ಚಿಕ್ಕೋಡಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿರುವ ಹಿನ್ನೆಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇನ್ನೊಂದೆಡೆ, ನಿಸ್ಪಕ್ಷ ತನಿಖೆ ನಡೆಯುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಹೀಗಾಗಿ ತನಿಖೆ ಯಾವ ರೀತಿ ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಲು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ (ADGP) ಆರ್.ಹಿತೇಂದ್ರ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಹಿರೇಕೋಡಿಯಲ್ಲಿರುವ ನಂದಿಪರ್ವತ ಆಶ್ರಮಕ್ಕೆ ಭೇಟಿ ನೀಡಿದರು.
ನಂತರ ಮಾತನಾಡಿ ಅವರು, ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ, ತನಿಖೆ ಇನ್ನೂ ಮುಂದುವರಿದಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಶೀಘ್ರವೇ ಚಾರ್ಜ್‌ಶೀಟ್ ಸಲ್ಲಿಸುತ್ತೇವೆ. ಕೋರ್ಟ್‌ನಲ್ಲಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಪೈಶಾಚಿಕ ಕೃತ್ಯವೆಸಗಿದರೂ ಸ್ಪಂದನೆ ಇಲ್ಲ: ಸಿಎಂ ಸಿದ್ದರಾಮಯ್ಯ ವಿರುದ್ಧ ಜೈನಮುನಿ ಗುಣಧರನಂದಿ ಕಿಡಿ
ಪೊಲೀಸರಿಂದ ಸರಿಯಾದ ತನಿಖೆ ಆಗುತ್ತಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ಹಿತೇಂದ್ರ, ಎಫ್ಐಆರ್ ದಾಖಲಾಗಿ ಎರಡು ದಿನ ಮಾತ್ರ ಆಗಿದೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಎಲ್ಲರ ಹೇಳಿಕೆಗಳನ್ನ ನಾನು ಗಮನಿಸಿದ್ದೇನೆ. ಹೀಗಾಗಿಯೇ ಹಿರಿಯ ಅಧಿಕಾರಿಯಾಗಿ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಪ್ರಕರಣದ ತನಿಖೆ ಹೇಗೆ ನಡೆಯುತ್ತಿದೆ ಎಂದು ಪರಿಶೀಲನೆ ಮಾಡುತ್ತಿದ್ದೇನೆ ಎಂದರು.
ಮಠದ ಭಕ್ತರು ತನಿಖೆ ವಿಚಾರವಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ ಎಡಿಜಿಪಿ, ಭಕ್ತರನ್ನು ವಿಶ್ವಾಸಕ್ಕೆ ತಗೆದುಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ ಎಂದರು. ಸರ್ಕಾರ ಏನಾದರೂ ವಿಶೇಷ ನಿರ್ದೇಶನ ನೀಡಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಶಾಕ್ ತಂದಿರುವಂತಹ ಘಟನೆ ಇದು. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ಆಗಬೇಕೆಂಬುದು ಎಲ್ಲರ ಆಪೇಕ್ಷೆ ಇದೆ. ಸರ್ಕಾರ ಕೂಡ ಅದ ರೀತಿ ನಿರ್ದೇಶನ ಕೊಟ್ಟಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ