ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ; ಚಿಕ್ಕೋಡಿ ವ್ಯಾಪ್ತಿಯ 10 ಸೇತುವೆಗಳು ಜಲಾವೃತ, ಜೀವ ಭಯದಲ್ಲಿ ಕೃಷ್ಣಾ ನದಿ ತೀರದ ಜನ

| Updated By: ಆಯೇಷಾ ಬಾನು

Updated on: Jul 15, 2022 | 3:51 PM

ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಚಿಕ್ಕೋಡಿ ವ್ಯಾಪ್ತಿಯ 10 ಸೇತುವೆಗಳು ಜಲಾವೃತಗೊಂಡಿವೆ. ಈ 10 ಸೇತುವೆಗಳು ಜಲಾವೃತದಿಂದ 20 ಹಳ್ಳಿಗಳಿಗೆ ಸಂಪರ್ಕ‌ ಕಡಿತವಾಗಿದೆ. ಇಂದು ಮತ್ತೆ ಕೃಷ್ಣಾ ನದಿ ಒಳಹರಿವು 2 ಅಡಿ ಏರಿಕೆಯಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ; ಚಿಕ್ಕೋಡಿ ವ್ಯಾಪ್ತಿಯ 10 ಸೇತುವೆಗಳು ಜಲಾವೃತ, ಜೀವ ಭಯದಲ್ಲಿ ಕೃಷ್ಣಾ ನದಿ ತೀರದ ಜನ
ಸೇತುವೆಗಳು ಜಲಾವೃತ
Follow us on

ಬೆಳಗಾವಿ: ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ(Karnataka Rains). ಮಳೆಯಿಂದಾಗಿ ಹಲವು ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ವೇದಗಂಗಾ, ದೂದಗಂಗಾ ಪಂಚಾಗಂಗಾ, ಉಪನದಿಗಳಿಂದ ಕೃಷ್ಣಾ ನದಿ(Krishna River) ತುಂಬಿ ಹರಿಯುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯ 10 ಸೇತುವೆಗಳು ಜಲಾವೃತಗೊಂಡಿವೆ.

ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಚಿಕ್ಕೋಡಿ ವ್ಯಾಪ್ತಿಯ 10 ಸೇತುವೆಗಳು ಜಲಾವೃತಗೊಂಡಿವೆ. ಈ 10 ಸೇತುವೆಗಳು ಜಲಾವೃತದಿಂದ 20 ಹಳ್ಳಿಗಳಿಗೆ ಸಂಪರ್ಕ‌ ಕಡಿತವಾಗಿದೆ. ಇಂದು ಮತ್ತೆ ಕೃಷ್ಣಾ ನದಿ ಒಳಹರಿವು 2 ಅಡಿ ಏರಿಕೆಯಾಗಿದೆ. ದೂದ್ಗಂಗಾ ನದಿಯಿಂದ 27,280 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ರಾಜಾಪುರ ಬ್ಯಾರೇಜ್‌ನಿಂದ 99,417 ಕ್ಯೂಸೆಕ್ ನೀರು ರಿಲೀಸ್ ಆಗಿದೆ. ಹೀಗೆ ಒಟ್ಟು 1,26,697 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.

10 ಸೇತುವೆಗಳು ಜಲಾವೃತ
ಇನ್ನು ಕೃಷ್ಣಾ ನದಿ ನೀರಿನಿಂದ ಚಿಂಚಲಿ-ರಾಯಬಾಗ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರು ಸೇತುವೆ, ಮಾಂಜರಿ-ಬಾವನಸೌಂದತ್ತಿ ಬ್ಯಾರೇಜ್ ಸಂಪೂರ್ಣ ಮುಳುಗಡೆಗೊಂಡಿದೆ. ದೂದಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ, ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಭೋಜ ಸೇತುವೆ, ಕುನ್ನೂರ-ಬಾರವಾಡ ಸಂಪರ್ಕ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿರುವ ಭೋಜವಾಡಿ-ಕುನ್ನೊರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ ಸೇತುವೆ, ಮಮದಾಪೂರ-ಹುನ್ನರಗಿ ಸೇತುವೆ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾ ನದಿ ತೀರದ ಜನರಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ. ಹಾಗೂ ಸಾರ್ವಜನಿಕರ ಓಡಾಟಕ್ಕೆ ಅನಾನೂಕೂಲತೆ ಎದುರಾಗಿದೆ.

ಬೆಳಗಾವಿಯಲ್ಲಿ ಐದು ಮನೆಗಳು ಜಲಾವೃತ
ಇನ್ನು ಮತ್ತೊಂದು ಕಡೆ ಬೆಳಗಾವಿಯ ಯಳ್ಳೂರು ಮಾರ್ಗದಲ್ಲಿರೋ ಗಣಪತಿ ದೇಗುಲಕ್ಕೆ ಬಳ್ಳಾರಿ ನಾಲಾ ನೀರು ನುಗ್ಗಿ ಜಲಾವೃತವಾಗಿದೆ. ದೇಗುಲದ ಪಕ್ಕದಲ್ಲಿನ ನೂರಾರು ಎಕರೆ ಗದ್ದೆ ಮುಳುಗಡೆಯಾಗಿದೆ. ಬೆಳಗಾವಿ ನಗರದಲ್ಲಿ ಬಳ್ಳಾರಿ ನಾಲಾ ಆರ್ಭಟ ಜೋರಾಗಿದೆ. ಧಾಮಣೆ ಪ್ರದೇಶ ಜಮೀನಿನಲ್ಲಿ ಕಟ್ಟಿಕೊಂಡಿದ್ದ ಐದು ಮನೆಗಳು ಜಲಾವೃತವಾಗಿವೆ. ಮನೆಯವರು ನೆಲಮಹಡಿ ಬಿಟ್ಟು, 2ನೇ ಮಹಡಿಯಲ್ಲಿ ವಾಸಮಾಡುತ್ತಿದ್ದಾರೆ. ಮನೆಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.