ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್

| Updated By: ಆಯೇಷಾ ಬಾನು

Updated on: Dec 11, 2023 | 1:26 PM

ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ. ಈ ಘಟನೆ ಸಂಬಂಧ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಬೆಳಗಾವಿಗೆ ಭೇಟಿ ನೀಡಿದ್ದು ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಮಲವ್ವಳ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತೆಯಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್
ಗೃಹಸಚಿವ ಡಾ.ಜಿ.ಪರಮೇಶ್ವರ್
Follow us on

ಬೆಳಗಾವಿ, ಡಿ.11: ಚಳಿಗಾಲದ ಅಧಿವೇಶನಕ್ಕಾಗಿ ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಇರುವಾಗ, ಅದೇ ಬೆಳಗಾವಿಯಲ್ಲಿ ಘನಘೋರ, ಅಮಾನವೀಯ ಇಡೀ ಮನುಕುಲವೇ ತಲೆ ತಗ್ಗಿಸುವಂಥಾ ಘಟನೆ ನಡೆದಿದೆ. ಬೆಳಗಾವಿ (Belagavi) ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆ (Woman) ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ (DR G Parameshwar) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕಪಕ್ಕದ ಮನೆಯವರಿಂದ ಮಾಹಿತಿ ಪಡೆದಿದ್ದಾರೆ.

ಮಗ ತಾನು ಪ್ರೀತಿಸಿದ ಯುವತಿ ಜೊತೆ ರಾತ್ರೋ ರಾತ್ರಿ ಓಡಿ ಹೋದ ಎಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ 7 ಜನರನ್ನು ಬಂಧಿಸಲಾಗಿದ್ದು ವಿಚಾರ ತಿಳಿಯುತ್ತಿದ್ದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಬೆಳಗಾವಿಗೆ ಭೇಟಿ ನೀಡಿದ್ದು ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಮಲವ್ವಳ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತೆಯಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮನೆ ಪರಿಶೀಲಿಸಿ, ಓಡಿ ಹೋದ ಯುವಕನ ಅಜ್ಜಿಯಿಂದ ಮಾಹಿತಿ ಪಡೆದಿದ್ದಾರೆ. ಹಾಗೂ ಬೆಳಗಾವಿ ಪೊಲೀಸ್ ಆಯುಕ್ತರಿಂದ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಮನೆ ಮುಂದೆ ನಿಂತಿದ್ದ ಮಹಿಳೆಯರ ಬಳಿ ತೆರಳಿ ಮಾತಾಡಿಸಿ ಮಾಹಿತಿ ಪಡೆದಿದ್ದಾರೆ. ಡಾ.ಜಿ.ಪರಮೇಶ್ವರ್ ಅವರು ಮಹಿಳೆಯರನ್ನು ಮಾತನಾಡಿಸಿದ್ದು, ನಾವು ಮನೆಯಲ್ಲಿರಲಿಲ್ಲ ಬೆಳಗ್ಗೆ ಬಂದಿದ್ದೇವೆ ಎಂದು ಕೆಲ ಮಹಿಳೆಯರು ಉತ್ತರಿಸಿದ್ದಾರೆ. ಆಗ, ಹಲ್ಲೆಗೊಳಗಾದ ಆ ಹೆಣ್ಣುಮಗಳು ಕೂಡ ನಿಮ್ಮತರಾನೇ ಅಲ್ವ. ಏನೇ ಇದ್ರೂ ಸತ್ಯ ಹೇಳಿ, ತನಿಖೆಗೆ ಸಹಕಾರ ಕೊಡಿ ಎಂದು ಸಚಿವರು ವಂಟಮೂರಿ ಗ್ರಾಮಸ್ಥರ ಬಳಿ ಮನವಿ ಮಾಡಿದರು.

ಇನ್ನು ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ಪರಮೇಶ್ವರ್, ನಿನ್ನೆ ರಾತ್ರಿ ‌12.30ರ ಸುಮಾರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ದುಂಡಪ್ಪ ಎಂಬ 24 ವರ್ಷದ ಯುವಕ 18 ವರ್ಷದ ಯುವತಿಯನ್ನು ಕರೆದುಕೊಂಡು ಓಡಿ‌ ಹೋಗಿದ್ದಾರೆ. ಬಳಿಕ ಸಂಬಂಧಿಕರು 10-15 ಜನ ಮನೆಗೆ ಹೋಗಿ ಧ್ವಂಸ ಮಾಡಿದ್ದಾರೆ. ಮಹಿಳೆಯನ್ನು ಬೆತ್ತೆಲೆ ಮಾಡಿ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣರಾದ 7 ಜನರನ್ನು ಬಂಧಿಸಲಾಗಿದೆ. ಇದು ಬಹಳ ಅನಿರೀಕ್ಷಿತ ಘಟನೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಳಗಾವಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, 7 ಜನ ಅರೆಸ್ಟ್

ಓಡಿ ಹೋದ ಪ್ರೇಮಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಇದು ಯಾರಿಗೂ ಗೌರವ ತರುವಂತ ಕೆಲಸ ಅಲ್ಲ. ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು.ಆಸ್ಪತ್ರೆ ಹಾಗೂ ಗ್ರಾಮಕ್ಕೂ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಕಮಲಮ್ಮ ಮಾನಸಿಕವಾಗಿ ನೊಂದಿದ್ದಾಳೆ. ನಗ್ನ ಮಾಡಿ ಹೊಡೆದ ಬಗ್ಗೆ ದುಃಖ ತೋಡಿಕೊಂಡ್ರು. ಮಹಿಳಾ ಸಿಬ್ಬಂದಿ ಮೂಲಕ ಕೌನ್ಸಲಿಂಗ್ ಮಾಡಲಾಗುವುದು. ಮುಂದೆ ಯಾವುದೇ ರೀತಿಯ ಘಟನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಊರಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡ್ತೇವಿ. ಈ ರೀತಿಯ ಪ್ರಕರಣ ಬಹಳ ದುರದೃಷ್ಟಕರ. ಕಾನೂನಿನ ಪ್ರಕರಣ ಕ್ರಮ ವಹಿಸಲಾಗುವುದು ಎಂದರು.

ಘಟನೆ ಹಿನ್ನೆಲೆ

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ದುಂಡಪ್ಪ ನಾಯಕ್ ಅನ್ನೋ ಯುವಕ ಮತ್ತು ಪ್ರಿಯಾಂಕ್ ಅನ್ನೋ ಯುವತಿ ಪರಸ್ಪರ ಪ್ರೀತಿಸ್ತಿದ್ರು. ಇದಕ್ಕೆ ಯುವತಿ ಕುಟುಂಬಸ್ಥರ ವಿರೋಧವಿತ್ತು. ಇಂದು ಯುವತಿ ಪ್ರಿಯಾಂಕಾಗೆ ಬೇರೊಂದು ಯುವಕನ ಜೊತೆ ಮದುವೆ ಮಾಡಿಸಲು ಮುಂದಾಗಿದ್ರು. ಆದ್ರೆ, ನಿನ್ನೆ ರಾತ್ರಿಯೇ ದುಂಡಪ್ಪ ಮತ್ತು ಪ್ರಿಯಾಂಕ್ ಇಬ್ಬರೂ ಊರು ಬಿಟ್ಟು ಓಡಿ ಹೋಗಿದ್ದಾರೆ. ಇದ್ರಿಂದ ಕೆರಳಿದ ಪ್ರಿಯಾಂಕಾ ಕುಟುಂಬಸ್ಥರು, ದುಂಡಪ್ಪನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಕಲ್ಲು ತೂರಿ ಹೆಂಚುಗಳನ್ನ ಧ್ವಂಸ ಮಾಡಿದ್ದಾರೆ. ಅಲ್ದೆ, ದುಂಡಪ್ಪ ತಾಯಿ ಕಮಲವ್ವಳ ಬಟ್ಟೆ ಬಿಚ್ಚಿ, ಮೆರವಣಿಗೆ ನಡೆಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ