ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆಯ ಗೋಡೆಯ ಒಂದು ಭಾಗ ಕುಸಿದು 15 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚುಂಚುನವಾಡ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತ ಬಾಲಕನನ್ನು ಅನಂತು ಪಾಶೆಟ್ಟು (15) ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ವರುಣನ ಆರ್ಭಟ
ರಾಜ್ಯದ ಕರಾವಳಿ ಪ್ರದೇಶದಲ್ಲಿ ಜುಲೈನಲ್ಲಿ ವಿಪರೀತ ಮಳೆಯಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ, ತಮಿಳುನಾಡು, ಕರಾವಳಿ ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮಳೆಯಿಂದ ಮನೆ, ಬೆಳೆ ಹಾನಿಯಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಸಗಿ ರೆಸಾರ್ಟ್ನಲ್ಲಿ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮನೆಗಳಿಗೆ ತುರ್ತು ಪರಿಹಾರ 10 ಸಾವಿರ ರೂ. ನೀಡಿ, ನಂತರ ಮನೆಗಳ ನಿರ್ಮಾಣ ಕೂಡಲೇ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ರಸ್ತೆ, ಸೇತುವೆ ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯ ದುರಸ್ತಿಗೆ ಆದ್ಯತೆ ನೀಡಬೇಕು. ಮಹಾರಾಷ್ಟ್ರದ ಕೋಯ್ನಾ ಜಲಾಶಯದ ನೀರಿನ ಮಟ್ಟದ ಬಗ್ಗೆ ನಿಗಾ ವಹಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಜಲಾಶಯಗಳಿಂದ ನೀರು ಹೊರಬಿಡುವ ಮುನ್ನ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಜೀವ ಹಾನಿ ಅಥವಾ ಮನೆಗಳಿಗೆ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಿ. ಜನರ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಎನ್ ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು. ಬೆಳೆ ಹಾನಿ, ರಸ್ತೆ ದುರಸ್ತಿ, ಮನೆಗಳ ಹಾನಿ ಬಗ್ಗೆ ಸಮೀಕ್ಷೆ ಸರಿಯಾಗಿ ಆಗಬೇಕು. ಜಿಲ್ಲೆಗಳಲ್ಲಿ ಮುಂದಿನ 5-6 ದಿನಗಳಲ್ಲಿ ಆಗುವ ಮಳೆ ಮುನ್ಸೂಚನೆಯನ್ನು ಗಮನಿಸಬೇಕು. ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು ಎಂದರು.
Published On - 6:20 pm, Fri, 15 July 22