ಅದೊಂದು ಚಿಕ್ಕ ಕುಟುಂಬ. ತಾಯಿಗೆ ಆಗಾಗ ಎದೆ ನೋವು ಕಾಣಿಸ್ತಿರೋದ್ರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಬೇಕು ಅಂತಾ ಹೇಳಿದ್ದರು. ತಾಯಿಗೆ ಹೇಗಾದ್ರೂ ಮಾಡಿ ಆಪರೇಷನ್ ಮಾಡಿಸಲೇಬೇಕು ಅಂತ ಮಗ ಹಗಲುರಾತ್ರಿ ದುಡಿದು ಬರೊಬ್ಬರಿ 7 ಲಕ್ಷ ರೂಪಾಯಿ ಕೂಡಿಟ್ಟಿದ್ದ. ಇನ್ನೇನು ನಾಳೆಯೇ ಆಪರೇಷನ್ ಗೆ ಹೋಗಬೇಕು ಅಂತಿರುವಾಗಲೇ ಆ ಕುಟುಂಬ ಭೂಮಿಗೆ ಕುಸಿದು ಹೋಗಿದೆ. ಅಷ್ಟಕ್ಕೂ ಬೆಳಗಾವಿಯಲ್ಲಿ ಕಳೆದ ರಾತ್ರಿ ನಾಲ್ಕು ಗ್ರಾಮದಲ್ಲಿ ಆಗಿದ್ದೇನೂ? ಆ ಒಂದು ಕುಟುಂಬ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ಯಾಕೆ ಅಂತೀರಾ, ಈ ಸ್ಟೋರಿ ನೋಡಿ… ಒಂದು ಕಡೆ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಬಟ್ಟೆಗಳು ಹಾಗೂ ಮನೆಯ ವಸ್ತುಗಳು, ಇನ್ನೊಂದು ಕಡೆ ಬ್ಯಾಟರಿ ಹಿಡಿದು ಕಳ್ಳ ಬೆಕ್ಕಿನ ರೀತಿಯಲ್ಲಿ ಓಡಾಡ್ತಿರೋ ಖದೀಮರ ತಂಡ. ಹಣ ಕಳೆದುಕೊಂಡು ರೋದಿಸುತ್ತಿರುವ ಮಹಿಳೆ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (chikodi) ತಾಲೂಕಿನ ಕರೋಶಿ ಗ್ರಾಮದಲ್ಲಿ. ಕೇವಲ ಕರೋಶಿ ಗ್ರಾಮ ಅಷ್ಟೆ ಅಲ್ಲದೇ ಚಿಕ್ಕೋಡಿ ತಾಲೂಕಿನ ಯಾದಗೂಡ, ಬೆಳಕೂಡ, ಬಂಬಲವಾಡ ಸೇರಿದಂತೆ ಬರೊಬ್ಬರಿ ನಾಲ್ಕು ಗ್ರಾಮಗಳಲ್ಲಿ ತಡರಾತ್ರಿ ಖದೀಮರ (house theft) ತಂಡವೊಂದು ತನ್ನ ಕೈಚಳಕ ತೋರಿಸಿದೆ (burglary).
ಅದರಲ್ಲೂ ಕರೋಶಿ ಗ್ರಾಮದಲ್ಲಿ ಐದು ಮನೆಗಳಿಗೆ ಕನ್ನ ಹಾಕಿದ ಖದೀಮರು ವಿಶಾಲ ಪಾಂಡ್ರೆ ಎನ್ನುವವರ ಮನೆಯಲ್ಲಿದ್ದ ಏಳು ಲಕ್ಷ ರೂಪಾಯಿ ನಗದು, ಹಾಗೂ 12 ಗ್ರಾಂ ಚಿನ್ನದ ಆಭರಣಗಳನ್ನು ಎಗರಿಸಿದ್ದಾರೆ. ತನ್ನ ತಾಯಿಗೆ ಎದೆಗೆ ಎಂಬಂಧಿಸಿದಂತೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದಿದ್ದರಿಂದ ಕಳೆದ ಕೆಲ ತಿಂಗಳಿಂದ ಹಣ ಹೊಂದಿಸಿ ಮನೆಯಲ್ಲಿಟ್ಟಿದ್ದ.
ಏಳು ಲಕ್ಷ ರೂಪಾಯಿ ಶಸ್ತ್ರಚಿಕಿತ್ಸೆಗೆ ಅವಶ್ಯಕತೆ ಇದೆ ಅನ್ನೋ ಕಾರಣಕ್ಕೆ ನಿನ್ನೆವರೆಗೂ ದುಡಿದ ಹಣ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡು ಒಟ್ಟು ಏಳು ಲಕ್ಷ ಹಣ ಕೂಡಿಸಿ ಮನೆಯಲ್ಲಿಟ್ಟು ನಾಳೆ ಆಪರೇಷನ್‌ಗೆ ಅಂತಾ ಮಿರಜ್‌ಗೆ ಕರೆದುಕೊಂಡು ಹೋಗಲು ಪ್ಲ್ಯಾನ್ ಮಾಡಿದ್ದ. ಇದೇ ಕಾರಣಕ್ಕೆ ಸಂಬಂಧಿಕರಿಗೆ ಭೇಟಿಯಾದರೆ ಆಯ್ತು ಅಂತಾ ನಿನ್ನೆ ರಾತ್ರಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದ್ರೇ ಇಂದು ಬೆಳಗ್ಗೆ ಮರಳಿ ಬರುವಷ್ಟರಲ್ಲಿ ಖದೀಮರು ಇಡೀ ಮನೆ ಗುಡಿಸಿ ಗುಂಡಾಂತರ ಮಾಡಿ ಆಪರೇಷನ್ ಗೆ ಅಂತಾ ತೆಗೆದಿಟ್ಟ ಹಣವನ್ನು ಕದ್ದೊಯ್ದಿದ್ದಾರೆ ಅಂತಾ ವಿಶಾಲ ಪಾಂಡ್ರೆ ಅಳಲು ತೋಡಿಕೊಂಡಿದ್ದಾರೆ.
ಇನ್ನು ಕಳ್ಳತನದ ಸುದ್ದಿ ಬೆಳ್ಳಂಬೆಳಗ್ಗೆ ಊರಿನಲ್ಲಿ ಹಬ್ಬುತ್ತಿದ್ದಂತೆ ಕರೋಶಿ ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದರು. ಇನ್ನು ಊರಿನೊಳಗೆ ಅಳವಡಿಸಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಖದೀಮರ ಓಡಾಟದ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಸೆರೆಯಾಗಿವೆ. ಕೀಲಿ ಹಾಕಿದ ಮನೆಗಳನ್ನೆ ಟಾರ್ಗೆಟ್ ಮಾಡಿರುವ ಖದೀಮರ ತಂಡ ಮನೆ ಬೀಗ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗಿದೆ.
ನಾಲ್ಕು ಗ್ರಾಮದಲ್ಲಿ ಲಕ್ಷಾಂತರ ಹಣ, ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ಕಳ್ಳತನ ಮಾಡಿದ್ದಾರೆ. ಎಲ್ಲ ಗ್ರಾಮದಲ್ಲೂ ಒಂದೇ ಮಾದರಿಯಲ್ಲಿ ಕಳ್ಳತನ ಆಗಿದ್ದರಿಂದ ಒಂದೇ ಟೀಂ ಈ ಕೃತ್ಯ ಎಸಗಿದೆ ಎಂಬುದು ಪೊಲೀಸರ ಅಂದಾಜು. ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಚಿಕ್ಕೋಡಿ ಡಿವೈಎಸ್ಪಿ ಬಸವರಾಜ್ ಎಲಿಗಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಷ್ಟಪಟ್ಟು ಅಷ್ಟೋ ಇಷ್ಟೋ ಹಣ ಸೇರಿಸಿ ಅಮ್ಮನಿಗೆ ಶಸ್ತ್ರ ಚಿಕಿತ್ಸೆ ಕೊಡಿಸಬೇಕು ಅಂತ ಮಗ ಕೂಡಿಟ್ಟ ಹಣವನ್ನು ಖದೀಮರ ತಂಡ ಅಬೇಸ್ ಮಾಡಿ ಪರಾರಿಯಾಗಿದೆ. ಇನ್ನು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಈ ಕಳ್ಳತನ ನಡೆದಿದ್ದು, ಮಹಾರಾಷ್ಟ್ರ ರಾಜ್ಯದಿಂದ ಖದೀಮರು ಬಂದು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಎರಡು ಟೀಮ್ ಮಾಡಿಕೊಂಡು ಇದೀಗ ಪೊಲೀಸರು ಫೀಲ್ಡಿಗಿಳಿದಿದ್ದಾರೆ.
ಅದೇನೆ ಇರಲಿ ಶೀಘ್ರವೇ ಖದೀಮರನ್ನ ಹಡೆಮುರಿ ಕಟ್ಟಿ ನೊಂದವರ ವಸ್ತುಗಳನ್ನ ವಾಪಸ್ ಕೊಡಿಸುವ ಕೆಲಸ ಮಾಡಲಿ ಎಂಬುದು ಜನರ ಆಶಯ/ಆಗ್ರಹವಾಗಿದೆ. ಇನ್ನು ಖದೀಮರೋ… ವಿಶಾಲ ಪಾಂಡ್ರೆ ತಾಯಿಯ ಪರಿಸ್ಥಿತಿ ನೋಡಿಯಾದರೂ ಮಾನವೀಯತೆಯ ಕರೆಗೆ ಓಗೊಟ್ಟು ಕದ್ದ ಹಣ ಮಾಲನ್ನು ವಾಪಸ್ ಮಾಡಲಿ.
ವರದಿ: ಸಹದೇವ ಮಾನೆ, ಟಿವಿ9, ಬೆಳಗಾವಿ