ಎಲ್ಲ ಘಳಿಗೆಗಳು ಒಳ್ಳೆಯದೇ, ಯಾವುದೂ ಕೆಟ್ಟದಿಲ್ಲ: ಸಿದ್ದರಾಮಯ್ಯ ಬಂದ ತಕ್ಷಣ ನಾಮಪತ್ರ ಸಲ್ಲಿಸುವೆ -ಸತೀಶ್ ಜಾರಕಿಹೊಳಿ
ಎಲ್ಲ ಘಳಿಗೆಗಳು ಒಳ್ಳೆಯದೇ, ಯಾವುದೂ ಕೆಟ್ಟದಿಲ್ಲ. ಕೆಟ್ಟ ಘಳಿಗೆ ಅನ್ನೋದು ವ್ಯವಸ್ಥೆಯಲ್ಲಿ ಇಲ್ಲ. ಒಳ್ಳೆಯದು ಮಾಡಿದರೆ ಒಳ್ಳೆಯದು, ಕೆಟ್ಟದು ಮಾಡಿದರೆ ಕೆಟ್ಟದ್ದು. ಕಡಿಮೆ ಸಂಖ್ಯೆಯ ಜನರು ತೆರಳಿ ನಾಮಪತ್ರ ಸಲ್ಲಿಸುತ್ತೇವೆ; ಸತೀಶ್ ಜಾರಕಿಹೊಳಿ
ಬೆಳಗಾವಿ: ಈ ಹಿಂದೆ ಮೂಢನಂಬಿಕೆ ವಿರೋಧಿಸಿ ಸ್ಮಶಾನದಲ್ಲಿ ಅಮಾವಾಸ್ಯೆ ರಾತ್ರಿ ಊಟ ಮಾಡಿದ್ದ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಪಕ್ಷ ನಾಯಕ ಸಿದ್ದರಾಮಯ್ಯ ಬಂದ ತಕ್ಷಣ ನಾಮಪತ್ರ ಸಲ್ಲಿಸುತ್ತೇವೆ. ನಾಮಪತ್ರ ಸಲ್ಲಿಸಲು ಸಮಯ ನಿಗದಿ ಮಾಡಿಲ್ಲ. ಎಲ್ಲ ಘಳಿಗೆಗಳು ಒಳ್ಳೆಯದೇ, ಯಾವುದೂ ಕೆಟ್ಟದಿಲ್ಲ. ಕೆಟ್ಟ ಘಳಿಗೆ ಅನ್ನೋದು ವ್ಯವಸ್ಥೆಯಲ್ಲಿ ಇಲ್ಲ. ಒಳ್ಳೆಯದು ಮಾಡಿದರೆ ಒಳ್ಳೆಯದು, ಕೆಟ್ಟದು ಮಾಡಿದರೆ ಕೆಟ್ಟದ್ದು ಆಗುತ್ತದೆ. ಕಡಿಮೆ ಸಂಖ್ಯೆಯ ಜನರು ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ಜನರೆಲ್ಲ ಪಕ್ಷದ ಕಚೇರಿಯಲ್ಲಿಯೇ ಇರುತ್ತಾರೆ. ನಾಮಪತ್ರ ಸಲ್ಲಿಕೆ ಬಳಿಕ ಕಚೇರಿಗೆ ಬರುತ್ತೇವೆ ಎಂದು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಮಗೂ ಒಂದು ಅವಕಾಶ ಕೊಡಿ ಅಂತಾ ಮತದಾರರನ್ನು ಕೇಳುತ್ತೇವೆ. ಕಳೆದ 20 ವರ್ಷಗಳಿಂದ ಜಿಲ್ಲೆಯ ಜನರ ಸೇವೆ ಮಾಡಿದ್ದೇವೆ. ಅದೇ ಈ ಚುನಾವಣೆಯಲ್ಲಿ ಅನುಕೂಲವಾಗಲಿದೆ. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಇಲ್ಲಿಯೂ ಬಿಜೆಪಿ ಬಂದರೆ ಉತ್ತಮ ಎಂದು ಬಿಜೆಪಿಯವರು ಹೇಳಿಕೆ ಸತ್ಯ ಎನ್ನಲಾಗುವುದಿಲ್ಲ. ಕೆಲಸ ಮಾಡಲು ಯಾವುದೇ ಸರಕಾರ ಅಡ್ಡಿ ಬರೋದಿಲ್ಲ. ಒಂದು ತಿಂಗಳಿಂದ ಚುನಾವಣೆ ತಯಾರಿ ಮಾಡಿದ್ದೇವೆ. ರಣತಂತ್ರದ ವಿಚಾರವನ್ನು ಬಹಿರಂಗಪಡಿಸೋದಿಲ್ಲ. ಪಕ್ಷದಲ್ಲಿ ಅವರವರ ಕೆಲಸ ಅವರು ಮಾಡುತ್ತಾರೆ. ನಾನು ನಾಮಪತ್ರ ಸಲ್ಲಿಕೆ ಸಿದ್ಧತೆಯಲ್ಲಿದ್ದೇನೆ ಎಂದು ಸತೀಶ್ ಜಾರಕಿಹೊಳಿ ವಿವರಿಸಿದರು.
ಈ ಹೇಳಿಕೆ ನೀಡಿದ ಕೆಲ ಹೊತ್ತಿನ ನಂತರ ಕೈ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಸಿರು ಶಾಲು ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಕೆಗೆ ಆಗಮಿಸಿದರು. ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ, ಎಂಬಿ ಪಾಟೀಲ್, ಎಸ್.ಆರ್ ಪಾಟೀಲ್ ಮುಂತಾದವರು ಜತೆಯಾದರು.
ಇದನ್ನೂ ಓದಿ: ‘ಗೋ ಬ್ಯಾಕ್ ಡಿಕೆಶಿ’ ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶ; ಪ್ರತಿಭಟನೆಗೂ, ನಮಗೂ ಸಂಬಂಧವಿಲ್ಲ ಎಂದ ಸತೀಶ್ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ: ಸತೀಶ್ ಜಾರಕಿಹೊಳಿ ಹೆಸರೇ ಬಹುತೇಕ ಫೈನಲ್ ಎಂದ ಸಿದ್ದರಾಮಯ್ಯ
Published On - 11:28 am, Mon, 29 March 21