ಬೆಳಗಾವಿ: ಕರ್ನಾಟಕದಲ್ಲೀಗ ವಿಧಾನಪರಿಷತ್ ಚುನಾವಣೆ ಕಾವೇರಿದೆ. ಬೆಳಗಾವಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಂದಿನಂತೆ ಬಿಜೆಪಿ ವಿರುದ್ಧ ಹರಿಹಾಯ್ದರು. ಈ ವೇಳೆ ಬಾಯಿತಪ್ಪಿ ಸಾಲಮನ್ನಾ ಮಾಡಿದ್ದು ನರೇಂದ್ರ ಮೋದಿ ಎಂದು ಹೇಳಿದರಾದರೂ, ತಕ್ಷಣವೇ ಅದನ್ನು ತಿದ್ದಿಕೊಂಡರು. ಸಾಲಮನ್ನಾ ಮಾಡಿದ್ದು ಮನಮೋಹನ್ ಸಿಂಗ್ ಎಂದು ಹೇಳಿದರು. ಐದು ರಾಜ್ಯಗಳಲ್ಲಿ ಸೋತ ಬಳಿಕ ಕೃಷಿ ಕಾಯ್ದೆ ವಾಪಸ್ ಪಡೆಯಲಾಗಿದೆ ಎಂದು ಟೀಕಿಸಿದರು. ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ 700 ರೈತರು ಮೃತಪಟ್ಟರು. ಅವರ ಸಾವುಗಳಿಗೆ ನರೇಂದ್ರ ಮೋದಿ. ಅವರಿಗೆ ರೈತರ ಬಗ್ಗೆ ಕಾಳಜಿಯಾಗಲಿ, ಅವರ ಬಗ್ಗೆ ಮಾತನಾಡುವ ನೈತಿಕತೆಯಾಗಲಿ ಇಲ್ಲ. ನಾನು ಕೊಟ್ಟ ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ ನಿಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
2023ರಲ್ಲಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ. ಅದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ರಾಜ್ಯದ ಜನ ಈ ಸರ್ಕಾರ ಯಾವಾಗ ತೊಲಗುತ್ತೆ ಎಂದು ಶಾಪ ಹಾಕುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಈ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ಅಧಿಕಾರಕ್ಕೆ ಬಂದ ನಂತರ ಇವರು ಒಂದೇಒಂದು ಕೆಲಸವನ್ನಾದರೂ ಮಾಡಿದ್ದಾರಾ? ನಾನು ಮುಖ್ಯಮಂತ್ರಿ ಆಗಿದ್ದಾಗ ವರ್ಷಕ್ಕೆ 3 ಲಕ್ಷ ಮನೆ ಕೊಟ್ಟಿದ್ದೆ. ನಮ್ಮ ಸರ್ಕಾರವಿದ್ದಾಗ 7 ಕೆಜಿ ಅಕ್ಕಿ ಕೊಡ್ತಿದ್ದೆ, ಈಗ 5 ಕೆಜಿ ಕೊಡ್ತಿದ್ದಾರೆ ಎಂದು ಟೀಕಿಸಿದರು.
ನಾವು ಘೋಷಿಸಿದ ಕಾರ್ಯಕ್ರಮಗಳಿಗೆ ಇವರು ಗುದ್ದಲಿ ಪೂಜೆ ಮಾಡ್ತಿದ್ದಾರೆ. ವಿವೇಕರಾವ್ ಪಾಟೀಲ್‌ಗೆ ಸಿದ್ದರಾಮಯ್ಯ ಟಿಕೆಟ್ ಕೊಡದೇ ಮೋಸ ಮಾಡಿದ್ರು ಅಂತಾ ರಮೇಶ್ ಜಾರಕಿಹೊಳಿ ಹೇಳ್ತಿದ್ದಾರೆ. ನಮ್ಮ ಅಭ್ಯರ್ಥಿ ವಿರುದ್ಧ ವಿವೇಕರಾವ್ ಪಾಟೀಲ್ ಗೆದ್ದರಾದರೂ, ಗೆದ್ದ ಬಳಿಕ ಅವರು ನಮ್ಮ ಪಕ್ಷಕ್ಕೆ ಬರಲಿಲ್ಲ. ಪಕ್ಷಕ್ಕೆ ಬರದೆ ಇರುವವರಿಗೆ ಟಿಕೆಟ್ ಕೊಡಬೇಕೆ? ಅವರು ರಮೇಶ್ ಜಾರಕಿಹೊಳಿ ಅನುಯಾಯಿ. ನಿಮಗೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ತಮ್ಮನ ಬದಲು ವಿವೇಕರಾವ್ ಪಾಟೀಲರನ್ನೇ ನಿಲ್ಲಿಸಬೇಕಿತ್ತು. ಕಾಂಗ್ರೆಸ್‌ನಿಂದ ಮೂವರು ಕುರುಬರಿಗೆ ಟಿಕೆಟ್ ಕೊಟ್ಟಿದ್ದೇವೆ. ನೀವು ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದೀರಿ ಎಂದು ಪ್ರಶ್ನಿಸಿದರು.
ಸ್ವಾರ್ಥಕ್ಕಾಗಿ, ಹೆದರಿಸಿ ರಾಜಕಾರಣ ಮಾಡುವುದಲ್ಲ. ಸ್ವಾತಂತ್ರ್ಯಕ್ಕಾಗಿ ಒಬ್ಬರಾದರೂ ಹುತಾತ್ಮರಾಗಿದ್ದಾರಾ? ಬಿಜೆಪಿಯವರು ನಮಗೆ ದೇಶ ಭಕ್ತಿ ಹೇಳಿಕೊಡ್ತಿದ್ದಾರೆ. ಗಾಂಧೀಜಿಯವರನ್ನ ಕೊಂದು ಹಾಕಿದವರು ಇದೇ ಆರ್ಎಸ್ಎಸ್ನವರು. ಗೋಡ್ಸೆ ಪಳೆಯುಳಿಕೆಗಳೇ ಈಗಿನ ಆರ್‌ಎಸ್‌ಎಸ್, ಬಿಜೆಪಿಯವರು. ನರೇಂದ್ರ ಮೋದಿ ಆರ್ಎಸ್ಎಸ್ನಿಂದ ಬಂದವರು. ಈ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನಿಂದ ಬಂದಿಲ್ಲ. ಲಾಟರಿ ಹೊಡೆದು ಸಿಎಂ ಆಗಿದ್ದಾರೆ. ಇವರನ್ನು ಕಿತ್ತು ಹಾಕಲು ಈಶ್ವರಪ್ಪ ಮಾತಾಡ್ತಿದ್ದಾನೆ ಎಂದು ಏಕವಚನದಲ್ಲಿ ಟೀಕಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಭೇಟಿ ಮಾಡುವುದು ತಪ್ಪಾ? ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಇದನ್ನೂ ಓದಿ: ಮೋದಿ-ದೇವೇಗೌಡ ಭಾಯಿಭಾಯಿ: ಜೆಡಿಎಸ್ ನಾಯಕ ಎಚ್ಡಿ ದೇವೇಗೌಡ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
Published On - 3:16 pm, Sun, 5 December 21