ಚಿಕ್ಕೋಡಿ: ಮಹಾರಾಷ್ಟ್ರದ ಕೋಯ್ನಾ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ (Rain) ಆದ ಪರಿಣಾಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ ಮತ್ತೆ ನೀರು ಬಿಡುಗಡೆ ಮಾಡಲಾಗಿದೆ. ರಾಜಾಪುರ ಬ್ಯಾರೇಜ್‌ನಿಂದ 4200 ಕ್ಯೂಸೆಕ್ ನೀರನ್ನು ಸೋಮವಾರ ಕೃಷ್ಣಾ ನದಿಗೆ ರಿಲೀಸ್ ಮಾಡಲಾಗಿದೆ. ಸದ್ಯ ಅಥಣಿ ತಾಲೂಕಿನ ದರೂರ ಸೇತುವೆವರೆಗೂ ನೀರು ತಲುಪಿದೆ.
ಮೊನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರ ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನಿನ್ನೆಯಷ್ಟೇ ಕುಡಚಿ-ಉಗಾರ ಸೇತುವೆವರೆಗೆ ನೀರು ತಲುಪಿದೆ. ಸದ್ಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಹಿನ್ನೆಲೆ 4200 ಕ್ಯೂಸೆಕ್ ನೀರು ರಿಲೀಸ್ ಮಾಡಿದ್ದು, ಈ ಭಾಗದ ಜನರು ಹರ್ಷಗೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಕೈಕೊಟ್ಟ ಮಳೆ: ಮೇವು, ನೀರಿಲ್ಲದೆ ಜಾನುವಾರುಗಳು ಕಂಗಾಲು
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ನೀರು ಬಿಡುಗಡೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಬಳಿಯಿರುವ ರಾಂಪುರ ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಇಷ್ಟು ದಿನ ನೀರಿಲ್ಲದೇ ಕೃಷ್ಣಾ ನದಿ ಬರಡು ಭೂಮಿಯಂತಾಗಿತ್ತು. ನದಿಯಲ್ಲಿ ನೀರಿಲ್ಲದೆ ಜಾನುವಾರು, ಕೃಷಿಗೆ ಸಮಸ್ಯೆಯಾಗಿತ್ತು. ಇದೇ ವೇಳೆ ನೀರು ಹರಿದು ಬರುತ್ತಿರುವುದರಿಂದ ಜನರು ಸಂತಸಗೊಂಡಿದ್ದಾರೆ.
ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ಅವರು ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಿನ ಅಗತ್ಯವಿದ್ದು, ಹಾಗಾಗಿ 6 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಬರದ ಛಾಯೆ, ಜಿಲ್ಲೆಯ 9 ತಾಲೂಕಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಜನರಿಗೆ ಸದ್ಯ ಕುಡಿಯುವ ನೀರು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉಜ್ಜನಿ, ಕೋಯ್ನಾ ಡ್ಯಾಂನಿಂದ ಕೃಷ್ಣಾ ಹಾಗೂ ಭೀಮಾ ನದಿಗೆ ತಲಾ 3 ಟಿಎಂಸಿ ಅಂತೆ ಒಟ್ಟು 6 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:27 pm, Mon, 3 July 23