ಬೆಳಗಾವಿ: ಟಿಪ್ಪು ಸುಲ್ತಾನ್ (Tipu Sultan), ಔರಂಗಜೇಬ್‌ನನ್ನು(Aurangzeb) ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ(Kolhapur Violence). ನೆರೆಯ ಕೊಲ್ಲಾಪುರದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆ ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಹಿಂಸಾಚಾರ ಹಿನ್ನೆಲೆ ಕಳೆದ ರಾತ್ರಿ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಸರ್ವಪಕ್ಷ ನಾಯಕರು, ವಿವಿಧ ಸಮುದಾಯಗಳ ಪ್ರಮುಖ ನಾಯಕರ ಜೊತೆ ಶಾಂತಿ ಸಭೆ ನಡೆದಿದೆ. ಸಚಿವ ದೀಪಕ್ ಕೇಸರಕರ್, ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ರು. ಹಾಗೂ ಕೊಲ್ಲಾಪುರ ಡಿಸಿ ಭಗವಾನ್ ಕಾಂಬಳೆ, ಎಸ್‌ಪಿ ಮಹೇಂದ್ರ ಪಂಡಿತ್ ಸೇರಿ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದರೆ. ಸದ್ಯ ಈಗ ಜೂನ್ 19ರವರೆಗೆ ಕೊಲ್ಲಾಪುರದಲ್ಲಿ ನಿಷೇಧಾಜ್ಞೆ ಮುಂದುವರಿಕೆಗೆ ಕೊಲ್ಲಾಪುರ ಜಿಲ್ಲಾಧಿಕಾರಿ ಭಗವಾನ್ ಕಾಂಬಳೆ ಆದೇಶ ಹೊರಡಿಸಿದ್ದಾರೆ. ಇಂದು(ಜೂನ್ 08) ಮಧ್ಯರಾತ್ರಿ 12 ಗಂಟೆವರೆಗೆ ಕೊಲ್ಲಾಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಬಗ್ಗೆ ಪೋಸ್ಟ್ ವಿವಾದ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಘರ್ಷ, ಕಲ್ಲು ತೂರಾಟ
ಮತ್ತೊಂದೆಡೆ ಗಡಿ ಜಿಲ್ಲೆ ಬೆಳಗಾವಿಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಮಧ್ಯರಾತ್ರಿಯವರೆಗೂ ಬೆಳಗಾವಿ ಜಿಲ್ಲೆ ಗಡಿ ಗ್ರಾಮಗಳಲ್ಲಿ ಗಸ್ತು ತಿರುಗಿ ಪೊಲೀಸರು ಎಚ್ಚರಿಕೆ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಿಪ್ಪಾಣಿ, ಕೊಗನೊಳ್ಳಿ, ಬೋರಗಾಂವ್, ಅಕ್ಕೋಲ, ಎಕ್ಸಂಬಾ, ಬೇಡಕಿಹಾಳ, ಮಣಕಪುರ, ಸಿದ್ನಾಳ, ಮಂಗೂರ, ಚಂದೂರ ಸೇರಿ ಹಲವು ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಔರಂಗಜೇಬನ ವೈಭವೀಕರಿಸಿದ ವಾಟ್ಸಪ್ ಸ್ಟೇಟಸ್ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿನ್ನೆ( ಜೂನ್ 07) ರಾತ್ರಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಕೊಲ್ಲಾಪುರ ಬಂದ್ ವೇಳೆ ವ್ಯಾಪಕ ಹಿಂಸಾಚಾರ ನಡೆದಿದೆ. ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದ್ದು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿ ತಿಳಿಗೊಳಿಸಿದರು. ವಿವಾದಾತ್ಮಕ ವಾಟ್ಸಪ್ ಸ್ಟೇಟಸ್ ಇಟ್ಟವರ ಬಂಧನಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಮಹಾರಾಷ್ಟ್ರದ ಕೊಲ್ಲಾಪುರ ಬಂದ್‌ಗೆ ಕರೆ ಕೊಟ್ಟಿದ್ದವು. ನಿನ್ನೆ ಬೆಳಗ್ಗೆ 10ಕ್ಕೆ ಕೊಲ್ಲಾಪುರದ ಛತ್ರಪತಿ ಶಿವಾಜಿ ಮಹಾರಾಜ ಚೌಕ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಸಿಕ್ಕ ಸಿಕ್ಕ ಅಂಗಡಿಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಕೊಲ್ಲಾಪುರದ ಹಲವೆಡೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ