ಬೆಳಗಾವಿ: ಒಂದೂವರೆ ಎಕರೆ ಜಮೀನಿಗಾಗಿ ಚಿಕ್ಕಪ್ಪನನ್ನೇ ಕೊಂದ ಮಗ
ಕೇವಲ ಒಂದೂವರೆ ಎಕರೆ ಜಮೀನಿಗಾಗಿ ಒಂದೇ ಕುಟುಂಬದ ನಡುವೆ ಸಾಕಷ್ಟು ದಿನಗಳಿಂದ ಗಲಾಟೆ ಆಗುತ್ತಿತ್ತು. ಹಿಂದೆ ದುಡ್ಡಿನ ಅವಶ್ಯಕತೆ ಇದ್ದಾಗ ಕಡಿಮೆ ಬೆಲೆಗೆ ಜಮೀನು ಮಾರಾಟ ಮಾಡಿ ಇತ್ತಿಚೇಗೆ ಕಿರಿಕ್ ಶುರು ಮಾಡಿದ್ದರು. ಇನ್ನು ಜಮೀನು ಕೊಡುವುದಿಲ್ಲ ಎಂದಿದ್ದಕ್ಕೆ ಮಗನೇ ಚಿಕ್ಕಪ್ಪನನ್ನ ಹತ್ಯೆ ಮಾಡಿದ್ದಾನೆ. ಅಷ್ಟಕ್ಕೂ ಜಮೀನು ಮಾರಾಟದಲ್ಲಿ ಆದ ಗದ್ದಲ ಎಂತಹದ್ದು ಅಂತೀರಾ?, ಈ ಸ್ಟೋರಿ ಓದಿ.
ಬೆಳಗಾವಿ, ಮೇ.11: ಜಿಲ್ಲೆಯ ಅಥಣಿ(Athani) ತಾಲೂಕಿನ ದಬದಬಹಟ್ಟಿ ಗ್ರಾಮದಲ್ಲಿ ಚಿಕ್ಕಪ್ಪನನ್ನೇ ಕೊಂದು ಹಾಕಿ ಅಟ್ಟಹಾಸ ಮೆರೆದ ಘಟನೆ ನಡೆದಿದ್ದು, ಇದರಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಕೇಶವ್ ಬೋಸಲೆ(47) ಕೊಲೆಯಾದ ದುರ್ದೈವಿ. ಮಗ ಖಂಡೋಬಾ ಕೊಲೆ ಆರೋಪಿ. ಇಪ್ಪತ್ತು ವರ್ಷಗಳ ಹಿಂದೆ ಕೇಶವ್, ಆರೋಪಿ ಖಂಡೋಬಾ ತಂದೆ ಕಡೆಯಿಂದ 75ಸಾವಿರ ಹಣವನ್ನ ಕೊಟ್ಟು ಜಮೀನನ್ನು ಖರೀದಿ ಮಾಡಿಕೊಂಡಿದ್ದ. ಇದೀಗ ಜಮೀನಿನ ಬೆಲೆ ಏರಿಕೆ ಆದ ಕಾರಣ ಒಂದೂವರೆ ಎಕರೆ ಜಮೀನನ್ನ ಮತ್ತೆ ಮಾರಲು ಖಂಡೋಬಾ ಕುಟುಂಬಸ್ಥರು ಪ್ಲ್ಯಾನ್ ಮಾಡಿದ್ದಾರೆ. ಈ ವೇಳೆ ಎಷ್ಟು ಹಣ ಬೇಕು ನಾನೇ ಕೊಡುತ್ತೇನೆ, ಜಮೀನು ನನಗೆ ಕೊಡಿ ಎಂದು ಕೇಶವ್ ಕೇಳಿಕೊಂಡಿದ್ದಾನೆ. ಇದಕ್ಕೆ ಸ್ಪಂದನೆ ಸಿಗದಿದ್ದಾಗ ಕೇಶವ್ ಕೋರ್ಟ್ ಮೆಟ್ಟಿಲೇರಿ ಜಮೀನು ನನಗೆ ಸೇರಿದ್ದು ಎನ್ನುವ ಆದೇಶ ಮಾಡಿಕೊಂಡು ಬಂದಿದ್ದ. ಈ ವಿಚಾರ ಖಂಡೋಬಾಗೆ ಗೊತ್ತಾಗಿ ಸ್ವಂತ ಚಿಕ್ಕಪ್ಪನನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ನಿನ್ನೆ(ಮೇ.10) ಗ್ರಾಮದಲ್ಲಿ ವಿಠ್ಠಲ ದೇವರ ಸಪ್ತಾಹ ನಡೆದು ಎಲ್ಲರೂ ಕೆಲಸದಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಧ್ಯಾಹ್ನ ಚಿಕ್ಕಪ್ಪ ಕೇಶವ್ಗೆ ಮಗ ಖಂಡೋಬಾ ಎಣ್ಣೆ ಹೊಡೆಯಲು ಕೊಕಟನೂರ ಗ್ರಾಮದ ಬಳಿ ಇರುವ ದಾಬಾಗೆ ಕರೆದೊಂಡು ಹೋಗಿದ್ದ. ಚಿಕ್ಕಪ್ಪ ಮತ್ತು ಮಗ ಇಬ್ಬರು ಸೇರಿಕೊಂಡು ಕಂಠಪೂರ್ತಿ ಕುಡಿದಿದ್ದಾರೆ. ಇದಾದ ಬಳಿಕ ಖಂಡೋಬಾ ಚಿಕ್ಕಪ್ಪ ಕೇಶವ್ ಜೊತೆಗೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಶುರು ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಜಮೀನು ಹೋಗಿದೆ, ಈಗ ಮತ್ತೆ ಕಿರಿಕ್ ಮಾಡ್ತಿದ್ದಾನೆ ಚಿಕ್ಕಪ್ಪ ಅಂದುಕೊಂಡ ಖಂಡೋಬಾ ಕುಡಿದ ಅಮಲಿನಲ್ಲಿ ಅಲ್ಲೇ ಪಕ್ಕದಲ್ಲೇ ಇದ್ದ ಕಲ್ಲನ್ನು ತೆಗೆದುಕೊಂಡು ಕೇಶವ್ ತಲೆ ಮೇಲೆ ಎತ್ತಿ ಹಾಕಿದ್ದಾನೆ. ಇದರಿಂದ ಕುಸಿದು ಕೆಳಗೆ ಬಿದ್ದ ಕೇಶವ್ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.
ಇದನ್ನೂ ಓದಿ:SSLC ವಿಧ್ಯಾರ್ಥಿನಿ ಮೀನಾ ಕೊಲೆಗಡುಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಇನ್ನು ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಐಗಳಿ ಠಾಣೆ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆರೋಪಿ ಖಂಡೋಬಾಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ್ದ ಅನ್ನೋ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಈ ವೇಳೆ ಆಸ್ತಿಗಾಗಿ ಚಿಕ್ಕಪ್ಪನನ್ನ ಕೊಲೆ ಮಾಡಿದ್ದಾಗಿ ಪಾಪಿ ಒಪ್ಪಿಕೊಂಡಿದ್ದು, ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆರೋಪಿಯನ್ನ ಕರೆದುಕೊಂಡು ಬಂದು ಸ್ಥಳ ಮಹಜರು ಕೂಡ ಮಾಡಿ ವಾಪಾಸ್ ಆಗಿದ್ದಾರೆ. ಐಗಳಿ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಬರೀ ಖಂಡೋಬಾ ಒಬ್ಬನೇ ಕೊಲೆ ಮಾಡಿದ್ದಾನಾ ಅಥವಾ ಮತ್ತೆ ಯಾರಾದ್ರೂ ಕೊಲೆಯಲ್ಲಿ ಭಾಗಿಯಾಗಿದ್ದಾರಾ ಅನ್ನೋದರ ಕುರಿತು ಮಾಹಿತಿ ತೆಗೆಯುತ್ತಿದ್ದಾರೆ.
ಇನ್ನು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಿ ಮನೆಗೆ ಆಧಾರವಾಗಿದ್ದ ಕೇಶವ್ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಇತ್ತ ಉಂಡಾಡಿ ಗೂಂಡನಂತೆ ಓಡಾಡ್ತಿದ್ದ ಪಾಪಿ ಪುತ್ರ ಕೇವಲ ಒಂದೂವರೆ ಎಕರೆ ಜಮೀನಿಗಾಗಿ ಕೊಲೆ ಮಾಡಿ ಜೈಲು ಸೇರಿದ್ದು, ಆ ಕುಟುಂಬ ಕೂಡ ಇದೀಗ ಬೀದಿಗೆ ಬಂದಿದೆ. ಅದೇನೆ ಇರಲಿ ಒಂದು ಕಡೆ ಕುಳಿತು ಬಗೆ ಹರಿಸಿಕೊಳ್ಳಬೇಕಿದ್ದ ಜಗಳ, ಕೊಲೆಯಲ್ಲಿ ಅಂತ್ಯವಾಗಿದ್ದು ದುರಂತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ