ಬೆಳಗಾವಿ, ಮೇ.10: ಪಟ್ಟಣದ ನ್ಯೂ ಗಾಂಧಿನಗರ ಮತ್ತು ಉಜ್ವಲ‌್ ನಗರದಲ್ಲಿ ನಿನ್ನೆ(ಮೇ.10) ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ ಮೊಹಮ್ಮದ್ ಖೈಫ್ ಹಾಗೂ ಹೈಜಲ್ ಎಂಬುವವರ ಮೇಲೆ ಏಕಾಏಕಿ ಬೀದಿ ನಾಯಿಗಳ (stray dogs) ಗ್ಯಾಂಗ್ ದಾಳಿ ಮಾಡಿದೆ. ಈ ವೇಳೆ ಗಮನಿಸಿದ ಹೈಜಲ್ ಕೂಡಲೇ ನಾಯಿಗಳನ್ನ ಓಡಿಸಲು ಬಂದಿದ್ದಾನೆ. ಆದರೆ, ನಾಲ್ಕೈದು ನಾಯಿಗಳು ಇರುವ ಕಾರಣಕ್ಕೆ ಆತನ ಮೇಲೆಯೂ ನಾಯಿಗಳು ದಾಳಿ ನಡೆಸಿವೆ. ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಇಬ್ಬರು ಮಕ್ಕಳನ್ನ ನಾಯಿ ಕಡಿತದಿಂದ ರಕ್ಷಣೆ ಮಾಡಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಹೈಜಲ್ಗೂ ಚಿಕಿತ್ಸೆ ಮುಂದುವರೆದಿದ್ದು ನಾಯಿಗಳ ಅಟ್ಟಹಾಸದಿಂದ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಉಜ್ವಲ ನಗರ ಹಾಗೂ ನ್ಯೂ ಗಾಂಧಿನಗರದ ಜನರಿಗೆ ಹಗಲು ರಾತ್ರಿ ಈ ಬೀದಿ ನಾಯಿಗಳನ್ನು ಕಾಯೋದೆ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ. ಬೇಸಿಗೆ ರಜೆ ಹಿನ್ನಲೆ ಮಕ್ಕಳು ಬೀದಿಯಲ್ಲಿ ಆಟ ಆಡುತ್ತಿದ್ದಾರೆ ಎಂದು ಪೋಷಕರು ಚೂರು ಮೈಮರೆತರೂ ಸಹ ಬೀದಿ ನಾಯಿಗಳು ಮಕ್ಕಳ ಮೇಲೆ ಅಟ್ಯಾಕ್ ಮಾಡುತ್ತಿವೆ. ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ಮನಸೋ ಇಚ್ಛೆ ದಾಳಿ ಮಾಡಿದ್ದು ಇದರಿಂದ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ನಾಯಿ ದಾಳಿ ಆಗ್ತಿರೋದು ಇದೇ ಮೊದಲೇನಲ್ಲ, ಈ ಹಿಂದೆಯೂ ಸಹ ಇದೇ ನ್ಯೂ ಗಾಂಧಿನಗರ ಹಾಗೂ ಉಜ್ವಲ ನಗರದಲ್ಲಿ ದೊಡ್ಡವರ ಮೇಲೂ ಸಹ ನಾಯಿಗಳು ಅಟ್ಯಾಕ್ ಮಾಡಿದ್ದವು. ಒಂದು ವಾರದಲ್ಲಿ ಏಳು ಜನರಿಗೆ ನಾಯಿ ಕಚ್ಚಿದ್ರೇ, ಕಳೆದ ತಿಂಗಳು ಕೂಡ ಸಾಕಷ್ಟು ಜನರಿಗೆ ನಾಯಿ ಕಚ್ಚಿ ಗಾಯ ಮಾಡಿವೆ.
ಇದನ್ನೂ ಓದಿ:Video: ಮನೆಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿ ದಾಳಿ; ಸಿಸಿಟಿವಿಯಲ್ಲಿ ಸೆರೆ
ಕೆಲ ದಿನಗಳ ಹಿಂದಷ್ಟೆ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ನಾಯಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಕುಳಿತುಬಿಟ್ಟಿದ್ದಾರೆ. ಆ ಘಟನೆ ಮಾಸುವ ಮುನ್ನವೇ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿಯಾಗಿದೆ. ಹೀಗಾಗಿ ಅಧಿಕಾರಿಗಳ ಮೇಲೆ ಸ್ಥಳೀಯರು ಗರಂ ಆಗಿದ್ದು, ನಾಯಿ ಹಾವಳಿ ತಪ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮಹಾನಗರ ಪಾಲಿಕೆ ಆವರಣದಲ್ಲಿ ನಾಯಿಗಳನ್ನು ತಂದು ಬಿಟ್ಟು ಪ್ರತಿಭಟನೆ ಮಾಡೋದಾಗಿ ಸಾರ್ವಜನಿಕರು ಅಧಿಕಾರಿಗಳಿಗೆ ಎಚ್ಚರ ನೀಡಿದ್ದಾರೆ.
ಒಟ್ಟಿನಲ್ಲಿ ಶಾಲೆಗೆ ರಜೆ ಎಂದು ಮಕ್ಕಳು ಬೀದಿಯಲ್ಲಿ ಆಟವಾಡಲು ಬಂದರೆ ಬೀದಿ ನಾಯಿಗಳು ಮಕ್ಕಳ ಮೇಲೆ ಎರಗಿ ಕಂಟಕವಾಗ್ತಿವೆ. ಆದಷ್ಟು ಬೇಗ ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಫುಲ್ ಸ್ಟಾಪ್ ಹಾಕಲು ಮಹಾನಗರ ಪಾಲಿಕೆ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಶೀಲರಾಗಬೇಕು ಎನ್ನುವುದು ಬೆಳಗಾವಿಗರ ಜನರ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ