ಬೆಳಗಾವಿ: ಭಾರತೀಯ ವಾಯು ಸೇನೆಯ ಎರಡು ಜೆಟ್ಗಳ ನಡುವೆ ನಿನ್ನೆ ಸಂಭವಿಸಿದ್ದ ದುರಂತದಲ್ಲಿ ಹುತಾತ್ಮರಾಗಿದ್ದ ವಿಂಗ್ ಕಮಾಂಡರ್ ಹನುಮಂತರಾವ್ ಆರ್.ಸಾರಥಿ (Wing Commander Hanumantharao R. Sarathi) ಅವರ ಅಂತ್ಯಸಂಸ್ಕಾರ ಇಂದು (ಜನವರಿ 29) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ರುದ್ರಭೂಮಿಯಲ್ಲಿ ಹನುಮಂತರಾವ್ ಚಿತೆಗೆ ಅಣ್ಣ ಪ್ರವೀಣ್ ಸಾರಥಿ ಅವರು ಅಗ್ನಿಸ್ಪರ್ಶ ಮಾಡಿದ್ದು, ಭಾರತೀಯ ವಾಯು ಪಡೆ ಸಿಬ್ಬಂದಿ ಗಾಳಿಯಲ್ಲಿ 3 ಸುತ್ತು ಗುಂಡುಹಾರಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ಹನುಮಂತರಾವ್ ಪತ್ನಿಗೆ ರಾಷ್ಟ್ರಧ್ವಜ, ಕ್ಯಾಪ್ ಹಸ್ತಾಂತರ ಮಾಡಲಾಯಿತು. ಇನ್ನು ಅಂತ್ಯಸಂಸ್ಕಾರದ ವೇಳೆ ಆಗಮಿಸಿದ್ದ ಸಾವಿರಾರು ಜನರು ಮತ್ತು ಸಾರಥಿ ಕುಟುಂಬಸ್ಥರು ಹನುಮಂತರಾವ್ ಅವರಿಗೆ ಕಣ್ಣೀರ ವಿದಾಯ ಹೇಳಿದರು.
ನಿನ್ನೆ (ಜನವರಿ 28) ಮಧ್ಯಪ್ರದೇಶದಲ್ಲಿ ಎರಡು ವಾಯು ಸೇನೆಯ ಜೆಟ್ಗಳ ನಡುವೆ ಡಿಕ್ಕಿ ಸಂಭವಿಸಿ ಹನುಮಂತರಾವ್ ಹುತಾತ್ಮರಾಗಿದ್ದರು. ಇವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಇಂದು ಬೆಳಗಾವಿ ಏರ್ಪೋರ್ಟ್ಗೆ ತರಲಾಯಿತು. ವಿಮಾನ ನಿಲ್ದಾಣದಲ್ಲಿ ವಾಯ ಪಡೆ ತರಬೇತಿ ಶಾಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗೌರವ ಸಲ್ಲಿಸಿದರು. ಇದೇ ವೇಳೆ ಶಾಸಕ ಅನಿಲ್ ಬೆನಕೆ ಅಂತಿಮ ದರ್ಶನ ಮಾಡಿದರು.
ನಂತರ ತೆರೆದ ವಾಹನದಲ್ಲಿ ಗಣೇಶಪುರದ ಸಂಭಾಜಿನಗರದವರೆಗೆ ಹನುಮಂತರಾವ್ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ದೇಶಭಕ್ತರು ರಂಗೋಲಿ ಹಾಕಿ, ಹೂವಿನಿಂದ ಸಿಂಗರಿಸಿದರು. ಹೀಗೆ ಸಾಗಿದ ಸಂಭಾಜಿನಗರದ ಮನೆ ಬಳಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಯಿತು. ಬಳಿಕ ನಿವಾಸದಿಂದ ಆರಂಭವಾದ ಅಂತಿಮಯಾತ್ರೆ ಬೆನಕನಹಳ್ಳಿಯ ರುದ್ರಭೂಮಿ ಕಡೆ ಸಾಗಿತು. ಈ ವೇಳೆ ಸಾವಿರಾರು ಜನರು ರಸ್ತೆ ಬದಿ ನಿಂತು ಗೌರವ ಸಲ್ಲಿಸಿದರು. ಭಾರತ್ ಮಾತಾಕೀ ಜೈ, ಹನುಮಂತರಾವ್ ಆರ್.ಸಾರಥಿ ಅಮರ್ ರಹೇ ಎಂದು ಘೋಷಣೆ ಕೂಗಿದರು. ಅಲ್ಲದೆ, ಗಣೇಶಪುರ ಬಡಾವಣೆಯಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಹುತಾತ್ಮ ಹನುಮಂತರಾವ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಗೌರವ ಸಲ್ಲಿದರು.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ 2 ಫೈಟರ್ ಜೆಟ್ಗಳ ಡಿಕ್ಕಿ: ಹುತಾತ್ಮರಾಗಿದ್ದು ಬೆಳಗಾವಿ ಮೂಲದ ಯೋಧ
ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ನಿವಾಸಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಥಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ನಗರದ ಗಣೇಶಪುರ ನಿವಾಸಿ ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಸಹೋದರ ಸಹ ಗ್ರೂಪ್ ಕಮಾಂಡರ್ ಆಗಿದ್ದು, ತಂದೆ ರೇವಣಸಿದ್ದಪ್ಪ ಎಂಎಲ್ಆರ್ಸಿಯಲ್ಲಿ ಕ್ಯಾಪ್ಟನ್ ಆಗಿದ್ದರು. ರೇವಣಸಿದ್ದಪ್ಪ ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನವರಾಗಿದ್ದಾರೆ. ಬೆಳಗಾವಿಯ ಗಣೇಶಪುರದಲ್ಲಿ ವಾಸವಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 pm, Sun, 29 January 23