AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬು ಬೆಳೆಗಾರರ ಕಿಚ್ಚಿನ ನಡುವೆ ಚಳಿಗಾಲದ ಅಧಿವೇಶನಕ್ಕೆ ತಯಾರಿ: ಸಿದ್ಧತೆ ಹೇಗಿದೆ?

ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಭದ್ರತೆಗೆ 6 ಸಾವಿರ ಪೊಲೀಸರು ನಿಯೋಜನೆಗೊಂಡಿದ್ದು, ಜಿಲ್ಲಾಡಳಿತ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಆದರೆ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರದ 3300 ರೂ. ಕಬ್ಬಿನ ಬೆಲೆ ನಿರ್ಧಾರದ ಬಳಿಕವೂ ಹಲವು ರೈತರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಈ ಅಧಿವೇಶನವು ರೈತರ ಹೋರಾಟಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಕಬ್ಬು ಬೆಳೆಗಾರರ ಕಿಚ್ಚಿನ ನಡುವೆ ಚಳಿಗಾಲದ ಅಧಿವೇಶನಕ್ಕೆ ತಯಾರಿ: ಸಿದ್ಧತೆ ಹೇಗಿದೆ?
ಸುರ್ವಣ ಸೌಧ
Sahadev Mane
| Edited By: |

Updated on:Nov 14, 2025 | 6:00 PM

Share

ಬೆಳಗಾವಿ, ನವೆಂಬರ್​ 14: ಸುರ್ವಣ ಸೌಧದಲ್ಲಿ ಡಿಸೆಂಬರ್ 8 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನಲೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಅಧಿವೇಶನಕ್ಕೆ ಅಗತ್ಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಭದ್ರತೆಗಾಗಿ 6 ಸಾವಿರ ಪೊಲೀಸರು

ಡಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಎಸ್ಪಿ ಭೀಮಾಶಂಕರ್ ಗುಳೇದ್ ಒಳಗೊಂಡು ಸೇರಿ ಇತರ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಊಟದ ಸಮಿತಿ, ವಸತಿ ಸಮಿತಿ, ಬಂದೋಬಸ್ತ್ ಸಮಿತಿ, ದೂರುಗಳ ಸ್ವೀಕಾರ ಸಮಿತಿ ಸೇರಿದಂತೆ ಆರು ಸಮಿತಿಗಳನ್ನ ಈ ವೇಳೆ ರಚನೆ ಮಾಡಿ ಅದರ ನೇತೃತ್ವವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ನಗರದಲ್ಲಿನ ಖಾಸಗಿ ಹೋಟೆಲ್​ಗಳನ್ನ ಕಂಟ್ರೋಲ್​​ಗೆ ತೆಗೆದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಅಧಿವೇಶನದ ಸಮಯದಲ್ಲಿ ನೆಟ್ವರ್ಕ್ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಕೂಡ ವ್ಯವಸ್ಥೆ ಮಾಡಲಾಗುತ್ತಿದೆ. ಅಧಿವೇಶನದ ವೇಳೆ ಬಂದೋಬಸ್ತ್​​ಗಾಗಿ ಈ ಬಾರಿ 6 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದ್ದು, ಪ್ರತಿಭಟನೆ ನಡೆಸುವವರಿಗೆ ಪೊಲೀಸ್​ ಕಮಿಷನರ್​ ಅನುಮತಿ ಕಡ್ಡಾಯ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿ ಗದ್ದಲ-ಗಲಾಟೆ ಆಗದಂತೆ ಮುಂಜಾಗ್ರತೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ ಮೋಜು-ಮಸ್ತಿಗೆ ನಡೆಯುತ್ತಾ? ಏನಂದ್ರು ಖಾದರ್?

ಧಗಧಗಿಸುತ್ತಾ ರೈತರ ರೋಷಾಗ್ನಿ?

ಮತ್ತೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರ ಕಿಚ್ಚು ಧಗಧಗಿಸುತ್ತಿದ್ದು, ಸರ್ಕಾರದ ಮಧ್ಯ ಪ್ರವೇಶದ ಬಳಿಕವೂ ಹೋರಾಟ ನಿಂತಿಲ್ಲ. ಈ ಬೆಳವಣಿಗೆಯ ನಡುವೆಯೇ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ತಯಾರಿ ಶುರುವಾಗಿದೆ. ಕುಂದಾನಗರಿಯಲ್ಲಿ ನಡೆಯುವ ಅಧಿವೇಶನ ಬರಿ ಹೋರಾಟಗಳಿಗೆ ಸೀಮಿತ ಎನ್ನುವ ಆರೋಪದ ನಡುವೆ, ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳ ಮಾಲಕರ ಮನವೊಲಿಸಿರುವ ಸರ್ಕಾರ, ಟನ್​ ಕಬ್ಬಿಗೆ 3300 ರೂ. ನಿಗದಿಪಡಿಸಿತ್ತು. ಆದರೆ ಈ ನಿರ್ಧಾರವನ್ನ ಕೆಲ ರೈತರು ಮಾತ್ರ ಸ್ವಾಗತಿಸಿದ್ದು, ಬಾಗಲಕೋಟೆ ಸೇರಿ ಹಲವೆಡೆ ಈಗಲೂ ಪ್ರತಿಭಟನೆ ಮುಂದುವರಿದಿದೆ. ಹೀಗಾಗಿ ಸರ್ಕಾರಕ್ಕೆ ದೊಡ್ಡ ಮಟ್ಟದ ಶಾಕ್ ಕೊಡಲು ರೈತರು ಸಿದ್ಧತೆ ನಡೆಸಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:49 pm, Fri, 14 November 25