ಅಪಾಯಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ: ಪ್ರವಾಹದ ಆತಂಕದಲ್ಲಿ ನದಿ ಪಾತ್ರದ ಜನ, ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ

ಪಶ್ಚಿಮ ‌ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದ್ದು, ಜಲಾಶಯದಿಂದ 27 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ.

ಅಪಾಯಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ: ಪ್ರವಾಹದ ಆತಂಕದಲ್ಲಿ ನದಿ ಪಾತ್ರದ ಜನ, ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ
ಅವರಾದಿ - ಮಹಾಲಿಂಗಪುರ ಸಂಪರ್ಕ ಕಲ್ಪಿಸುವ ಬ್ಯಾರೇಜ್ ಮುಳುಗಡೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2022 | 11:13 AM

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಅಪಾಯಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ-ಮಹಾಲಿಂಗಪುರ ಮಾರ್ಗದ ಬ್ಯಾರೇಜ್ ಮುಳುಗಡೆಯಾಗಿದೆ. ಬಾಗಲಕೋಟ ಹಾಗೂ ಬೆಳಗಾವಿ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಮ್ ಬ್ಯಾರೇಜ್​ ಮುಳುಗಿದೆ. ಬ್ಯಾರೇಜ್ ಮುಳುಗಡೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು, ಮೆಕ್ಕೆಜೋಳ ಸೇರಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನಿರಂತರ ಮಳೆಯಿಂದ ನದಿಪಾತ್ರದ ರೈತರು ಕಂಗೆಟ್ಟಿದ್ದಾರೆ. ಇನ್ನೂ ರಬಕವಿ-ಬನಹಟ್ಟಿ ತಾಲ್ಲೂಕು, ಮುಧೋಳ ತಾಲ್ಲೂಕಾ ಘಟಪ್ರಭಾ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಶುರುವಾಗಿದ್ದು, ಎಚ್ಚರಿಕೆಯಿಂದಿರಲು ತಾಲ್ಲೂಕಾಡಳಿತದಿಂದ ಸೂಚನೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಮತ್ತು ಮುಧೋಳ ತಾಲ್ಲೂಕಿನ 35 ಹಳ್ಳಿಗಳು, ರಬಕವಿ-ಬನಹಟ್ಟಿ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

ಘಟಪ್ರಭಾ ನದಿಗೆ 27 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಪಶ್ಚಿಮ ‌ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದ್ದು, ಜಲಾಶಯದಿಂದ 27 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ. ಘಟಪ್ರಭಾ ನದಿಯಲ್ಲಿ ಒಟ್ಟು 49ಸಾವಿರ ಕ್ಯೂಸೆಕ್ ನೀರು ಹೊರ ಹರಿವಿದ್ದು, ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಗೋಕಾಕ್ ‌ನಗರದ ಉಪ್ಪಾರ ಓಣಿ, ದನದ ಮಾರ್ಕೆಟ್, ಮಟನ್ ಮಾರ್ಕೆಟ್‌ಗೆ ನೀರು ನುಗ್ಗಿದೆ. ಸ್ಥಳೀಯ ನಿವಾಸಿಗಳಲ್ಲಿ ‌ಪ್ರವಾಹ ಆತಂಕದ ಭೀತಿಯಲಿದ್ದಾರೆ.

ವೇದಗಂಗಾ, ದೂದಗಂಗಾ ನದಿ ಅಬ್ಬರಕ್ಕೆ ಸೇತುವೆಗಳು ಜಲಾವೃತ

ಅಪಾಯದ ಮಟ್ಟ ಮೀರಿ ವೇದಗಂಗಾ, ದೂದಗಂಗಾ ನದಿ ಹರಿಯುತ್ತಿವೆ. ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಜತ್ರಾಟ-ಭಿವಶಿ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸೇತುವೆ ಜಲಾವೃತವಾಗಿದ್ದು, ನಿಪ್ಪಾಣಿ ತಾಲೂಕಿನ ಎರಡು ಸೇತುವೆಗಳು ಇಂದು ಮುಳುಗಡೆಯಾಗಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸಂಪರ್ಕ ಸೇತುವೆ ಜಲಾವೃತವಾಗಿದ್ದು, ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಕಟ್ಟಿರುವ ಹುಕ್ಕೇರಿ ತಾಲೂಕಿನ ಕುರಣಿ-ಕೊಚರಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ.

ಉಜನಿ ಡ್ಯಾಂನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ವಿಜಯಪುರ: ಜಿಲ್ಲೆಯ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಉಜನಿ ಡ್ಯಾಂನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ಸುತ್ತಮುತ್ತ ಗ್ರಾಮಗಳಲ್ಲಿ ಜಿಲ್ಲಾಡಳಿತ ಡಂಗುರ ಸಾರಿದ್ದು, ನದಿ ತೀರದಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯ ದೇವಣಗಾಂವ, ಶಂಭೆವಾಡ, ಕಡ್ಲೆವಾಡ ಪಿಎ ಗ್ರಾಮಗಳಲ್ಲಿ ಡಂಗುರದ ಮೂಲಕ ಎಚ್ಚರಿಕೆ ನೀಡಲಾಗಿದೆ. ಭೀಮಾ ನದಿ ದಡದಲ್ಲಿ ಅಳವಡಿಸಿದ್ದ ಪಂಪ್​ಸೆಟ್, ವಿದ್ಯುತ್ ಉಪಕರಣ ತೆಗೆದುಕೊಳ್ಳುವಂತೆ ರೈತರಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.