ಈ ಮನೆಯಿಂದ ಸಂತಸದಿಂದ ಹೋಗಬೇಕು ಅಂದುಕೊಂಡಿದ್ದೆ..: ಎಸ್​ಆರ್​ ಪಾಟೀಲ್ ಭಾವುಕ ವಿದಾಯ ಭಾಷಣ

| Updated By: ganapathi bhat

Updated on: Dec 24, 2021 | 8:08 PM

ಸಹಕಾರ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ. ಸರ್ವಪಕ್ಷಗಳ ಸದಸ್ಯರು, ಸಚಿವಾಲಯದ ಸಿಬ್ಬಂದಿಗೆ ಧನ್ಯವಾದಗಳು ಎಂದು ಪರಿಷತ್​ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್​ ವಿದಾಯ ಭಾಷಣ ಮಾಡಿದ್ದಾರೆ.

ಈ ಮನೆಯಿಂದ ಸಂತಸದಿಂದ ಹೋಗಬೇಕು ಅಂದುಕೊಂಡಿದ್ದೆ..: ಎಸ್​ಆರ್​ ಪಾಟೀಲ್ ಭಾವುಕ ವಿದಾಯ ಭಾಷಣ
ಎಸ್​ಆರ್ ಪಾಟೀಲ್
Follow us on

ಬೆಳಗಾವಿ: ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್​ ವಿದಾಯ ಭಾಷಣ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿ ಸದನ ನಡೆಸಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದಕ್ಕೆ ಜನರು ಸಂತಸ ಪಟ್ಟಿದ್ದಾರೆ. ಈ ಮನೆಯಿಂದ ಸಂತಸದಿಂದ ಹೋಗಬೇಕು ಅಂದುಕೊಂಡಿದ್ದೆ. ಆದರೆ ಕೆಲವು ಚರ್ಚೆಯಿಂದ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುವೆ ಎಂದು ವಿದಾಯ ಭಾಷಣದ ವೇಳೆ ಎಸ್.ಆರ್. ಪಾಟೀಲ್​ ಭಾವುಕರಾಗಿದ್ದಾರೆ.

ಜೆ.ಹೆಚ್. ಪಟೇಲ್, ಎಸ್.ಆರ್. ಬೊಮ್ಮಾಯಿ ಅವರನ್ನು ನೋಡಿದ್ದೇನೆ. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ನಮಗೆಲ್ಲ ಮಾದರಿ. ಈ ಕಾಲದಲ್ಲೂ ಒಂದು ಪೈಸೆ ಖರ್ಚು ಮಾಡದೆ ಗೆದ್ದು ಬಂದಿದ್ದಾರೆ. ಎಂ.ಸಿ. ನಾಣಯ್ಯನವರ ಬಗ್ಗೆ ಮಾತನಾಡಲು ನನ್ನ ಬಳಿ ಪದಗಳಿಲ್ಲ. ಸಹಕಾರ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ. ಸರ್ವಪಕ್ಷಗಳ ಸದಸ್ಯರು, ಸಚಿವಾಲಯದ ಸಿಬ್ಬಂದಿಗೆ ಧನ್ಯವಾದಗಳು ಎಂದು ಪರಿಷತ್​ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್​ ವಿದಾಯ ಭಾಷಣ ಮಾಡಿದ್ದಾರೆ.

ವಿರೋಧ ಪಕ್ಷಗಳ ಸದಸ್ಯರನ್ನು ಕಾಯಿಸಿರುವುದು ಸರಿಯಲ್ಲ. ಜಿದ್ದಿಗೆ ಬಿದ್ದು ಬಿಲ್ ಪಾಸ್​ ಆಗಲೇಬೇಕೆಂದು ಹೀಗೆ ಮಾಡಿದ್ದರು. ಮತಾಂತರ ನಿಷೇಧ ಬಿಲ್ ವಿಚಾರದಲ್ಲಿ ಒಂದಿಷ್ಟು ಗೊಂದಲವಾಯ್ತು. ಜನಪರ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿತ್ತು. ಕಲಾಪದ ಕೊನೆ ಗಳಿಗೆಯಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ನಾನು ಸುದೀರ್ಘವಾಗಿ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿರುವುದು ತೃಪ್ತಿಯಿದೆ ಎಂದು ಬಳಿಕ ಬೆಳಗಾವಿಯ ಸುವರ್ಣಸೌಧದಲ್ಲಿ ಎಸ್.ಆರ್.ಪಾಟೀಲ್​ ಹೇಳಿಕೆ ನೀಡಿದ್ದಾರೆ.

ನನ್ನ ರಾಜಕೀಯದಲ್ಲಿ ಮನೆಯವರು ಮೂಗು ತೂರಿಸಿಲ್ಲ
ಈ ಬಾರಿಯ ಪರಿಷತ್​ ಚುನಾವಣೆಯಲ್ಲಿ ಟಿಕೆಟ್​ ಕೈತಪ್ಪಿದ ವಿಚಾರವಾಗಿ ಬಾಗಲಕೋಟೆಯಲ್ಲಿ ಎಸ್.ಆರ್. ಪಾಟೀಲ್ ಪ್ರತಿಕ್ರಿಯೆ ನೀಡಿದ್ದರು. ಪಕ್ಷದ ನಿರ್ಣಯವನ್ನು ಗೌರವಿಸುವೆ, ಸ್ವಾಗತಿಸುತ್ತೇನೆ. ಟಿಕೆಟ್ ಸಿಗುತ್ತೆ ಎಂದು ನೂರಕ್ಕೆ ನೂರರಷ್ಟು ವಿಶ್ವಾಸವಿತ್ತು. ಆದರೆ, ಏಕೆ ಟಿಕೆಟ್ ನಿರಾಕರಿಸಿದರೋ ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸವನ್ನು ಮಾಡಿದ್ದೇನೆ. ಯಾಕೆ ಈ ನಿರ್ಧಾರ ಎಂದು ಮುಂದೆ ಗೊತ್ತಾಗಲಿದೆ ಎಂದು ಎಸ್.ಆರ್. ಪಾಟೀಲ್ ಪ್ರತಿಕ್ರಿಯೆ ನೀಡಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಆರೋಪದ ಬಗ್ಗೆ ಎಸ್​.ಆರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದರು. ನನ್ನ ದೃಷ್ಟಿಯಲ್ಲಿ ಕುಟುಂಬ ರಾಜಕಾರಣ ಒಳ್ಳೆಯದಲ್ಲ. ನನ್ನ ರಾಜಕೀಯದಲ್ಲಿ ಮನೆಯವರು ಮೂಗು ತೂರಿಸಿಲ್ಲ. ನನ್ನ ಕಾರ್ಯವ್ಯಾಪ್ತಿಯಲ್ಲಿ ಏನಾದ್ರು ಹೇಳಿದ್ರೆ ನಾನು ಕೇಳಲ್ಲ. ಅಪ್ಪನ ನಂತರ ಮಗ, ಮಗನ ನಂತರ ಮೊಮ್ಮಗ ಒಮ್ಮೊಮ್ಮೆ ರಾಜಕೀಯದಲ್ಲಿ ಅನಿವಾರ್ಯತೆಯೂ ಇರುತ್ತದೆ ಎಂದು ಎಸ್.ಆರ್ ಪಾಟೀಲ್ ಹೇಳಿದ್ದರು.

ಇದನ್ನೂ ಓದಿ: ಪರಿಷತ್ ಚುನಾವಣೆ ಟಿಕೆಟ್ ಕೈತಪ್ಪಿದ ವಿಚಾರ: ಪಕ್ಷದ ನಿರ್ಣಯ ಗೌರವಿಸುವೆ, ಸ್ವಾಗತಿಸುವೆ ಎಂದ ಎಸ್​ಆರ್ ಪಾಟೀಲ್

ಇದನ್ನೂ ಓದಿ: ಎಸ್​ಆರ್ ಪಾಟೀಲ್​ಗೆ ತಪ್ಪಿದ ಪರಿಷತ್ ಚುನಾವಣೆ ಟಿಕೆಟ್; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ