ಜೈನಮುನಿ ಹತ್ಯೆ ಪ್ರಕರಣ: 400 ಅಡಿ ಆಳದ ಕೊಳವೆ ಬಾವಿಯಲ್ಲಿ ಮೃತದೇಹ ಪತ್ತೆ
ಇಂದು ಹತ್ಯೆಯಾದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಮೃತದೇಹ ಸುಮಾರು 400 ಅಡಿ ಆಳದ ಕೊಳವೆ ಬಾವಿಯಲ್ಲಿ ಕತ್ತರಿಸಿ ಎಸೆಯಲಾಗಿದೆ. 25 ಅಡಿ ಆಳದಲ್ಲಿ ರಕ್ತಸಿಕ್ತ ಸೀರೆ, ಟವೆಲ್ ಪತ್ತೆಯಾಗಿದ್ದು, 30 ಅಡಿ ಆಳದಲ್ಲಿ ತಲೆಯ 2 ಭಾಗ, ಕೈ, ಕಾಲು, ತೊಡೆ, ಹೊಟ್ಟೆ ಸೇರಿದಂತೆ 9 ಭಾಗಗಳು ಪತ್ತೆಯಾಗಿವೆ.
ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜ (Acharya Shri 108 Kamkumarnandi Maharaj) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಗದ್ದೆಯ ಕೊಳವೆಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆಯಾಗಿದೆ. ಸುಮಾರು 400 ಅಡಿ ಆಳದ ಕೊಳವೆ ಬಾವಿಗೆ ಮೃತದೇಹವನ್ನು ಪೀಸ್ ಪೀಸ್ ಮಾಡಿ ಎಸೆಯಲಾಗಿದೆ. ಕೊಳವೆಬಾವಿಯ 25 ಅಡಿ ಆಳದಲ್ಲಿ ರಕ್ತಸಿಕ್ತ ಸೀರೆ, ಟವೆಲ್ ಪತ್ತೆಯಾಗಿದ್ದು, 30 ಅಡಿ ಆಳದಲ್ಲಿ ತಲೆಯ 2 ಭಾಗ, ಕೈ, ಕಾಲು, ತೊಡೆ, ಹೊಟ್ಟೆ ಸೇರಿದಂತೆ 9 ಭಾಗಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ ಸಿಬ್ಬಂದಿಗಳು ಸತತ ಒಂಬತ್ತು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಜೈನಮುನಿ ಮೃತದೇಹ ಪತ್ತೆ ಮಾಡಿದ್ದಾರೆ. ಮೃತದೇಹ ಸಿಕ್ಕ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ನೀಡಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಜೈನಮುನಿಯ ಬರ್ಬರ ಹತ್ಯೆ; ಇಬ್ಬರು ಆರೋಪಿಗಳು ಅರೆಸ್ಟ್
ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಕಣ್ಣೀರು
ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ರಾ ಆರೋಪಿಗಳು?
ಶಾಂತಿಪ್ರಿಯ ಸಮಾಜದ ಸ್ವಾಮೀಜಿಯ ಬರ್ಬರ ಹತ್ಯೆ ತೀವ್ರ ನೋವು ತಂದಿದೆ. ಸಿಎಂ ಇದುವರೆಗೂ ಸಂತಾಪ ಸೂಚಿಸದಿರುವುದು ಆಘಾತವಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಸರ್ಕಾರಕ್ಕೆ ನಮ್ಮಂತ ಅಲ್ಪಸಂಖ್ಯಾತರು ಬೇಡವಾಗಿದೆ. ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು, ಆರೋಗಳಿಗೆ ಶಿಕ್ಷೆ ಆಗಬೇಕು. ಸರ್ಕಾರ ಲಿಖಿತ ಭರವಸೆ ಕೊಡುವವರೆಗೆ ಅನ್ನಾಹಾರ ತ್ಯಾಗ ಮಾಡುತ್ತೇನೆ. ಪ್ರಾಣ ಹೋಗುವವರೆಗೆ ಸಲ್ಲೇಖನ ಮಾಡುತ್ತೇನೆ ಎಂದು ಸ್ವಾಮೀಜಿ ಪಟ್ಟುಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:38 pm, Sat, 8 July 23