ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ

ಬೆಳಗಾವಿಯಲ್ಲಿ ಅಮೆರಿಕನ್ನರಿಗೆ ವಂಚಿಸುತ್ತಿದ್ದ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಅನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಅಂತರಾಷ್ಟ್ರೀಯ ಮಟ್ಟದ ವಂಚನೆ ಬೆಳಗಾವಿಯ ಕಾಲ್ ಸೆಂಟರ್ ಮೂಲಕ ನಡೆಯುತ್ತಿತ್ತು. ಅಲ್ಲಿ 33 ಜನ ದಿನಕ್ಕೆ ನೂರಾರು ಕರೆಗಳನ್ನು ಮಾಡುತ್ತಿದ್ದರು. ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ ಎಂಬುದನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ವಿವರಿಸಿದ್ದಾರೆ. ವಿಡಿಯೋ ಹಾಗೂ ಮಾಹಿತಿ ಇಲ್ಲಿದೆ.

ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಂದ ಮಾಧ್ಯಮಗಳಿಗೆ ಮಾಹಿತಿ
Edited By:

Updated on: Nov 15, 2025 | 9:42 AM

ಬೆಳಗಾವಿ, ನವೆಂಬರ್ 15: ಬೆಳಗಾವಿ (Belagavi) ನಗರದಲ್ಲಿ ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ಬೃಹತ್ ಸೈಬರ್ ವಂಚನೆ (Cyber Fraud) ಗ್ಯಾಂಗ್ ಅನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಒಂದು ಕಾಲ್ ಸೆಂಟರ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜಾಲದಲ್ಲಿ 33 ಮಂದಿ ಶಾಮೀಲಾಗಿದ್ದು, ಪ್ರತಿದಿನ ನೂರಾರು ಕರೆಗಳ ಮೂಲಕ ಅಮೆರಿಕದಲ್ಲಿರುವ ಜನರಿಗೆ ಮೋಸ ಮಾಡುತ್ತಿದ್ದರು. ಈ ಗ್ಯಾಂಗ್‌ಗೆ ತಿಂಗಳಿಗೆ 18,000 ದಿಂದ 45,000 ರೂಪಾಯಿಗಳವರೆಗೆ ಸಂಬಳ ನೀಡಲಾಗುತ್ತಿತ್ತು ಮತ್ತು ಹೆಚ್ಚು ಹಣ ಎಗರಿಸಿಕೊಟ್ಟರೆ ಸಿಕ್ಕರೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಗ್ಯಾಂಗ್​​ ಹೇಗೆ ಬಲೆಗೆ ಬಿತ್ತು ಎಂಬುದನ್ನೂ ವಿವರಿಸಿದ್ದಾರೆ.

ಬೆಳಗಾವಿ ವಂಚನೆ ಗ್ಯಾಂಗ್ ಬಗ್ಗೆ ಪೊಲೀಸರು ಹೇಳಿದ್ದೇನು?


ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ಈ ಗ್ಯಾಂಗ್ ಕನಿಷ್ಠ ಆರು-ಏಳು ತಿಂಗಳಿನಿಂದ ಬೆಳಗಾವಿಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿತ್ತು. ಮಾರ್ಚ್ ತಿಂಗಳಿಂದ ಇವರಿಗೆ ಸಂಬಳ ನೀಡಲಾಗುತ್ತಿದೆ ಎಂಬ ದಾಖಲೆಗಳು ಲಭ್ಯವಾಗಿವೆ. ಅವರು ತಮ್ಮ ಜಾಲವನ್ನು ಇನ್ನಷ್ಟು ವಿಸ್ತರಿಸಲು ಮತ್ತು ಹೆಚ್ಚು ಜನರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಮುಂದಾಗಬಹುದಾಗಿದ್ದ ನೂರಾರು ವಂಚನೆಗಳನ್ನು ತಡೆಗಟ್ಟಲಾಗಿದೆ ಎಂದು ತಿಳಿಸಿದ್ದಾರೆ.

ಈ ವಂಚನೆ ಜಾಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದುದರಿಂದ, ಪೊಲೀಸರು ಹಲವಾರು ಗಂಭೀರ ಸೆಕ್ಷನ್​​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಡೆಂಟಿಟಿ ಥೆಫ್ಟ್ ಮತ್ತು ಚೀಟಿಂಗ್ ಬೈ ಪರ್ಸೋನೇಶನ್‌ಗೆ ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಡಿ ಅನ್ನು ಪ್ರಾರಂಭದಲ್ಲಿ ಅನ್ವಯಿಸಲಾಗಿತ್ತು. ಆದರೆ, ತನಿಖೆಯ ನಂತರ, ಅಪರಾಧಗಳು ಭಾರತದ ಹೊರಗೆ ನಡೆದಿರುವುದರಿಂದ ಐಟಿ ಕಾಯ್ದೆಯ ಸೆಕ್ಷನ್ 75 (ಜುರಿಸ್ಡಿಕ್ಷನ್ ಆಫ್ ಆಫೆನ್ಸ್ ಔಟ್‌ಸೈಡ್ ದಿ ಇಂಡಿಯಾ), ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 48 ಮತ್ತು 49 (ಅಬೆಟ್‌ಮೆಂಟ್ ಆಫ್ ಅಫೆನ್ಸಸ್ ಔಟ್‌ಸೈಡ್ ದಿ ಇಂಡಿಯಾ), ಮತ್ತು ಇಂಡಿಯನ್ ಟೆಲಿಕಮ್ಯುನಿಕೇಷನ್ ಆ್ಯಕ್ಟ್‌ನ ಸೆಕ್ಷನ್ 42 (ನೆಟ್‌ವರ್ಕ್ ಟ್ಯಾಂಪರಿಂಗ್ ಮತ್ತು ಅನಧಿಕೃತ ನೆಟ್‌ವರ್ಕ್ ಸ್ಥಾಪನೆ) ಅನ್ನು ಸಹ ಸೇರಿಸಲಾಗಿದೆ. ಟೆಲಿಕಮ್ಯುನಿಕೇಷನ್ ಆ್ಯಕ್ಟ್ ಅಡಿಯಲ್ಲಿ 50 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಅಲ್ಲದೆ, ಇದು ಸಂಘಟಿತ ಅಪರಾಧ (ಆರ್ಗನೈಸ್ಡ್ ಕ್ರೈಂ) ಎಂದು ಪರಿಗಣಿಸಿ, ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳನ್ನು ಸಹ ಅನ್ವಯಿಸಲಾಗುತ್ತಿದೆ ಎಂದು ಭೂಷಣ್ ಬೋರಸೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲೇ ಕುಳಿತುಕೊಂಡು ಅಮೆರಿಕಾ ನಾಗರಿಕರ ಡಾಲರ್ ಡಾಲರ್ ಹಣ ಎಗರಿಸ್ತಿದ್ದ ಖತರ್ನಾಕ್ ಗ್ಯಾಂಗ್ ಖೆಡ್ಡಾಕ್ಕೆ

ಪೊಲೀಸರು ವಶಪಡಿಸಿಕೊಂಡ ಲ್ಯಾಪ್‌ಟಾಪ್‌ಗಳು ಮತ್ತು ಫೋನ್‌ಗಳನ್ನು ಪರಿಶೀಲನೆ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. ಅಮೆರಿಕನ್ ನಿವಾಸಿಗಳನ್ನು ಗುರಿಯಾಗಿಸಲಾಗಿದ್ದು, ಲ್ಯಾಪ್‌ಟಾಪ್‌ಗಳಲ್ಲಿ ಕರೆ ರೆಕಾರ್ಡ್‌ಗಳು ಲಭ್ಯವಿವೆ. ಅಪರಾಧಿಗಳು ಡಾರ್ಕ್‌ನೆಟ್‌ನಿಂದ ಸೋರಿಕೆಯಾದ ಬ್ಯಾಂಕಿಂಗ್ ಡೇಟಾವನ್ನು ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪಾವತಿಗಳನ್ನು ಹವಾಲಾ ಮೂಲಕ ಭಾರತಕ್ಕೆ ವರ್ಗಾಯಿಸಲಾಗುತ್ತಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸಿಐಡಿ ಮತ್ತು ಡಿಜಿ ಅವರಿಗೆ ಹೆಚ್ಚಿನ ತನಿಖೆಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರು ಯಾರೆಲ್ಲ?

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿಸಿಪಿ (ಲಾ ಅಂಡ್ ಆರ್ಡರ್)ನಾರಾಯಣ್ ಭರಮನಿ, ಎಸಿಪಿ ರಘು, ಇನ್‌ಸ್ಪೆಕ್ಟರ್ ಗಡ್ಡೇಕರ್, ಇನ್‌ಸ್ಪೆಕ್ಟರ್ ಉಸ್ಮಾನ್ ಅವಟಿ ಮತ್ತು ಅವರ ತಂಡ ಪ್ರಮುಖ ಪಾತ್ರ ವಹಿಸಿದೆ ಎಂದು ಭೂಷಣ್ ಬೋರಸೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ವಂಚಕರು ಬಾಡಿಗೆಗೆ ಪಡೆದಿದ್ದ ಕುಮಾರ್ ಹಾಲ್ ಕಟ್ಟಡದ ಮಾಲೀಕರನ್ನೂ ವಿಚಾರಣೆ ಮಾಡಲಾಗುವುದು. ಕಟ್ಟಡದ ಒಪ್ಪಂದ, ಪಡೆದ ಬಾಡಿಗೆ ಮತ್ತು ಆರ್ಥಿಕ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ