ಬೆಳಗಾವಿ: ಮಳೆಗೆ ಕುಸಿದ ಮನೆ, 2 ಇಟ್ಟಿಗೆಗಳಿಂದ ಸಾವಿನ ದವಡೆಯಿಂದ ಪಾರಾದ ಕುಟುಂಬ

| Updated By: ಆಯೇಷಾ ಬಾನು

Updated on: Jul 20, 2024 | 9:49 AM

ಬೆಳಗಾವಿಯಲ್ಲಿ ಮಳೆಯಿಂದಾಗಿ ಅನಾಹುತಗಳು ಹೆಚ್ಚಾಗಿವೆ. ಎರಡು ಗ್ರಾಮಗಳಲ್ಲಿ ಮನೆ ಕುಸಿದು ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೊಸಟ್ಟಿಯಲ್ಲಿ ಮನೆ ಕುಸಿಯುವ ಮುನ್ನ 2 ಇಟ್ಟಿಗೆಗಳು ಬಿದ್ದಿದ್ದು ಎಚ್ಚೆತ್ತ ಕುಟುಂಬಸ್ಥರು ಓಡಿ ಆಚೆ ಬಂದಿದ್ದಾರೆ. ಎಲ್ಲರೂ ಆಚೆ ಬಂದ ಬಳಿಕ ಮನೆ ಕುಸಿದಿದೆ. ಈ ಮೂಲಕ ಇಟ್ಟಿಗೆಗಳು ಕುಟುಂಬದ ಪ್ರಾಣ ಉಳಿಸಿದೆ.

ಬೆಳಗಾವಿ: ಮಳೆಗೆ ಕುಸಿದ ಮನೆ, 2 ಇಟ್ಟಿಗೆಗಳಿಂದ ಸಾವಿನ ದವಡೆಯಿಂದ ಪಾರಾದ ಕುಟುಂಬ
ಮಳೆಗೆ ಕುಸಿದ ಮನೆ, 2 ಇಟ್ಟಿಗೆಗಳಿಂದ ಸಾವಿನ ದವಡೆಯಿಂದ ಪಾರಾದ ಕುಟುಂಬ
Follow us on

ಬೆಳಗಾವಿ, ಜುಲೈ.20: ರಾಜ್ಯದೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಅನಾಹುತಗಳಿಗೇನೂ ಕಮ್ಮಿ ಇಲ್ಲ (Karnataka Rain). ರಸ್ತೆಗಳು ಕೆರೆಯಂತಾಗಿ ಅಲ್ಲಲ್ಲಿ ಗುಂಡಿ ಬೀಳುತ್ತಿದೆ. ಸೇತುವೆಗಳು ಮುಳುಗಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಮಣ್ಣು ಕುಸಿದು ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಬೆಳಗಾವಿ (Belagavi) ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು ಮನೆ ಕುಸಿದಿದೆ. ಅದೃಷ್ಟವಶಾತ್ ಎರಡು ಇಟ್ಟಿಗೆಗಳಿಂದಾಗಿ ಇಡೀ ಕುಟುಂಬ ಸಾವಿನ ದವಡೆಯಿಂದ ಪಾರಾಗಿದೆ. ಮನೆ ಬೀಳುವುದಕ್ಕೂ ಮುನ್ನ ಮರಣ ಮೃದಂಗ ನಡೆಯುವ ಸೂಚನೆ ಕೊಟ್ಟ ಇಟ್ಟಿಗೆಗಳಿಂದ ಕುಟುಂಬ ಬದುಕುಳಿದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೊಸಟ್ಟಿಯಲ್ಲಿ ಮಳೆಗೆ ಮನೆ ಬೀಳುವ ಹಂತಕ್ಕೆ ತಲುಪಿತ್ತು. ಅದೃಷ್ಟವಶಾತ್ ಮನೆ ಬೀಳುವುದಕ್ಕಿಂತ ಮುನ್ನ ಎರಡು ಇಟ್ಟಿಗೆ ಕಲ್ಲುಗಳು ಬಿದ್ದಿವೆ. ಇದನ್ನು ಕಂಡು ಗಾಬರಿಗೊಂಡ ಕುಟುಂಬಸ್ಥರು ಮನೆಯನ್ನು ಬಿಟ್ಟು ಹೊರ ಓಡಿದ್ದಾರೆ. ಕುಟುಂಬಸ್ಥರೆಲ್ಲಾ ಮನೆಯಿಂದ ಆಚೆ ಬಂದ ಬಳಿಕ ಮನೆ ಕುಸಿದು ಬಿದ್ದಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ನಿಂಗಪ್ಪ ಕಮತಗಿ ಎಂಬುವವರಿಗೆ ಸೇರಿದ ಮನೆ ಬಿದ್ದು ಕುಟುಂಬ ಬೀದಿಪಾಲಾಗಿದೆ.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು ಹೆಚ್ಚಾಗ್ತಿವೆ. ಸದ್ಯ ಬಿದ್ದ ಮನೆಯಲ್ಲಿಯೇ ನಿಂಗಪ್ಪ ಕಮತಗಿ ಕುಟುಂಬ ಬೇರೆ ದಾರಿ ಇಲ್ಲದೆ ವಾಸಿಸುವಂತಾಗಿದೆ. ಮನೆಯ ಒಂದು ಗೋಡೆ ಉರುಳಿ ಬಿದ್ದು ಅವಾಂತರವಾಗಿದೆ. ಮನೆಯ 11 ಜನ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಕಮತಗಿ ಕುಟುಂಬ ಸರ್ಕಾರದಿಂದ ಸಿಗುವ ಪರಿಹಾರದ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ಬೆಳಗಾವಿ: ಮಳೆಯಲ್ಲೇ 5 ಕಿ.ಮೀ ಹೊತ್ತು ಸಾಗಿ ಮಹಿಳಾ ರೋಗಿ ಪ್ರಾಣ ಉಳಿಸಿದ ಕಾಡಂಚಿನ ಗ್ರಾಮಸ್ಥರು

ಇನ್ನು ಮತ್ತೊಂದೆಡೆ ಇದೇ ರೀತಿಯ ಘಟನೆ ಮರುಕಳಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ‌ ಗ್ರಾಮದಲ್ಲಿ ನಿರಂತರ ಮಳೆಗೆ ತಡರಾತ್ರಿ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದಂತೆ ಮನೆಯ ಸದಸ್ಯರು ಹೊರ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬಸಪ್ಪ ಹಡಪದ ಎಂಬುವವರಿಗೆ ಸೇರಿದ ಮನೆ ಕುಸಿತವಾಗ್ತಿದ್ದಂತೆ ಐದು ಜನ ಸದಸ್ಯರು ಹೊರ ಬಂದಿದ್ದಾರೆ. ಮನೆಯ ಸಾಮಾಗ್ರಿ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಕುಟುಂಬ ಬೀದಿ ಪಾಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ