಡ ಪಾಟೀಲ್ ಮೃತಪಟ್ಟಿದ್ದಾರೆ. ತಾಂತ್ರಿಕವಾಗಿ ಇದು ಪೊಲೀಸ್ ಕಸ್ಟೋಡಿಯಲ್ ಡೆತ್ ಪ್ರಕರಣ ಎಂದು ಕೇಸ್ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದ ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿದೆ. ಯಾವುದೇ ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಸ್ಟೊಡಿಯಲ್ ಡೆತ್ ಬಗ್ಗೆ ಸಿಐಡಿಯಿಂದ ಪ್ರಕರಣ ತನಿಖೆ ನಡೆಯಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪೊಲೀಸರ ನಿರ್ಲಕ್ಷ್ಯಕ್ಕೆ ಬಲಿಯಾದನಾ 45 ವರ್ಷದ ಆರೋಪಿ?

ಬೆಲ್ಲದ ಬಾಗೇವಾಡಿಯಿಂದ ಬೆಳಗಾವಿಗೆ ಬಸನಗೌಡ ಪಾಟೀಲ್​ನನ್ನು ಪೊಲೀಸರು ಕರೆತರುತ್ತಿದ್ದ ವೇಳೆ ಕಾಕತಿ ಬಳಿ ಬಸನಗೌಡ ಪಾಟೀಲ್​ರ ಆರೋಗ್ಯದಲ್ಲಿ ಏರುಪೇರಾಗಿತ್ತಂತೆ. ಆಗ ಪೊಲೀಸರು ಕಾಕತಿಯ ಖಾಸಗಿ ಕ್ಲಿನಿಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಳಗಾವಿ ಗ್ರಾಮೀಣ ಠಾಣೆಗೆ ಕರೆತಂದಿದ್ದಾರೆ. ಬಳಿಕ ಠಾಣೆಯಲ್ಲೂ ಬಸನಗೌಡ ಪಾಟೀಲ್ ಮತ್ತೆ ಅಸ್ವಸ್ಥಗೊಂಡಿದ್ದಾರೆ. ಬಳಿಕ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವೇಳೆ ಇಸಿಜಿ ಮಾಡಿಸಿದಾಗ ಹೃದಯಾಘಾತವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಬಸನಗೌಡ ಪಾಟೀಲ್​ರನ್ನ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಆರೋಗ್ಯದಲ್ಲಿ ಏರುಪೇರಾದ ತಕ್ಷಣ ಚಿಕಿತ್ಸೆ ಕೊಡಿಸಿದ್ರೆ ಬಸನಗೌಡ ಪಾಟೀಲ್ ಬದುಕುಲಿಯುತ್ತಿದ್ರು. ಒಬ್ಬ ಆರೋಪಿಯನ್ನ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗುವ ಬದಲು ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಕೊಟ್ಟ ಬಳಿಕವೂ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರದೆ ತಡಮಾಡಿ ಮತ್ತೆ ಆರೋಗ್ಯ ಏರುಪೇರಾದ ಮೇಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಆರೋಪಿ ಬಸನಗೌಡ ಪಾಟೀಲ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ನನ್ನ ತಂದೆಯದ್ದು ಲಾಕಪ್ ಡೆತ್ ಆಗಿದೆ ನನಗೆ ನ್ಯಾಯ ಬೇಕು

ನನ್ನ ತಂದೆಯದ್ದು ಲಾಕಪ್ ಡೆತ್ ಆಗಿದೆ ನನಗೆ ನ್ಯಾಯ ಬೇಕು ಎಂದು ಮೃತ ವ್ಯಕ್ತಿಯ ಪುತ್ರಿ ರೋಹಿಣಿ ಪಾಟೀಲ್ ಕಣ್ಣೀರಿಟ್ಟಿದ್ದಾರೆ. ಬೆಳಗಾವಿಯ ಬಿಮ್ಸ್ ಶವಾಗಾರದ ಬಳಿ ಮಾತನಾಡಿದ ಅವರು, ಸುಳ್ಳು ಕೇಸ್ ಹಾಕಿ ಯಾವುದೇ ಮಾಹಿತಿ ನೀಡದೇ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ನಿನ್ನೆ ರಾತ್ರಿ ಮತ್ತೆ ಫೂನ್ ಮಾಡಿ ನಿಮ್ಮ ತಂದೆಯನ್ನ ಕರೆದುಕೊಂಡು ಹೋಗು ಅಂತಾ ಹೇಳಿದ್ದಾರೆ. ನಾನು ಆಸ್ಪತ್ರೆಗೆ ಬಂದು ನೋಡಿದಾಗ ಜೀವಂತ ಇದ್ದಾರೆ ಅಂತಾ ಹೇಳಿದ್ರೂ. ನಾನು ಪ್ಯಾರಾ ಮೆಡಿಕಲ್ ಸ್ಟೂಡೆಂಟ್ ಆಗಿದ್ದು ಫಲ್ಸ್ ಸೆನ್ಸೆಷನ್ ಆಗಿರಲಿಲ್ಲ. ನನಗೆ ಡೌಟ್ ಬಂದು ಸ್ಟೇಥಸ್ಕೋಪ್ ಕೇಳಿದಾಗ ತಂದೆ ಮೃತಪಟ್ಟಿದ್ದಾರೆ ಅಂದ್ರೂ. ತಂದೆ ಕೈಯಲ್ಲಿ ಹಗ್ಗದಿಂದ ಕಟ್ಟಿದ ಮಾರ್ಕ್ ಇದೆ. ಇದು ಲಾಕಪ್ ಡೆತ್ ಆಗಿದೆ, ನಾನು ಡಿಗ್ರಿ ಮಾಡಬೇಕು. ನಮ್ಮ ಮನೆಯ ನಂದಾದೀಪ ಹಾರಿ ಹೋಗಿದೆ ಅಂತಾ ರೋಹಿಣಿ ಕಣ್ಣೀರಿಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗೆ ನ್ಯಾಯಾಧೀಶರು ಬಂದಾಗ ಎಲ್ಲ ವಿಷಯ ಹೇಳಿದ್ದೇನೆ. ಈ ವೇಳೆ ಪೊಲೀಸರಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ತಂದೆ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.

ವಿಚಾರಣೆಗೆ ಕರೆದು ವ್ಯಕ್ತಿ ಮೇಲೆ ದೌರ್ಜನ್ಯವೆಸಗಿದ ಹೆಡ್​ ಕಾನ್ಸ್​ಟೇಬಲ್

ಇನ್ನು ಮತ್ತೊಂದೆಡೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಹೆಡ್​ ಕಾನ್ಸ್​ಟೇಬಲ್​ ಕೇಶವನಾಯ್ಕ್​ ಎಂಬುವವರು ವಿಚಾರಣೆಗೆ ಕರೆದು ವ್ಯಕ್ತಿ ಮೇಲೆ ದೌರ್ಜನ್ಯವೆಸಗಿದ್ದಾರೆ. ಕೌಟುಂಬಿಕ ಕಲಹ ಸಂಬಂಧ ವಿಚಾರಣೆಗೆ ಕರೆಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಈ ವಿಡಿಯೋ ವೈರಲ್ ಆಗಿದೆ.

ಬಾಯಿಗೆ ಬೂಟು ಇಡುತ್ತೇನೆ ಎಂದು ನಿಂದಿಸಿ, ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಂದಂತೆ ಬೈದು ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಮಾತನಾಡಿದರೆ ಚಿತ್ರಹಿಂಸೆ ನೀಡುವುದಾಗಿ ಹೆಡ್​ ಕಾನ್ಸ್​ಟೇಬಲ್​ ಧಮ್ಕಿ ಹಾಕಿದ್ದಾರೆ. ಸಮಸ್ಯೆ ಏನೆಂದು ಕೇಳದೆ ಹೆಡ್​ಕಾನ್ಸ್​ಟೇಬಲ್​ ದೌರ್ಜನ್ಯ ಎಸಗಿದ್ದು ವಿಡಿಯೋ ವೈರಲ್ ಆಗಿದೆ. ಅಮೃತೂರು ಠಾಣೆ ಪೊಲೀಸರ ದೌರ್ಜನ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

Published On - 8:09 am, Sat, 12 November 22