ಮೂಡಲಗಿ: ಪತ್ನಿ ಕೊಂದು 2 ದಿನ ಶವದೊಂದಿಗೆ ಕಳೆದ ಪತಿ, ಕೊಲೆಗೆ ಅದೇ ಕಾರಣನಾ?

ಅವರು ಕೇವಲ ನಾಲ್ಕೂವರೆ ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ ಅದೊಂದು ವಿಚಾರಕ್ಕೆ ಪತ್ನಿಯನ್ನ ಕೊಲೆ ಮಾಡಿ ಎರಡು ದಿನ ಆಕೆಯ ಶವದೊಂದಿಗೆ ಕಳೆದು ದುರ್ವಾಸನೆ ಬರ್ತಿದ್ದಂತೆ ಪತಿ ಮಹಾಶಯ ಊರು ಬಿಟ್ಟು ಪರಾರಿಯಾಗಿದ್ದಾನೆ. ಅಷ್ಟಕ್ಕೂ ಯಾವ ಕಾರಣಕ್ಕೆ ಪತ್ನಿಯನ್ನ ಕೊಂದ, ಕೊಲೆ ಮಾಡಿ ಆತ ಮಾಡಿದ್ದಾದ್ದರೂ ಏನು ಎಂಬ ಅಸಲಿ ಕಥೆ ಇಲ್ಲಿದೆ.

ಮೂಡಲಗಿ: ಪತ್ನಿ ಕೊಂದು 2 ದಿನ ಶವದೊಂದಿಗೆ ಕಳೆದ ಪತಿ, ಕೊಲೆಗೆ ಅದೇ ಕಾರಣನಾ?
ಪತಿ ಆಕಾಶ್​, ಮಂಚ, ಕೊಲೆಯಾದ ಪತ್ನಿ ಸಾಕ್ಷಿ
Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2025 | 7:59 PM

ಬೆಳಗಾವಿ, ಅಕ್ಟೋಬರ್​​ 09: ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಬುಧವಾರ ನಡೆದಿದ್ದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಮದುವೆಯಾಗಿ ಕೇವಲ ನಾಲ್ಕೂವರೆ ತಿಂಗಳಿಗೆ ಪತ್ನಿಯನ್ನು (wife)  ಕೊಂದ ಪತಿ (Husband), ಮಂಚದೊಳಗೆ ಬಚ್ಚಿಟ್ಟಿದ್ದ. ಕೊಲೆ ಮಾಡಿ ಎರಡು ದಿನ ಆಕೆಯ ಶವದೊಂದಿಗೆ ಕಳೆದು ದುರ್ವಾಸನೆ ಬರ್ತಿದ್ದಂತೆ ಪತಿ ಮಹಾಶಯ ಊರು ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಮೂರು ಜನರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಪರಾರಿಯಾಗಿರುವ ಆಕಾಶ್​ ಪತ್ತೆಗೆ ಬಲೆ ಬೀಸಿದ್ದಾರೆ.

ವರದಕ್ಷಿಣೆ ವಿಚಾರಕ್ಕೆ ಕೊಲೆ: ಸಾಕ್ಷಿ ಕುಟುಂಬಸ್ಥರ ಆರೋಪ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಿನ್ನೆ ಘಟನೆ ನಡೆದಿದೆ. ಸಾಕ್ಷಿ ಕಂಬಾರ ಗಂಡನಿಂದ ಕೊಲೆಯಾದ ದುರ್ದೈವಿ. ಮೇ.24ರಂದು ಅದ್ದೂರಿಯಾಗಿ ಆಕಾಶ್​​ನನ್ನು ಮದುವೆಯಾಗಿದ್ದ ಸಾಕ್ಷಿ ದುರಂತ ಅಂತ್ಯವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಇದೆ ಅಂತ ಸುಳ್ಳು ಹೇಳಿ ಮದುವೆಯಾಗಿದ್ದ. ಐವತ್ತು ಗ್ರಾಂ ಚಿನ್ನ ಹಾಗೂ ಐದು ಲಕ್ಷ ರೂ. ಹಣಕ್ಕಾಗಿ ಪತ್ನಿಯನ್ನ ಪೀಡಿಸುತ್ತಿದ್ದು, ಇದೇ ಕಾರಣಕ್ಕೆ ಆಕೆಯನ್ನ ಕೊಲೆ ಮಾಡಿದ್ದಾಗಿ ಸಾಕ್ಷಿ ಕುಟುಂಬಸ್ಥರು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಸಾಕ್ಷಿ ಮೃತದೇಹ ಹಸ್ತಾಂತರ ಮಾಡಿದ್ದು ಇಂದು ಅಂತ್ಯಸಂಸ್ಕಾರ ನೆರವೇರಿದೆ.

ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ

ಕೊಲೆಗೆ ಕಾರಣ ಏನು, ಕೊಲೆ ಮಾಡಿ ಗಂಡ ಮಾಡಿದ್ದೇನು ಅಂತಾ ಕೇಳಿದರೆ ನೀವು ಶಾಕ್ ಆಗುತ್ತೀರಿ. ಆಕಾಶ್​​ ಸೋಮವಾರ ಮಧ್ಯಾಹ್ನ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಶವವನ್ನ ಬೆಡ್ ರೂಮ್​​ನಲ್ಲಿರುವ ಮಂಚದ ಒಳಗೆ ಹಾಕಿ ತಾಯಿಗೆ ಗಂಡ-ಹೆಂಡತಿ ಗೋಕಾಕ್​​ಗೆ ಹೋಗಿ ಬರುವುದಾಗಿ ಹೇಳಿದ್ದಾನೆ. ಇನ್ನು ತಾಯಿ ಯಲ್ಲಮ್ಮ ದೇವಿ ಸೇವೆ ಮಾಡುತ್ತಿದ್ದು, ಹೀಗಾಗಿ ಹೆಚ್ಚಾಗಿ ದೇವಸ್ಥಾನದಲ್ಲೇ ಉಳಿದುಕೊಳ್ಳುತ್ತಿದ್ದರು. ಆ ಮೂಲಕ ತಾಯಿಯ ದಾರಿ ತಪ್ಪಿಸುವ ಕೆಲಸ ಮಾಡಿದ್ದ ಮಗ.

ಇದನ್ನೂ ಓದಿ: ಮೂಡಲಗಿ: 3 ದಿನದ ಹಿಂದೆ ಪತ್ನಿ ಕೊಂದು ಮಂಚದೊಳಗಿಟ್ಟು ಪತಿ ಪರಾರಿ!

ಮಂಗಳವಾರ ಮತ್ತೆ ಮನೆಯಲ್ಲಿ ಏನೋ ವಾಸನೆ ಬರ್ತಿದೆ ಅಂತಾ ತಾಯಿ ಕೇಳಿದ್ದಾರೆ. ಈ ವೇಳೆ ಆಕೆಗೆ ಸುಳ್ಳು ಹೇಳಿ ಮತ್ತೆ ಮರೆಮಾಚುವ ಕೆಲಸ ಮಾಡಿದ್ದಾನೆ. ಇತ್ತ ಪತ್ನಿ ಅವರ ಅಕ್ಕನ ಮನೆಗೆ ಹೋಗಿದ್ದಾಳೆ ಅನ್ನೋದನ್ನ ಕೂಡ ಹೇಳಿದ್ದ. ಇದೇ ರೀತಿ ಎರಡು ದಿನ ಪತ್ನಿ ಶವದ ಜೊತೆಗೆ ಕಳೆದ ಆಕಾಶ್, ರಾತ್ರಿ ಆಕೆ ಮೃತದೇಹ ಸಾಗಿಸುವ ಪ್ರಯತ್ನ ಪಟ್ಟು ವಿಫಲನಾಗಿದ್ದ. ಯಾವಾಗ ಆಕೆ ಮೃತದೇಹ ಸಾಗಿಸಲು ಆಗಲ್ಲ ಅಂತಾ ಗೊತ್ತಾಯಿತೋ ಆಗ ಮಂಚದೊಳಗೆ ಶವವಿಟ್ಟು ಡ್ರಾಮಾ ಮಾಡಿದ್ದ.

ನಿನ್ನೆ ಅಂದರೆ ಕೊಲೆಯಾದ ಮೂರು ದಿನದ ಬಳಿಕ ಹೆಚ್ಚು ವಾಸನೆ ಬರ್ತಿದ್ದಂತೆ ಬೆಡ್ ರೂಮ್​​ಗೆ ಹೋಗಿ ಆಕಾಶ್ ತಾಯಿ ನೋಡಿದಾಗ ಮಂಚದ ಕೆಳಗೆ ಶವ ಇರುವುದು ಗೊತ್ತಾಗಿದೆ. ಕೂಡಲೇ ಅಕ್ಕಪಕ್ಕದ ಜನರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

ವರದಕ್ಷಿಣೆ ತರಲಿಲ್ಲ ಅನ್ನೋ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಸಾಕ್ಷಿ ಕುಟುಂಬಸ್ಥರು ಹೇಳುತ್ತಿದ್ದರೆ, ಇನ್ನೊಂದು ಕಡೆ ಮದುವೆಯಾದ ಬಳಿಕ ಸಾಕ್ಷಿ ಸ್ನೇಹಿತನ ಜೊತೆಗೆ ಮಾತನಾಡುತ್ತಿದ್ದಲು, ಈ ವಿಚಾರ ತಿಳಿದು ಆಕಾಶ್ ಪತ್ನಿಯನ್ನ ಕೊಲೆ ಮಾಡಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಈ ಗಂಡ ಹೆಂಡ್ತಿ ಜಗಳ ಕಾರಿಗೆ ಬೆಂಕಿ ಹಚ್ಚುವ ತನಕ: ಪತ್ನಿ ಕೃತ್ಯಕ್ಕೆ ಕಣ್ಣೀರಿಟ್ಟ ಪತಿ

ಸದ್ಯ ಯಾವತ್ತು ತಾನೂ ವಾಪಾಸ್ ಬರಲ್ಲ ಅಂತ ಆರೋಪಿ ಆಕಾಶ್​​, ತಾಯಿ ಮುಂದೆ ಹೇಳಿ ಹೋಗಿದ್ದಾನೆ. ಜೊತೆಗೆ ಅಕ್ಕನಿಗೂ ಕರೆ ಮಾಡಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತನ್ನನ್ನ ಹುಡುಕದಂತೆ ಹೇಳಿದ್ದಾನೆ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಬರ್ತಿದ್ದು, ಹೀಗಾಗಿ ಪೊಲೀಸರು ಎಲ್ಲಾ ಮಾಹಿತಿ ಆಧಾರದ ಮೇಲೆ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮದುವೆಯಾದ ನಾಲ್ಕೂವರೆ ತಿಂಗಳಿಗೆ ಸಾಕ್ಷಿ ಈ ರೀತಿ ದುರಂತ ಅಂತ್ಯ ಕಂಡಿದ್ದು ದುರ್ದೈವದ ಸಂಗತಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:51 pm, Thu, 9 October 25