ಬೆಂಗಳೂರು: ಕರ್ನಾಟಕದ ವಿವಿಧೆಡೆ ಶನಿವಾರವೂ ಉತ್ತಮ ಮಳೆಯಾಗುತ್ತಿದ್ದು, 13 ಜಲಾಶಯಗಳಿಂದ ಒಟ್ಟು 59 ಟಿಎಂಸಿ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕೃಷ್ಣಾ ಕಣಿವೆಯ ಜಲಾಶಯಗಳಿಗೆ 33 ಟಿಎಂಸಿ ನೀರು ಒಳಹರಿವು ಇದೆ. ಜಲವಿದ್ಯುತ್ ಯೋಜನೆಯ ಜಲಾಶಯಗಳಿಗೆ 18 ಟಿಎಂಸಿ ನೀರು ಒಳಹರಿವು ಇದ್ದರೆ, ಕಾವೇರಿ ಕಣಿವೆಯ 4 ಜಲಾಶಯಗಳಿಗೆ 8 ಟಿಎಂಸಿ ನೀರಿನ ಒಳಹರಿವು ಬರುತ್ತಿದೆ. ಕರ್ನಾಟಕದ 13 ಜಲಾಶಯಗಳಿಗೆ ಶುಕ್ರವಾರ (ಜುಲೈ 23) 42 ಟಿಎಂಸಿ ಒಳಹರಿವಿತ್ತು.
ರಾಜ್ಯದಲ್ಲಿ ಮಳೆ ಪ್ರಮಾಣವು ಭಾನುವಾರದಿಂದ (ಜುಲೈ 25) ಕಡಿಮೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜುಲೈ 28ರವರೆಗೆ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ, ರಾಜ್ಯದ ವಿವಿಧೆಡೆ ಚೆದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಭಾರಿ ಮಳೆಯಾಗಬಹುದು ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆ ಗ್ರಾಮದಲ್ಲಿ ದಾಖಲೆಯ 355 ಮಿಮೀ ಮಳೆಯಾಗಿದೆ.
ಬೆಳಗಾವಿಗೆ ಮುಖ್ಯಮಂತ್ರಿ ಭೇಟಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ನೆರೆ ಹಾನಿಯನ್ನು ಪರಿಶೀಲಿಸಲಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕುಂಬಾರ ಓಣಿ, ಮಠಗಲ್ಲಿ, ನದಿ ಗಲ್ಲಿಗಳಲ್ಲಿ ಮುಳುಗಡೆ ಪ್ರದೇಶಗಳನ್ನು ವೀಕ್ಷಿಸಿದ ನಂತರ ಶಂಕರಲಿಂಗ ಕಾರ್ಯಾಲಯದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ನಿಪ್ಪಾಣಿ ತಾಲ್ಲೂಕಿನ ಯಮಗರಣಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮುಳುಗಡೆಯಾಗಿರುವ ಹೆದ್ದಾರಿಯನ್ನು ಯಡಿಯೂರಪ್ಪ ವೀಕ್ಷಿಸಲಿದ್ದಾರೆ. ನಿಪ್ಪಾಣಿ ತಾಲ್ಲೂಕಿನ ಕೊಡ್ನಿ ಗ್ರಾಮದ ಹಾನಿ ಪ್ರದೇಶ ಮತ್ತು ಕಾಳಜಿ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ.
(Karnataka Rains 59 tmc outflow from 13 reservoirs CM BS Yediyurappa to visit Belagavi)
ಇದನ್ನೂ ಓದಿ: Karnataka Rains: ವರುಣನ ಆರ್ಭಟಕ್ಕೆ ಕರ್ನಾಟಕ ತತ್ತರ; ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆ
ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆ, ಮುಧೋಳದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ, ಗುಡಿಯಲ್ಲಿ 4 ಅಡಿ ನೀರು
Published On - 8:32 pm, Sat, 24 July 21