ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಹುಕ್ಕೇರಿಯಲ್ಲಿ ಬೃಹತ್ ಸಮಾವೇಶ: ಆಗಲ್ಲ ಅಂದ್ರೆ ಹೇಳಿಬಿಡ್ರಿ ಎಂದು ಸವಾಲು ಹಾಕಿದ ಸ್ವಾಮೀಜಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 21, 2022 | 9:45 AM

ನಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದರೆ 25 ಲಕ್ಷ ಜನರೊಂದಿಗೆ ಬೆಂಗಳೂರಿಗೆ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಹುಕ್ಕೇರಿಯಲ್ಲಿ ಬೃಹತ್ ಸಮಾವೇಶ: ಆಗಲ್ಲ ಅಂದ್ರೆ ಹೇಳಿಬಿಡ್ರಿ ಎಂದು ಸವಾಲು ಹಾಕಿದ ಸ್ವಾಮೀಜಿ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದಿಂದ ನಮಗೆ ಬಾಯ್ಮಾತಿನ ಸ್ಪಂದನೆಯಷ್ಟೇ ಸಿಕ್ಕಿದೆ. ಆದರೆ ಸರ್ಕಾರಿ ಆದೇಶವು ಈವರೆಗೆ ಹೊರಬಿದ್ದಿಲ್ಲ ಎಂದು ‘ಟಿವಿ9’ಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು. ಹುಕ್ಕೇರಿ ಬೈಪಾಸ್ ರಸ್ತೆಯ ಬಳಿ ಪಂಚಮಸಾಲಿ ಸಮಾವೇಶಕ್ಕಾಗಿ ಸಿದ್ಧಪಡಿಸಿರುವ ಬೃಹತ್ ವೇದಿಕೆ ಸಮೀಪ ಮಾತನಾಡಿದ ಅವರು, ‘ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲು ಆಗುವುದಿಲ್ಲ. ಆದರೆ ಈವರೆಗೆ ಆದೇಶ ಹೊರಡಿಸಿಲ್ಲ. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಹೊಸದರಲ್ಲಿ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳೊಳಗೆ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದು. ಅದು ಸುಳ್ಳಾಗಿದೆ’ ಎಂದು ಹೇಳಿದರು.

‘ಸರ್ಕಾರಕ್ಕೆ ಎಚ್ಚರಿಕೆ ನೀಡಲೆಂದು ಈ ಸಮಾವೇಶ ನಡೆಸುತ್ತಿದ್ದೇವೆ. ಈ ಸಮಾವೇಶದಲ್ಲಿ ನಾವ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಆ ನಿರ್ಣಯಗಳನ್ನು ಸರಕಾರಕ್ಕೆ ಮುಟ್ಟಿಸುತ್ತೇವೆ. ಸಮಾವೇಶದ ಮೂಲಕ ಮುಖ್ಯಮಂತ್ರಿಗೆ ಕೆಲವು ಪ್ರಶ್ನೆ ಕೇಳುತ್ತಿದ್ದೇವೆ. ನಿಮಗೆ ನಮ್ಮ ಬೇಡಿಕೆ ಈಡೇರಿಸುವ ಮನಸ್ಸು ಇದೆಯೋ? ಇಲ್ಲವೋ? ಆಗದಿದ್ದರೆ ಆಗೋದಿಲ್ಲ ಅಂತಾ ಹೇಳಿ. ನಿಮ್ಮ ರಾಜಕೀಯ ಭವಿಷ್ಯಕ್ಕೆ ತೊಂದರೆ ಮಾಡೋದಿಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ’ ಎಂಬುದಷ್ಟೇ ನಮ್ಮ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದರೆ 25 ಲಕ್ಷ ಜನರೊಂದಿಗೆ ಬೆಂಗಳೂರಿಗೆ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬೆಂಗಳೂರಿಗೆ ಬರುವ ದಿನಾಂಕವನ್ನು ಇಂದಿನ ಸಮಾವೇಶದಲ್ಲಿ ನಿರ್ಧರಿಸುತ್ತೇವೆ. ಹಲವು ಪ್ರಮುಖ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತೇವೆ’ ಎಂದು ವಿವರಿಸಿದರು.

ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಸಾವಿರಾರು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಹಲವು ರಾಜಕೀಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ’ ವಾಕ್ಯದೊಂದಿಗೆ ಸಮಾವೇಶವನ್ನು ಆಯೋಜಿಸಲಾಗಿದೆ.

‘ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಕಡಿತಗೊಳಿಸಿ ನಮಗೆ ಅನುಕೂಲ ಮಾಡಿಕೊಡುವುದು ಬೇಡ. ಸರ್ಕಾರವು ಈಗಾಗಲೇ ಲಿಂಗಾಯತ ಸಮುದಾಯದ 21 ಉಪಪಂಗಡಗಳಿಗೆ 2ಎ ಮೀಸಲಾತಿ ಸ್ಥಾನ ನೀಡಿದೆ. ಅದೇ ರೀತಿಯಲ್ಲಿ ನಮ್ಮ ಸಮುದಾಯಕ್ಕೂ ನೀಡಬೇಕು ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ’ ಎಂದು ಅವರು ಹೇಳಿದರು.

Published On - 9:45 am, Fri, 21 October 22