ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಂಐಎಂ ಸೇರಿದಂತೆ ಅನೇಕ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಪಾಲಿಕೆ ಚುನಾವಣೆಗೆ ನಾಯಕರು ಜಟಾಪಟಿ ನಡೆಸುತ್ತಿದ್ದಾರೆ. ಸೆಪ್ಟೆಂಬರ್3 ರಂದು ಕಲಬುರಗಿ ಮಹಾನಗರ ಪಾಲಿಕೆಗೆ ಮತದಾನ ನಡೆಯಲಿದೆ. ಹೀಗಾಗಿ ಇಂದು ಕಲಬುರಗಿ ನಗರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸುತ್ತಿದ್ದು ಪಕ್ಷದ ಅಭ್ಯರ್ಥಿಗಳ ಪರ ಎರಡು ದಿನ ಪ್ರಚಾರ ನಡೆಸಲಿದ್ದಾರೆ. ಇಂದು ಮತ್ತು ನಾಳೆ ಕಲಬುರಗಿ ಪಾಲಿಕೆ ಚುನಾವಣೆಗೆ ಕಾರ್ಯಕರ್ತರ ಸಭೆ, ಪಾದಯಾತ್ರೆ ಮೂಲಕ ಪ್ರಚಾರ ನಡೆಸಲಿದ್ದಾರೆ. ಪಾಲಿಕೆಯ 45 ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ದಿಸುತ್ತಿದ್ದು ಪಾಲಿಕೆ ಚುನಾವಣೆಯನ್ನು ಕುಮಾರಸ್ವಾಮಿ ಗಂಭೀರವಾಗಿ ತಗೆದುಕೊಂಡಿದ್ದಾರೆ.
ಮತ್ತೊಂದೆಡೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ನಾಯಕರು ಮತಬೇಟೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ ಬೆಳಗಾವಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಗಮಿಸಲಿದ್ದಾರೆ. ಸ್ಥಳೀಯ ನಾಯಕರ ಜತೆಗಿಂದು ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ ಬೆಳಗಾವಿ ನಗರದ ಕೆಲ ವಾರ್ಡ್‌ಗಳಲ್ಲಿ ಸಚಿವರು, ಶಾಸಕರಿಂದಲೂ ಇಂದು ಪ್ರತ್ಯೇಕ ಪ್ರಚಾರ ನಡೆಯಲಿದೆ. ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿಯಿಂದ ಕೂಡ ಪ್ರಚಾರ ನಡೆಯಲಿದೆ.
ಪ್ರಚಾರದಲ್ಲಿ ಮರೆಯಾಗುತ್ತಿದೆ ಕೊರೊನಾ ರೂಲ್ಸ್
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪಾಲಿಕೆ ಗದ್ದುಗೆಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ನಿನ್ನೆ ಹುಬ್ಬಳ್ಳಿಯಲ್ಲೇ ಬೀಡು ಬಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈ ನಾಯಕರ ಜೊತೆ ಸರಣಿ ಸಭೆಗಳನ್ನ ಮಾಡಿದ್ರು. ಮತ್ತೊಂದೆಡೆ ಅಭ್ಯರ್ಥಿಗಳು, ಕಾರ್ಯಕರ್ತರು ಕೊರೊನಾ ವೈರಸ್ ಮರೆತು ಪ್ರಚಾರದಲ್ಲಿ ತೊಡಗಿದ್ರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಸಹ ಕೊವಿಡ್ ರೂಲ್ಸ್ ಗೆ ಗುಡ್‌ಬೈ ಹೇಳಿ ಕ್ಯಾಂಪೇನ್‌ನಲ್ಲಿ ತೊಡಗಿದ್ರು. ಅತ್ತ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿಯವರ ಸಭೆಯಲ್ಲೂ ದೈಹಿಕ ಅಂತರ ಮಾಯವಾಗಿತ್ತು.
ಇನ್ನೊಂದೆಡೆ ಸಾರಿಗೆ ಸಚಿವ ಶ್ರೀರಾಮುಲು ಪ್ರಚಾರದ ಅಖಾಡಕ್ಕೆ ಇಳಿದಿದ್ದು.. ಕೊವಿಡ್ ನಿಯಮ ಮರೆತು ಜನ ಜಂಗುಳಿಯೊಂದಿಗೆ ಪಾದಯಾತ್ರೆ ಮಾಡುತ್ತಾ ತಮ್ಮ ಅಭ್ಯರ್ಥಿ ಪರ ಮತಯಾಚಿಸಿದ್ರು.
ಬೆಳಗಾವಿಯಲ್ಲೂ ಕೊವಿಡ್ ರೂಲ್ಸ್ ಬ್ರೇಕ್
ಕುಂದಾನಗರಿ ಬೆಳಗಾವಿಯಲ್ಲಿ ಪಾಲಿಕೆ ಎಲೆಕ್ಷನ್ ಬಿಸಿ ಜೋರಾಗಿಯೇ ಇದೆ. ಆದ್ರೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು.. ಕಾರ್ಯಕರ್ತರು ಮಾತ್ರ ಕೊರೊನಾ ಮರೆತು ಬಿಂದಾಸ್ ಆಗಿ ಮತಬೇಟೆಗಿಳಿದಿದ್ದಾರೆ. ಕೊವಿಡ್ ರೂಲ್ಸ್ ಬ್ರೇಕ್ ಮಾಡಿ ಮತಯಾಚಿಸುತ್ತಿದ್ದಾರೆ.
ಒಟ್ನಲ್ಲಿ, ಅದೆಷ್ಟೇ ಗೈಡ್‌ಲೈನ್ ಹೊರಡಿಸಿದ್ರು ಅಷ್ಟೇ.. ಕೊರೊನಾ ಸವಾರಿ ಮಾಡಿದ್ರು ಅಷ್ಟೇ. ಮೂರನೇ ಅಲೆ ಮನೆ ಬಾಗಿಲಿಗೆ ಬಂದು ನಿಂತ್ರೂ ಬುದ್ದಿ ಕಲಿಯಲ್ಲ ಅನಿಸುತ್ತೆ. ರೂಲ್ಸ್ ಮಾಡೋ ಜನಪ್ರತಿನಿಧಿಗಳಿಂದಲೇ ಹೀಗೆ ರೂಲ್ಸ್ ಬ್ರೇಕ್ ಆದ್ರೆ ಕೊರೊನಾ ಅಟ್ಟಹಾಸ ಮೆರೆಯದೇ ಇನ್ನೇನ್ ಮಾಡುತ್ತೆ ಹೇಳಿ. ಇವತ್ತು ಕೊರೊನಾ ಮರೆತು ಇವರೆಲ್ಲಾ ಮತಬೇಟೆಗಿಳಿದಿದ್ದಾರೆ. ಮುಂದೆ ಅದೇ ಕೊರೊನಾ ನಮ್ಮನ್ನ ಬೇಟೆಯಾಡೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಶಿವಮೊಗ್ಗ ನಗರದ ಜನರ ಪಾಲಿಗೆ ಕೊವಿಡ್ ಸಹಾಯವಾಣಿ: 18004257677ಕ್ಕೆ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಸಂಪರ್ಕಿಸಿ