ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ, ಮಸ್ಕಿ ಕಡೆಗೆ ಪ್ರಚಾರಕ್ಕೆ ತೆರಳಿದ ಕಾಂಗ್ರೆಸ್ ದಂಡು

|

Updated on: Mar 29, 2021 | 12:43 PM

ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆಯ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಸ್ಕಿಗೆ ಈ ನಾಯಕರು ತೆರಳಲಿದ್ದಾರೆ.

ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ, ಮಸ್ಕಿ ಕಡೆಗೆ ಪ್ರಚಾರಕ್ಕೆ ತೆರಳಿದ ಕಾಂಗ್ರೆಸ್ ದಂಡು
ನಾಮಪತ್ರ ಸಲ್ಲಿಸಿದ ದೃಶ್ಯ
Follow us on

ಬೆಳಗಾವಿ: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಸತೀಶ್ ಜಾರಕಿಹೊಳಿ‌ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅವರಿಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರು ಸತೀಶ್ ಜಾರಕಿಹೊಳಿ ಅವರಿಗೆ ನಾಮಪತ್ರ ಸಲ್ಲಿಸಲು ಜತೆಯಾದರು.

ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆಯ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಸ್ಕಿಗೆ ಈ ನಾಯಕರು ತೆರಳಲಿದ್ದಾರೆ.

ಸಿದ್ದರಾಮಯ್ಯಗೆ ಕಾದಿದ್ದ ಸತೀಶ್ ಜಾರಕಿಹೊಳಿ

ನಾಮಪತ್ರ ಸಲ್ಲಿಸಲು ಸಮಯ ನಿಗದಿ ಮಾಡಿಲ್ಲ. ಎಲ್ಲ ಘಳಿಗೆಗಳು ಒಳ್ಳೆಯದೇ, ಯಾವುದೂ ಕೆಟ್ಟದಿಲ್ಲ. ಕೆಟ್ಟ ಘಳಿಗೆ ಅನ್ನೋದು ವ್ಯವಸ್ಥೆಯಲ್ಲಿ ಇಲ್ಲ. ಒಳ್ಳೆಯದು ಮಾಡಿದರೆ ಒಳ್ಳೆಯದು, ಕೆಟ್ಟದು ಮಾಡಿದರೆ ಕೆಟ್ಟದ್ದು ಆಗುತ್ತದೆ. ಕಡಿಮೆ ಸಂಖ್ಯೆಯ ಜನರು ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ಜನರೆಲ್ಲ ಪಕ್ಷದ ಕಚೇರಿಯಲ್ಲಿಯೇ ಇರುತ್ತಾರೆ. ನಾಮಪತ್ರ ಸಲ್ಲಿಕೆ ಬಳಿಕ ಕಚೇರಿಗೆ ಬರುತ್ತೇವೆ ಎಂದು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆಗೂ ಮುನ್ನ ಹೇಳಿದ್ದರು.

ನಮಗೂ ಒಂದು ಅವಕಾಶ ಕೊಡಿ ಅಂತಾ ಮತದಾರರನ್ನು ಕೇಳುತ್ತೇವೆ. ಕಳೆದ 20 ವರ್ಷಗಳಿಂದ ಜಿಲ್ಲೆಯ ಜನರ ಸೇವೆ ಮಾಡಿದ್ದೇವೆ. ಅದೇ ಈ ಚುನಾವಣೆಯಲ್ಲಿ ಅನುಕೂಲವಾಗಲಿದೆ. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಇಲ್ಲಿಯೂ ಬಿಜೆಪಿ ಬಂದರೆ ಉತ್ತಮ ಎಂದು ಬಿಜೆಪಿಯವರು ಹೇಳಿಕೆ ಸತ್ಯ ಎನ್ನಲಾಗುವುದಿಲ್ಲ. ಕೆಲಸ ಮಾಡಲು ಯಾವುದೇ ಸರಕಾರ ಅಡ್ಡಿ ಬರೋದಿಲ್ಲ. ಒಂದು ತಿಂಗಳಿಂದ ಚುನಾವಣೆ ತಯಾರಿ ಮಾಡಿದ್ದೇವೆ. ರಣತಂತ್ರದ ವಿಚಾರವನ್ನು ಬಹಿರಂಗಪಡಿಸೋದಿಲ್ಲ. ಪಕ್ಷದಲ್ಲಿ ಅವರವರ ಕೆಲಸ ಅವರು ಮಾಡುತ್ತಾರೆ. ನಾನು ನಾಮಪತ್ರ ಸಲ್ಲಿಕೆ ಸಿದ್ಧತೆಯಲ್ಲಿದ್ದೇನೆ ಎಂದು ಸತೀಶ್ ಜಾರಕಿಹೊಳಿ ವಿವರಿಸಿದ್ದರು.

ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ

ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆಗಾಗಿ ನಿನ್ನೆ ಬೆಳಗಾವಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿಯವರನ್ನು ಭೇಟಿ ಮಾಡಿ ಜೈನ ಮುನಿಗಳಿಂದ ಆಶೀರ್ವಾದ ಪಡೆದಿದ್ದರು. ವಿರೋಧಿಗಳು ಹೆಚ್ಚಾದಂತೆ ನೀವು ಬೆಳತ್ತೀರಿ,‌ ಸಿಎಂ ಆಗ್ತಿರಿ. ನೀವು ಕನಕಪುರದ ಬಂಡೆ, ಕಲ್ಲನ್ನು ಕಟಿದು ಕಟಿದು ಮೂರ್ತಿ ಆಗಿದೆ. ವಿರೋಧಿಗಳು ಎಷ್ಟು ಹೆಚ್ಚಾಗ್ತಾರೆ ಅಷ್ಟು ಮೂರ್ತಿ ಆಗ್ತಿರಿ. ಅಂದರೆ ರಾಜ್ಯದ ಸಿಎಂ ಆಗುತ್ತೀರಿ ಎಂದು ಜೈನ ಮುನಿಗಳು ಆಶೀರ್ವಾದ ಮಾಡಿದ್ದರು.

ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ. ಜೈನ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಬಹಳ ನಂಟಿದೆ. ಹಸ್ತದ ಗುರುತು ಜೈನ ಧರ್ಮದ ಗುರುಗಳ ನೀಡಿದ್ದರು. ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಯುಪಿಎ ಸಮಯದಲ್ಲಿ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ. ನನಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮುಖ್ಯ. ನಮ್ಮ ಪಕ್ಷಕ್ಕೆ ಅವರ ಆಶೀರ್ವಾದ ಮುಖ್ಯ ಇದ್ದು, ಪಡೆದಿದ್ದೇನೆ ಎಂದು ಡಿ ಕೆ ಶಿವಕುಮಾರ್ ಜೈನ ಮುನಿಗಳ ಆಶೀರ್ವಾದ ಪಡೆದು ಬಂದ ನಂತರ ಈ ರೀತಿ ಹಂಚಿಕೊಂಡಿದ್ದರು.

ಬಿಜೆಪಿಯಿಂದ ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣಾ ಕಣಕ್ಕೆ ಕಾಂಗ್ರೆಸ್​ನಿಂದ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಕಾರ್ಯತಂತ್ರ ಬದಲಿಸಿದೆ. ಅನುಕಂಪದ ಮತಗಳ ಮೇಲೆ ವಿಶ್ವಾಸವಿಟ್ಟು ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಟಿಕೆಟ್​ ನೀಡಿದೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ಹಿನ್ನೆಲೆಯಲ್ಲಿ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಿದರೆ ಯಾರೂ ಪ್ರಶ್ನಿಸುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರಬಲ ಅಭ್ಯರ್ಥಿ. ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿರುವ ಹಿನ್ನೆಲೆಯಲ್ಲಿ ಅನುಕಂಪದ ಅಲೆ ವರ್ಕೌಟ್ ಆಗುತ್ತೆ ಎಂದು ದಿ.ಸುರೇಶ್​ ಅಂಗಡಿ ಪತ್ನಿಗೆ  ಬಿಜೆಪಿ ಟಿಕೆಟ್​ ನೀಡಿದೆ. ಜೊತೆಗೆ, ಬೆಳಗಾವಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಹೀಗಾಗಿ, ಲಿಂಗಾಯತ ಸಮುದಾಯದ ಮಂಗಳಾಗೆ ಟಿಕೆಟ್​ ನೀಡಲಾಗಿದೆ.

ಇದನ್ನೂ ಓದಿ: DK Shivakumar Temple Run; ಬೆಳಗಾವಿ ಬೈ ಎಲೆಕ್ಷನ್, ಸತೀಶ್ ಜಾರಕಿಹೊಳಿ ನಾಮ ಪತ್ರ ಸಲ್ಲಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭರ್ಜರಿ ತಯಾರಿ

Tv9 Digital Live | ಬೆಳಗಾವಿ ಉಪಚುನಾವಣೆ ಕಣದಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಬಹುದು?

Published On - 12:23 pm, Mon, 29 March 21