ಕರ್ನಾಟಕದ ಈ ಗ್ರಾಮದಲ್ಲಿ ಇದ್ದಾರೆ ಪ್ರತಿ ಮನೆಯಲ್ಲೂ ಶಿಕ್ಷಕರು; ಯಾವುದು ಆ ಊರು? ಇಲ್ಲಿದೆ ವಿವರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2023 | 2:47 PM

ನಮ್ಮ ಭಾರತೀಯ ಪರಂಪರೆಯಲ್ಲಿ ಶಿಕ್ಷಕರನ್ನು ದೇವರಿಗೆ ಹೋಲಿಸಿರುತ್ತೇವೆ. ಅಂಧಕಾರದಿಂದ ಬೆಳಕಿನಡೆಗೆ ಅಜ್ಞಾನದಿಂದ ಜ್ಞಾನದ ಮಾರ್ಗದ ಕಡೆಗೆ ನಮ್ಮನ್ನು ಕರೆಯೊಯ್ಯಲು ಬಾಳಿಗೆ ಗುರುವೊಬ್ಬ ಬೇಕೆ ಬೇಕು. ಸದ್ಯ ಈ ಊರಲ್ಲಿ ಯಾವ ಮನೆಗೆ ನೀವು ಹೋದರೂ ಸಹ ಆ ಮನೆಯಲ್ಲಿ ಒಬ್ಬರಾದರೂ ಶಿಕ್ಷಕರು ಸಿಕ್ಕೆ ಸಿಗುತ್ತಾರೆ. ಈ ಊರು ಶಿಕ್ಷಕರ ತವರು ಅಂತಲೇ ಖ್ಯಾತಿ ಹೊಂದಿದೆ. ಅಷ್ಟಕ್ಕೂ ಬರೀ ಶಿಕ್ಷಕರೇ ಇರುವ ಆ ಊರು ಯಾವುದು ಅಂತೀರಾ? ಇಲ್ಲಿದೆ ನೋಡಿ.

ಕರ್ನಾಟಕದ ಈ ಗ್ರಾಮದಲ್ಲಿ ಇದ್ದಾರೆ ಪ್ರತಿ ಮನೆಯಲ್ಲೂ ಶಿಕ್ಷಕರು; ಯಾವುದು ಆ ಊರು? ಇಲ್ಲಿದೆ ವಿವರ
ಶಿಕ್ಷಕರ ಗ್ರಾಮ
Follow us on

ಬೆಳಗಾವಿ, ಸೆ.06: ಜಿಲ್ಲೆಯ ಸವದತ್ತಿ (Savadatti)  ತಾಲೂಕಿನ ಇಂಚಲ ಗ್ರಾಮ(Inchal Village). ಶಿಕ್ಷಣ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಈ ಗ್ರಾಮ ಹೊಸ ಇತಿಹಾಸವನ್ನೆ ನಿರ್ಮಾಣ ಮಾಡಿದೆ. ನಿನ್ನೆಯ(ಸೆ.05) ಶಿಕ್ಷಕರ((Teachers) ದಿನಾಚರಣೆಯ ಹಿನ್ನೆಲೆ ಈ ವಿಶೇಷ ಗ್ರಾಮದ ಪರಿಚಯನ್ನು ನಿಮಗೆ ನಾವು ಮಾಡಿಕೊಡುತ್ತಿದ್ದೆವೆ. ದಶಕಗಳ ಹಿಂದಷ್ಟೆ ಇದು ಅತ್ಯಂತ ಕುಗ್ರಾಮವಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಂತೂ ಈ ಗ್ರಾಮ ಸಾಕಷ್ಟು ಹಿಂದೆ ಬಿದ್ದಿತ್ತು. ಇದೀಗ ಈ ಒಂದೇ ಒಂದು ಗ್ರಾಮದಲ್ಲಿ ಸುಮಾರು ಐದನೂರಕ್ಕೂ ಹೆಚ್ಚು ಶಿಕ್ಷಕರು ಇದ್ದಾರೆ ಎನ್ನುವುದು ವಿಶೇಷ. ಹೌದು, ಇಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ ಶಿಕ್ಷಕರಿದ್ದಾರೆ. ಸದ್ಯ ಅವರೆಲ್ಲ ಪ್ರಾಥಮಿಕ, ಪ್ರೌಢ, ಹಾಗೂ ಕಾಲೇಜುಗಳಿಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಜೀವನ ರೂಪಿಸುತ್ತಿದ್ದಾರೆ.

ಐದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಐದನೂರಕ್ಕೂ ಅಧಿಕ ಮನೆಗಳಿವೆ. ಇನ್ನೂ ಶಿಕ್ಷಣದಿಂದ ವಂಚಿತವಾಗಿದ್ದ ಈ ಗ್ರಾಮದ ಸ್ಥಿತಿ ಗತಿ ಶಿಕ್ಷಣದಲ್ಲಿ ಹಿಂದುಳಿದಿರುವುದನ್ನು ಕಂಡು ಇಂಚಲ ಮಠದ ಶಿವಾನಂದ ಭಾರತಿ ಸ್ವಾಮೀಜಿಯವರು 1986 ರಲ್ಲಿ ಶಿವಾನಂದ ಭಾರತಿ ಶಿಕ್ಷಣ ‌ಸಂಸ್ಥೆಯಿಂದ ಟಿಸಿಹೆಚ್ ಶಿಕ್ಷಣವನ್ನು ಪ್ರಾರಂಭ ಮಾಡಿದರು‌. ಹೀಗೆ ಇಂಚಲ‌ ಗ್ರಾಮ1997ರಲ್ಲಿ ಇದೊಂದೇ ಊರಿನಲ್ಲಿ 50 ಜನ ಶಿಕ್ಷಕರಾಗಿ ಸೆಲೆಕ್ಟ್ ಆದರೆ, ಊರಿನ ಕರಿಗಾರ ಎಂಬ ಮನೆತನದ ಏಳು ಜನ ಶಿಕ್ಷಕರಾಗಿ ಆಯ್ಕೆಯಾಗಿದ್ದು ದಾಖಲೆಯಾಗಿದೆ. ಅಂದಿನಿಂದ ಈ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯಾಗಿ ಇದೀಗ ಅತೀ ಹೆಚ್ಚು ಶಿಕ್ಷಕರಿರುವ ಗ್ರಾಮವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ:Dharmendra Pradhan: ಡಿಜಿಟಲ್ ಕೌಶಲ್ಯಗಳನ್ನು ಸುಧಾರಿಸಲು ‘ಮೆಟಾ’ ಜೊತೆ ಶಿಕ್ಷಣ ಸಚಿವಾಲಯ ಪಾಲುದಾರಿಕೆ

ಇನ್ನು ಈ ಗ್ರಾಮದಲ್ಲಿ ಬರೀ ಶಿಕ್ಷಕರು ಅಷ್ಟೆ ಇಲ್ಲ. ಜೊತೆಗೆ ದೇಶದ ಗಡಿ ಕಾಯುವ ಹೆಮ್ಮೆಯ ಯೋಧರು ಅತೀ ಹೆಚ್ಚಿದ್ದಾರೆ. ಇಲ್ಲಿಯವರೆಗೂ ಸುಮಾರು 350ಕ್ಕೂ ಅಧಿಕ ಯೋಧರು ದೇಶ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗುವುದರ ಜತೆಗೆ ದೇಶಾಭಿಮಾನದ ಬೀಜ ಕೂಡ ಇಲ್ಲಿ ಬಿತ್ತಿ ಬೆಳಸಿದ್ದು ಸ್ವಾಮೀಜಿಯವರು. ಹೌದು 1969 ರಲ್ಲಿ ಇಂಚಲ ಶ್ರೀಗಳಾದ ಶಿವಾನಂದ ಭಾರತಿಯವರು ಇಂಚಲ ಮಠಕ್ಕೆ ಪೀಠಾಧಿಪತಿಗಳಾದರು. ಪಟ್ಟಕ್ಕೇರಿದ ಮಾರನೇ ವರ್ಷದಿಂದಲೇ ಗ್ರಾಮದಲ್ಲಿ ಶ್ರೀಗಳು ವೇದಾಂತ ಪರಿಷತ್ ಆರಂಭಿಸಿದರು.

ಊರಿಗೆ ಶಿಕ್ಷಕರ ಸಂಖ್ಯೆ ಕಡಿಮೆ ‌ಇರುವುದನ್ನು ಗಮನಿಸಿ ಪ್ರೌಢಶಾಲೆ ಪ್ರಾರಂಭಿಸಿದ ಶಿವಯೋಗಿಶ್ವರ

ಹೌದು, ಶಿವಯೋಗಿಶ್ವರರು ಊರಿಗೆ ಶಿಕ್ಷಕರ ಸಂಖ್ಯೆ ಕಡಿಮೆ ‌ಇರುವುದನ್ನು ಗಮನಿಸಿ ಪ್ರೌಢಶಾಲೆ ಪ್ರಾರಂಭಿಸಿದರು. ಹೈಸ್ಕೂಲ್ ಪ್ರಗತಿ ಹೊಂದುತ್ತ ಬಂದಂತೆ ಪಿಯುಸಿ ಕಾಲೇಜು ಪ್ರಾರಂಭ ಮಾಡಿದರು. ಶಿಕ್ಷಣ ಶಾಸ್ತ್ರದಲ್ಲಿ ಮಕ್ಕಳಿಗೆ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳಿಗೆ ಶ್ರೀಗಳು ಪ್ರೇರಣೆ ಮಾಡಿದರು. ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಶಾಸ್ತ್ರದಲ್ಲಿ ಅಧ್ಯಯನ ಮಾಡುವಂತೆ ಪ್ರೇರೆಪಿಸಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕರಾಗುವಂತೆ ಶ್ರೀಗಳು ಮಾಡಿದ್ದಾರೆ.

ಡಿಎಲ್​ಇಡಿ (ಡಿಪ್ಲೋಮಾ ಇನ್ ಎಲೆಮೆಂಟರಿ ಎಜುಕೇಷನ್) ಪ್ರತಿ ವರ್ಷ 80 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಪ್ರತಿ ವರ್ಷ ಅಷ್ಟು ಜನ ಶಿಕ್ಷಕರು ಪಾಸಾಗುತ್ತಿದ್ದಾರೆ‌.‌ ಪ್ರಾರಂಭದಲ್ಲಿ ಟಿಸಿಹೆಚ್ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ಪೀಸ್ ಇಲ್ಲದೆ ಪ್ರವೇಶಾತಿ ಮಾಡಿಸುವಲ್ಲಿ ಶ್ರೀ ಶಿವಾನಂದ ಭಾರತಿ ಸ್ವಾಮೀಜಿಗಳು ಶ್ರಮಿಸಿದ್ದಾರೆ. ಹೀಗಾಗಿ ಈ ಗ್ರಾಮ ‌ಇಂದು ಶಿಕ್ಷಕರ ತವರಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕುಗ್ರಾಮವಾಗಿದ್ದ ಇಂಚಲ ಗ್ರಾಮ ಇಂದು ಸುಶಿಕ್ಷಿತರ ಬೀಡಾಗಿದೆ. ಒಂದು ಮಠ ಗ್ರಾಮದಲ್ಲಿ ಸಾಕಷ್ಟು ಬದಲಾವಣೆಗೆ ಮುನ್ನುಡಿ ಬರೆದಿದೆ. ಮಠಾಧೀಶರು ಮನಸ್ಸು ಮಾಡಿದ್ರೆ, ಬದಲಾವಣೆ ಹೇಗೆ ಮಾಡಬಹುದು ಅನ್ನೋದಕ್ಕೆ ಸ್ವಾಮೀಜಿ ಮಾಡಿದ ಕಾರ್ಯವೇ ಸಾಕ್ಷಿಯಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ