Tv9 Digital Live | ಬೆಳಗಾವಿ ಉಪಚುನಾವಣೆ ಕಣದಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಬಹುದು?

ಉಪ ಚುನಾವಣೆಗಾಗಿ ಎರಡು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ನಿಟ್ಟಿನಲ್ಲಿ ರಮೆಶ್​ ಜಾರಕಿಹೊಳಿ ಪ್ರಕರಣದ ತನಿಖೆಯೂ ನಡೆಯುತ್ತಿದೆ. ಉಪ ಚುನಾವಣೆ ಹೇಗೆ ನಡೆಯಬಹುದು ಎಂಬ ಬಗ್ಗೆ ಟಿವಿ9 ಡಿಜಿಟಲ್​ ಸಂವಾದ ನಡೆಸಿತು.

Tv9 Digital Live | ಬೆಳಗಾವಿ ಉಪಚುನಾವಣೆ ಕಣದಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಬಹುದು?
ಆ್ಯಂಕರ್ ಹರಿಪ್ರಸಾದ್ ಮತ್ತು ದಿ ಹಿಂದು ಪತ್ರಿಕೆ ವರದಿಗಾರ ಹೃಷಿಕೇಶ್​ ಬಹದ್ದೂರ್​ ದೇಸಾಯಿ
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 26, 2021 | 6:42 PM

ಉಪಚುನಾವಣೆಗಾಗಿ ಎರಡು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್​ನಿಂದ ಸುರೇಶ್​ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ದಿ.ಸುರೇಸ್​ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿಗೆ ಸೀಟ್​ ಕೊಡಲಾಗಿದೆ. ಜೊತೆಗೆ ರಮೇಶ್​ ಜಾರಕಿಹೊಳಿ ಪ್ರಕರಣದ ತನಿಖೆಯೂ  ನಡೆಯುತ್ತಿದೆ. ಈ ಮಧ್ಯೆ ಉಪ ಚುನಾವಣೆಗೆ ಯಾವ ರೀತಿಯ ಸ್ವರೂಪ ಸಿಗಬಹುದು ಎಂಬುದರ ಕುರಿತಾಗಿ ಟಿವಿ9 ಕನ್ನಡ ಸಂವಾದ ನಡೆಸಿತು. ಚರ್ಚೆಯಲ್ಲಿ ಕಾಂಗ್ರೆಸ್​ ವಕ್ತಾರ ನಾಗರಾಜ್​ ಯಾದವ್ ಹಾಗೂ ಬೆಳಗಾವಿಯ ದಿ ಹಿಂದು ಪತ್ರಿಕೆಯ ವರದಿಗಾರ ಹೃಷಿಕೇಶ್​ ಬಹದ್ದೂರ್​ ದೇಸಾಯಿ ಪಾಲ್ಗೊಂಡರು. ಆ್ಯಂಕರ್​ ಹರಿಪ್ರಸಾದ್​ ಈ ಚರ್ಚೆ ನಡೆಸಿಕೊಟ್ಟರು.

ಸಂವಾದದ ಆರಂಭದಲ್ಲಿ ಮಾತನಾಡಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಳಾ, ಸುರೇಶ್​ ಅಂಗಡಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ಜನರಿಗೆ ಹತ್ತಿರದವರಾಗಿದ್ದಾರು. ಹೆಚ್ಚು ಜನಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರಷ್ಟೇ ಜವಾಬ್ದಾರಿಯನ್ನು ಹೊತ್ತು ಕೆಲಸವನ್ನು ಮಾಡುತ್ತೇನೆ ಎಂದು ಮಂಗಳಾ ಹೇಳಿದರು.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ಹೃಷಿಕೇಶ್​ ಬಹದ್ದೂರ್​ ದೇಸಾಯಿ ಮಾತನಾಡಿ, ಬೆಳಗಾವಿಯಲ್ಲಿ ಕಾಂಗ್ರೆಸ್​ನಿಂದ ಸತೀಶ್​ ಜಾರಕಿಹೊಳಿ ಕಣಕ್ಕೆ ಇಳಿದಿದ್ದಾರೆ. ಜೊತೆಗೆ ರಮೇಶ್​ ಜಾರಕಿಹೊಳಿ ಪ್ರಕರಣವೂ ಒಂದೆಡೆ ಇದೆ. ಈ ನಿಟ್ಟಿನಲ್ಲಿ ಮಾತನಾಡುವುದಾದರೆ, ರಮೇಶ್​ ಜಾರಕಿಹೊಳಿ ಅವರಿಗೆ ಶಿಕ್ಷೆಯಾಗುತ್ತದೆಯೋ ಅಥವಾ ಷಡ್ಯಂತರ ಮಾಡಿದವರಿಗೆ ಶಿಕ್ಷೆಯಾಗುತ್ತದೆಯೋ ಎಂಬುದು ಜನರಿಗೆ ಲೆಕ್ಕಕ್ಕೆ ಬರುವುದಿಲ್ಲ. ಆದರೆ ಇವರ ಪ್ರಕರಣ ಸತೀಶ್​ ಜಾರಕಿಹೊಳಿ ಅವರ ಪರ ಮತದಾನಕ್ಕೆ ಕಾರಣ ಆಗಬಹುದು. ಮತದಾರರ ಮನಸ್ಸಿನಲ್ಲಿ ಅನುಕಂಪ ಮೂಡಬಹುದು. ರಮೇಶ್​ ಜಾರಕಿಹೊಳಿಯವರ ಕುಟುಂಬ ಎಂಬ ಕಾರಣವನ್ನು ಮತದಾನದ ವೇಳೆ ಜನರು ಯೋಚಿಸುತ್ತಾರೆ. ಬಿಜೆಪಿ ಪಕ್ಷದಿಂದ ನಿಂತ ಮಂಗಳಾ ಅಂಗಡಿಯವರು ಶಾಂತ ಸ್ವಭಾವದರು. ಒಳ್ಳೆಯವರು ಎಂಬ ಮಾತುಗಳು ಜನರಿಗೆ ಮೂಡಬಹುದು ಎಂದು ಅಭಿಪ್ರಾಯಪಟ್ಟರು.

ಸುರೇಶ್​ ಅಂಗಡಿ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ. ಮೊದಲು ಬಾರಿ ಗೆದ್ದಾಗಿನಿಂದಲೂ ಬೆಳಗಾವಿ ಬಿಜೆಪಿಯ ಸೀಟು ಪಕ್ಕಾ ಎಂಬುದು ಕೇಳಿ ಬರುತ್ತಿತ್ತು. ಮೊದಲಿನಿಂದಲೂ ಬಿಜೆಪಿಯವರಿಗೆ ಬೆಳಗಾವಿಯಲ್ಲಿ ಗೆಲುವಿನ ವಿಶ್ವಾಸ ಇತ್ತು. ಈಗಿನ ಚುನಾವಣೆ ಅಷ್ಟು ಸುಲಭವಿಲ್ಲ. ಏಕೆಂದರೆ ಕೃಷಿ ಕಾಯ್ದೆ ವಿರೋಧದ ವಿಷಯ, ಪೆಟ್ರೋಲ್​- ಡೀಸೆಲ್​ ಏರಿಕೆ ಇವೆಲ್ಲವೂ ಚರ್ಚೆಗೆ ಬರಬಹುದು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್​ನ ಸತೀಶ್ ಜಾರಕಿಹೊಳಿಯವರು ಪಕ್ಷ ಹೇಳಿದ್ದಕ್ಕೆ ನಾನು ಚುನಾವಣೆಗೆ ನಿಂತಿದ್ದೇನೆ ಎನ್ನುತ್ತಿರುವ ಮಾತನ್ನು ನಾನು ನಂಬುವುದಿಲ್ಲ. ಅವರಿಗೆ ಚುನಾವಣೆಯಲ್ಲಿ ನಿಲ್ಲುವ ಆಸೆ ಇದೆ. ಎಲ್ಲಾ ಕಡೆ ಹೋಗಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನ ಮಾಡುತ್ತಾರೆ. ಆದರೆ, ಸಿಡಿ ಪ್ರಕರಣ ಬಿಜೆಪಿ ಸುತ್ತಾ ಸುತ್ತಬೇಕಿತ್ತು. ಬದಲಾಗಿ ಈಗ ರಮೇಶ್​ ಅವರ ಸುತ್ತಲೇ ಸುತ್ತ ಬಹುದು. ಇದು ಕಾಂಗ್ರೆಸ್​ಗೆ ದೊಡ್ಡ ಹೊಡೆತವಾಗುತ್ತದೆ. ಜನರಿಗೆ ರಮೇಶ್​ ಜಾರಕಿಹೊಳಿ ಅಥವಾ ಸತೀಶ್​ ಜಾರಹೊಳಿಯವರ ಮನೆಯವರೆಲ್ಲ ರಾಜಕೀಯದಲ್ಲಿ ಒಂದೇ ಎಂಬ ಅನಿಸಿಕೆ ಇದೆ. ಇದು ಕಾಂಗ್ರೆಸ್​ಗೆ ಹೊಡೆತ ತರಬಹುದು ಎಂದು ಅಭಿಪ್ರಾಯ ಹಂಚಿಕೊಂಡರು.

ಬೆಳಗಾವಿಯ ಚುನಾವಣೆಯನ್ನು ನೋಡಿದರೆ ಜಾತಿ ಆಧಾರಿತ ಎಂಬುದನ್ನು ಪುನಃ ಹೇಳಬೇಕಂತಿಲ್ಲ. ಬೆಳಗಾವಿ ಕ್ಷೇತ್ರಕ್ಕೆ ಬಂದಾಗಲೂ ಲಿಂಗಾಯತ ಅಭ್ಯರ್ಥಿಗಳೇ ಹೆಚ್ಚು ಗೆದ್ದು ಬಂದಿದ್ದಾರೆ. ಹೀಗಿದ್ದಾಗ ಯಾವ ಸ್ವರೂಪದಲ್ಲಿ ಚುನಾವಣೆ ನಡೆಯಬಹುದು ಎಂಬ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್​ ವಕ್ತಾರ ನಾಗರಾಜ್​ ಮಾತನಾಡಿ, ಸಿಡಿ ವಿಚಾರವನ್ನು ರಾಜಕಾರಣಕ್ಕೆ ಎಳೆಯಲು ಕಾಂಗ್ರೆಸ್​ ಹೊರಟಿಲ್ಲ. ಅಭಿವೃದ್ಧಿ ವಿಚಾರವನ್ನೇ ಜನರ ಮುಂದಿಟ್ಟು ಚುನಾವಣೆ ಎದುರಿಸಲು ಮುಂದಾಗಿದೆ. ಸತೀಶ್​ ಜಾರಕಿಹೊಳಿ ಸರಳತೆಗೆ ಹೆಸರಾದವರು. ಅಭಿವೃದ್ಧಿಯ ವಿಚಾರವನ್ನೇ ಮುಂದಿಟ್ಟು ಮತ ಕೇಳುತ್ತೇವೆ ಎಂದು ಹೇಳಿದರು.

ರಮೇಶ್​ ಜಾರಕಿಹೊಳಿ ಮೇಲಿನ ಸಿಟ್ಟನ್ನು ಸತೀಶ್​ ಜಾರಕಿಹೊಳಿ ಅವರ ಮೇಲೆ ತೀರಿಸಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಟುಂಬ ಎಂದಾಗ ಅವರೆಲ್ಲರೂ ಒಂದೇ. ಆದರೆ ಚುನಾವಣೆ ಪಕ್ಷದ ವಿಚಾರ ಬಂದಾಗ ಸತೀಶ್​ ಅವರು ಕಾಂಗ್ರೆಸ್​ ಪರ. ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ ಬಿಜೆಪಿ ನಾಯಕರು ಇದೀಗ ಮಂಗಳಾ ಅಂಗಡಿಯವರಿಗೆ ಸೀಟು ಕೊಟ್ಟಿದ್ದಾರೆ. ರಮೇಶ್​ ಜಾರಕಿಹೊಳಿಯವರನ್ನು ನಿಲ್ಲಿಸಿದರೆ, ಸಿಡಿ ಪ್ರಕರಣದಿಂದ ಗೆಲುವು ಕಷ್ಟವಾಗಬಹುದು ಎಂಬ ಭಯದಿಂದ ಕುಟುಂಬ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: ಟಿವಿ9 ವರದಿಗೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೊಸ ವೆಬ್​ಸೈಟ್​ಗೆ ಆದೇಶ

ಇದನ್ನೂ ಓದಿ: 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ

Published On - 6:41 pm, Fri, 26 March 21