Belagavi: ಪಿಡಿಒ ಲಂಚಾವತಾರ ಆರೋಪ; ನೆರೆ ಸಂತ್ರಸ್ತರ ಕೈ ತಲುಪದ ಸರ್ಕಾರದ ಪರಿಹಾರ ಹಣ

|

Updated on: Jun 14, 2023 | 8:24 AM

ಅದು 2019ರಲ್ಲಿ ಕಂಡು ಕೇಳರಿಯದ ಪ್ರವಾಹ ಬಂದು ಲಕ್ಷಾಂತರ ಕುಟುಂಬಗಳು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದವು. ಈ ಸಂದರ್ಭದಲ್ಲೇ ಅದೊಂದು ಊರಲ್ಲಿ 700 ಮನೆಗಳು ಧರೆಗುರುಳಿದ್ದವು, ಎಲ್ಲರಿಗೂ ಮನೆ ಕಟ್ಟಿಕೊಡಬೇಕೆಂಬ ಉದ್ದೇಶದಿಂದ ಸರ್ಕಾರ 5 ಲಕ್ಷ ಹಣ ಪರಿಹಾರ ಘೋಷಣೆ ಮಾಡಿತ್ತು. ಇದೀಗ ಆ ಎಲ್ಲರೂ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ಮಾಡಬೇಕಿತ್ತು, ಆದರೆ ಪಿಡಿಒ ಲಂಚಾವತಾರದಿಂದ ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಬೀದಿಯಲ್ಲಿವೆ. ಬಡವರಿಂದ ಪಿಡಿಒ ಪೀಕಿದ್ದೇಷ್ಟೂ ಈ ಕುರಿತು ಗ್ರಾಮಸ್ಥರು ಹೇಳಿದ್ದೇನು ಅಂತೀರಾ? ಇಲ್ಲಿದೆ ನೋಡಿ.

Belagavi: ಪಿಡಿಒ ಲಂಚಾವತಾರ ಆರೋಪ; ನೆರೆ ಸಂತ್ರಸ್ತರ ಕೈ ತಲುಪದ ಸರ್ಕಾರದ ಪರಿಹಾರ ಹಣ
ಪರಿಹಾರ ದೊರಕಿಸಿ ಕೊಡುವಂತೆ ನೆರೆ ಸಂತ್ರಸ್ತರ ಮನವಿ
Follow us on

ಬೆಳಗಾವಿ: ಅರ್ಧಮರ್ಧ ಬಿದ್ದ ಮನೆಗಳು, ಮೂರು ವರ್ಷ ಕಳೆದರೂ ಮನೆ ನಿರ್ಮಾಣ ಆಗದಿದ್ದಕ್ಕೆ ತಲೆ ಮೇಲೆ ಕೈಹೊತ್ತು ಕುಳಿತ ನೆರೆ ಸಂತ್ರಸ್ತರು, ಬಡಪಾಯಿಗಳಿಂದ ಲಂಚ ಪಡೆಯುತ್ತಿರುವ ಪಿಡಿಒ ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ (Chikodi) ತಾಲೂಕಿನ ಯಡೂರ ಗ್ರಾಮದಲ್ಲಿ. ಈ ಗ್ರಾಮ 2019ರ ಕೃಷ್ಣಾ ನದಿ ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 700ಕ್ಕೂ ಅಧಿಕ ಮನೆಗಳು ಧರೆಗುರುಳಿ ಆ ಎಲ್ಲ ಕುಟುಂಬಗಳು ಬೀದಿಗೆ ಬಂದಿದ್ದವು. ಅಂದಿನ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂರು ಕಳೆದುಕೊಂಡ ನೆರೆ ಸಂತ್ರಸ್ತರಿಗೆ ತಲಾ 5 ಲಕ್ಷ ರೂಪಾಯಿಯನ್ನ ಮನೆ ಕಟ್ಟಿಕೊಳ್ಳಲು ಪರಿಹಾರ ನೀಡಿತ್ತು. ಏಳನೂರು ಜನರಿಗೂ ಈ ಪರಿಹಾರ ಸಿಕ್ಕು ಮನೆ ಕಟ್ಟಿಕೊಳ್ಳಲು ಆರಂಭ ಕೂಡ ಮಾಡಿದ್ದರು. ಆದ್ರೆ, ಭ್ರಷ್ಟ ಅಧಿಕಾರಿಗಳು ಆಡಿದ ಆಟದಿಂದ ಇದೀಗ ಅರ್ಧಕ್ಕಿಂತ ಹೆಚ್ಚು ಜನರ ಮನೆಗಳು ಅರ್ಧಕ್ಕೆ ನಿಂತು ಹೋಗಿವೆ.

ಹೌದು ಪಿಡಿಒ ಶಿವಾನಂದ ಹಡಪದ ಎಂಬುವವರು ಪ್ರತಿಯೊಬ್ಬರ ಬಳಿಯೂ ಬಿಲ್ ಪಾಸ್ ಹಾಗೂ ಜಿಪಿಎಸ್ ಮಾಡಿಕೊಡಲು ಹಣ ಪೀಕಿದ್ದಾರಂತೆ. ಇದೀಗ ಕೆಲವರದ್ದು ಎರಡನೇ ಹಾಗೂ ಮೂರನೇ ಬಿಲ್ ಬರಬೇಕಿದ್ದು, ಅವರಿಂದ 1500ರಿಂದ 5 ಸಾವಿರ ವರೆಗೆ ಹಣ ಪಡೆದು ಬಿಲ್ ಮಂಜೂರು ಮಾಡಿಸಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ಇನ್ನೂ ಪಿಡಿಒ ಸಾಹೇಬ್ರೆ ಖುದ್ದು ಹಣ ಪಡೆದುಕೊಳ್ಳುತ್ತಿರುವ ವಿಡಿಯೋ ಕೂಡ ಇದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಕೂಡ ಆಗುತ್ತಿಲ್ಲವೆಂದು ಜನ ಆಕ್ರೋಶ ಹೊರ ಹಾಕ್ತಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಆರ್​ಟಿಐ ಕಾರ್ಯಕರ್ತ ಹತ್ಯೆ ಪ್ರಕರಣ; ಕೋರ್ಟ್​​ಗೆ ಶರಣಾದ ಆರೋಪಿ ಪಿಡಿಒ ಎ.ಟಿ.ನಾಗರಾಜ್

ಇನ್ನೂ ನೀಲಕಂಠ ಶಾಸ್ತ್ರಿ ಎಂಬುವವರ ಬಳಿ ಜಿಪಿಎಸ್ ಮಾಡಲು ಹದಿನೈದು ನೂರು ರೂಪಾಯಿಗೆ ಡಿಮ್ಯಾಂಡ್ ಇಟ್ಟಿರುತ್ತಾರೆ. ಅದಕ್ಕೆ ಖುದ್ದು ನೀಲಕಂಠ ಶಾಸ್ತ್ರಿ ಹೋಗಿ ಹಣ ಕೊಟ್ಟು ಜಿಪಿಎಸ್ ಮಾಡಲು ಮನವಿ ಮಾಡಿರುತ್ತಾನೆ. ನಂತರ ಬಂದು ಜಿಪಿಎಸ್ ಮಾಡಿಕೊಂಡು ಹೋಗಿದ್ದು ಆದ್ರೆ, ಆ ಬಿಲ್ ತಾಂತ್ರಿಕ ಕಾರಣ ಹೇಳಿ ರದ್ದು ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ರೆ ಅದು ನಮ್ಮ ಮಿಸ್ಟೆಕ್ ಅಲ್ಲ, ನಮ್ಮದು ಜಿಪಿಎಸ್ ಮಾಡುವುದಷ್ಟೇ ಕೆಲಸ ಬೇಕಾದ್ರೆ, ಮೇಲಾಧಿಕಾರಿಗಳನ್ನ ಕೇಳಿಕೊಳ್ಳಿ ಎಂದು ಹಾರಕೆ ಉತ್ತರ ನೀಡ್ತಿದ್ದಾರಂತೆ.

ಸರ್ಕಾರ ಏಳನೂರು ಜನರಿಗೂ ಮನೆಗೆ ಪರಿಹಾರ ನೀಡಿದ್ದು, ಪ್ರತಿಯೊಬ್ಬರ ಕಡೆಯಿಂದಲೂ ಪಿಡಿಒ ಒಂದು ಸಾರಿ ಜಿಪಿಎಸ್ ಮಾಡಿದರೆ ಐದು ಸಾವಿರವರೆಗೆ ಲಂಚ ಪಡೆಯುತ್ತಾನಂತೆ. ಎಂತಹ ಬಡವರೇ ಇದ್ರು, ಅವರಿಗೆ ಕಡಿಮೆ ಅಂದರೂ ಒಂದೂವರೆ ಸಾವಿರ ಹಣ ನೀಡಲೇಬೇಕಂತೆ. ಈಗಾಗಲೇ ಮೂರು ಬಾರಿ ಜಿಪಿಎಸ್ ಮಾಡಿದ್ದು, ಒಂದೂವರೆ ಸಾವಿರ ಅಂತಾ ಹಣ ಹಿಡಿದ್ರೂ, ಸುಮಾರು 50 ಲಕ್ಷದ ವರೆಗೂ ಹಣ ಆಗುತ್ತೆ. ಇನ್ನು ಹಣ ಕೊಟ್ಟರೂ ಕೆಲವರದ್ದು ಬಿಲ್ ಮಂಜೂರು ಮಾಡಿಸಿಲ್ಲ. ಈಗ ಕೇಳಿದರೆ ಸರ್ಕಾರಕ್ಕೆ ಕೇಳಿಕೊಳ್ಳಿ ಎಂದು ಪಿಡಿಒ ಶಿವಾನಂದ ಉಡಾಪೆ ಉತ್ತರ ನೀಡುತ್ತಿದ್ದಾರಂತೆ .

ಇದನ್ನೂ ಓದಿ:ಲೋಕಾಯುಕ್ತ ಪ್ರತ್ಯೇಕ ದಾಳಿ: ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಪಿಡಿಒ ಅಧಿಕಾರಿಗಳು ವಶಕ್ಕೆ

ಸದ್ಯ ಗ್ರಾಮದಲ್ಲಿ ಬಹುತೇಕ ಮನೆಗಳು ಅರ್ಧಕ್ಕೆ ನಿಂತು ಹೋಗಿದ್ದು, ಬಾಡಿಗೆ ಮನೆ, ತಗಡಿನ ಶೆಡ್​ಗಳಲ್ಲಿ ಜೀವನ ಮಾಡುತ್ತಿದ್ದಾರೆ. ರಾಜಾರೋಷವಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆದು ಇದೀಗ ಉಡಾಫೆ ಉತ್ತರ ಕೊಡ್ತಿರುವ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಇನ್ನೂಳಿದ ಬಿಲ್ ಗಳನ್ನ ಬಿಡುಗಡೆ ಮಾಡಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ನೆರೆ ಸಂತ್ರಸ್ತರು ಒತ್ತಾಯಿಸುತ್ತಿದ್ದಾರೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ