ಬೆಳಗಾವಿ: ರಾಜ್ಯದ ಕೆಲವು ಆ್ಯಕ್ಟಿವ್ ಶಾಸಕರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಒಬ್ಬರು. ನಾನು ಯಾವಾಗಲು ಅವರಿಗೆ ತಮಾಷೆ ಮಾಡುತ್ತಿರುತ್ತೇನೆ, ‘ಏನಮ್ಮಾ ಕಿತ್ತೂರು ರಾಣಿ ಚೆನ್ನಮ್ಮಾ ಚೆನ್ನಾಗಿದ್ದಿಯಾ?’ ಎಂದು ಕೇಳುತ್ತಿರುತ್ತೇನೆ. ಹೆಣ್ಣು ಮಗಳಾದರೂ ಲಕ್ಷ್ಮೀ ಹೆಬ್ಬಾಳ್ಕರ್ಗೆ ಎದೆಗಾರಿಕೆ ಇದೆ ಎಂದು ಬೈಲಹೊಂಗಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಹೊಗಳಿದರು.
ಇಂದು ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಗೆ ಮಳೆ ಅಡ್ಡಿಯಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣದ ವೇಳೆ ಮಳೆ ಶುರುವಾಯಿತು. ಮಳೆ ಶುರುವಾದ್ದರಿಂದ ಎದ್ದು ಹೊರಟ ಜನರನ್ನು ಕೂರಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನರ ಬಳಿ ಹೋಗಿ ವಿನಂತಿ ಮಾಡಿಕೊಂಡರು. ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಮಳೆ ಬಂದರೆ ಬರಲಿ, ನೀವು ಕುಳಿತುಕೊಳ್ಳಿ . ಇಲ್ಲಾಂದ್ರೆ ಮಾತಾಡಲ್ಲ’ ಎಂದು ಹೇಳಿದರು. ಅವರ ಮಾತಿಗೆ ಓಗೊಟ್ಟ ನೆರೆದ ಜನರು ಕುರ್ಚಿಗಳನ್ನು ತಲೆಯ ಮೇಲೆ ಹೊತ್ತು ನಿಂತರು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಳೆ ನಿಲ್ಲದ ಕಾರಣ ಭಾಷಣವನ್ನು ಮೊಟಕುಗೊಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ
ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಪ್ರಚಾರದಲ್ಲಿ ನಿರತರಾಗಿದ್ದರು. ’ಕಳೆದ 2 ವರ್ಷದಿಂದ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಬೆಳಗಾವಿ ಸುವರ್ಣಸೌಧದ ಎದುರು ನೀವು ಪ್ರತಿಭಟನೆ ಮಾಡಬೇಕು. ನೀವು ಪ್ರತಿಭಟನೆ ಮಾಡುತ್ತೀರಿ ಎಂದು ಹೆದರಿ ಅಧಿವೇಶನ ನಡೆಸ್ತಿಲ್ಲ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಅಧಿವೇಶನ ನಡೆಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ’ ಎಂದು ಬೆಳಗಾವಿ ತಾಲೂಕಿನ ಸುಳೇಬಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Belagavi Lok sabha bypoll 2021: ಬೆಳಗಾವಿ ಉಪಚುನಾವಣೆ ಪ್ರಚಾರದ ಮಧ್ಯೆ ಕಾಂಗ್ರೆಸ್ ಭಿನ್ನಮತ ಬಹಿರಂಗ
ಬಸ್ ಮುಷ್ಕರಕ್ಕೆ ಕುಮ್ಮಕ್ಕು ನೀಡಿದ ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ
(Opposition leader Siddaramaiah about MLA Lakshmi Hebbalkar with Kittur Rani Chennamma in Karnataka by election campaign Belagavi)
Published On - 8:07 pm, Sat, 10 April 21