ಆ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಮದುವೆ ನಡೆದಿತ್ತು. ಮದುವೆಗೆ ಬಂದ ಬಂಧುಗಳು ವಧು ವರರಿಗೆ ಶುಭ ಹಾರೈಸಿ, ಊಟದ ಹಾಲ್ ನತ್ತ ಮುಖ ಮಾಡ್ತಿದ್ದರು. ದೂರದ ಊರಿನಿಂದ ಬಂದವರಿಗೆ ವೇದಿಕೆ ಮೇಲೆ ಹೋಗಿ ನವ ದಂಪತಿಗೆ ವಿಷ್ ಮಾಡಿ ಹೋಗಬೇಕು ಅನ್ನೋ ತರಾತುರಿಯಲ್ಲಿದ್ದರು. ಆದ್ರೇ ತುಂಬಿದ್ದ ಕಲ್ಯಾಣ ಮಂಟಪಕ್ಕೆ ಎಂಟ್ರಿಯಾಗಿದ್ದ ಅದೊಬ್ಬ ಕತರ್ನಾಕ್ ಕಳ್ಳನು ನೋಡ ನೋಡ್ತಿದ್ದಂತೆ ಅದೊಂದು ಪರ್ಸ್ ಎಗರಿಸಿ ಎಸ್ಕೇಪ್ ಆಗಿದ್ದ. ಆದರೆ ಕಳ್ಳತನ ಮಾಡಿದ ಆರೆ ಗಂಟೆಯಲ್ಲಿ ಕಳ್ಳನ ಬಂಧವಾಗಿದೆ. ಪೊಲೀಸರ ಈ ಕಾರ್ಯಕ್ಕೆ ಮದುವೆಗೆ ಬಂದವರು ಧನ್ಯವಾದ ಹೇಳ್ತಿದ್ದಾರೆ.
ಬಂಧು ಬಳಗದಿಂದ ತುಂಬಿ ತುಳುಕುತ್ತಿರುವ ಮದುವೆ ಕಲ್ಯಾಣ ಮಂಟಪದಲ್ಲಿ ಅದೊಂದು ಖಾಲಿ ಕುರ್ಚಿಯ ಪಕ್ಕದಲ್ಲಿ ಬಂದು ಕುಳಿತಿದ್ದ. ಬಂದವನೇ ಅಲ್ಲೇ ಇದ್ದ ವ್ಯಾನಿಟಿ ಬ್ಯಾಗ್ ಒಂದಕ್ಕೆ ಕೈ ಹಾಕಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿದ್ದ. ಹೀಗೆ ಕಲ್ಯಾಣ ಮಂಟಪದಲ್ಲಿ ಕಳ್ಳತನ ಆಗಿ ಬಳಿಕ ಮಾಲ್ ಸಮೇತ ಆರೋಪಿ ತಗ್ಲಾಕ್ಕೊಂಡಿರುವುದು ಬೆಳಗಾವಿ ನಗರದಲ್ಲಿ.
ಹೌದು ಮಹಾಂತೇಶ್ ನಗರದ ವಾದಿರಾಜ್ ಕಲ್ಯಾಣ ಮಂಟಪದಲ್ಲಿ ನಿನ್ನೆ ದಾವಣಗೆರೆಯಿಂದ ಪಂಚಾಕ್ಷರಿ-ಲತಾ ದಂಪತಿ ಮದುವೆಗೆ ಬಂದಿದ್ದರು. ತಾಳಿ ಕಟ್ಟಿದ ಬಳಿಕ ವೇದಿಕೆ ಮೇಲೆ ಹೋಗಿ ನವ ಜೋಡಿಗೆ ಶುಭ ಹಾರೈಸಲು ಪಂಚಾಕ್ಷರಿ ಲತಾ ದಂಪತಿ ಹೋಗ್ತಾರೆ. ಆದರೆ ತಾವು ಕುಳಿತಿದ್ದ ಕುರ್ಚಿಯ ಮೇಲೆಯೇ ತಮ್ಮ ವ್ಯಾನಿಟಿ ಬ್ಯಾಗ್ ಇಟ್ಟು ವೇದಿಕೆಗೆ ಹೋಗ್ತಾರೆ.
ಇದನ್ನ ನೋಡಿದ ಖದೀಮ ಆ ವ್ಯಾನಿಟಿ ಬ್ಯಾಗ್ ಪಕ್ಕದ ಕುರ್ಚಿಯಲ್ಲಿ ಬಂದು ಕುಳಿತು ಯಾರಿಗೂ ಗೊತ್ತಾಗದಂತೆ ಬ್ಯಾಗ್ ಎಗರಿಸಿ ಅಲ್ಲಿಂದ ಎಸ್ಕೇಪ್ ಆಗ್ತಾನೆ. ಇತ್ತ ನೂತನ ವಧು-ವರರಿಗೆ ಶುಭ ಹಾರೈಸಿ ಕೆಳಗೆ ಬಂದ ಲತಾ ದಂಪತಿ ವ್ಯಾನಿಟಿ ಬ್ಯಾಗ್ ಗಾಗಿ ನೋಡಿದ್ದಾರೆ. ಈ ವೇಳೆ ಬ್ಯಾಗ್ ಕಾಣದಿದ್ದಾಗ ಅಲ್ಲೇ ಇದ್ದ ಸಂಬಂಧಿಕರನ್ನ ಕೇಳಿದ್ದಾರೆ. ಆದ್ರೇ ಯಾರೂ ನೋಡಿಲ್ಲ ಅಂತಾ ಹೇಳಿದಾಗ ಕೂಡಲೇ ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ಆಗ ಬ್ಯಾಗು ಕಳ್ಳತನ ಮಾಡಿಕೊಂಡು ಹೋಗುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯ ಮಾಳಮಾರುತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲರ್ಟ್ ಆದ ಪೊಲೀಸರು ಕೇಸ್ ದಾಖಲಿಸಿಕೊಂಡು ಕೇವಲ ಆರೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.
ಅಂದಹಾಗೆ ಆ ವ್ಯಾನಿಟಿ ಬ್ಯಾಗ್ ನಲ್ಲಿ ಮೂರೂವರೆ ಲಕ್ಷ ಮೌಲ್ಯದ ಚಿನ್ನಾಭರಣ, ಮೂರೂವರೆ ಸಾವಿರ ನಗದು ಇತ್ತು. ಇದನ್ನ ಪತ್ತೆಹಚ್ಚಲು ಟೀಮ್ ಮಾಡಿಕೊಂಡ ಮಾಳಮಾರುತಿ ಠಾಣೆ ಪೊಲೀಸರು ಘಟನೆ ನಡೆದ ಆರು ಗಂಟೆಯಲ್ಲಿ ಸಿಸಿಟಿವಿಯಲ್ಲಿನ ಗುರುತು ಆಧರಿಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಾದ ಇಮ್ತಿಯಾಜ್ ಹುಬ್ಳಿವಾಲೆ ನನ್ನು ಅರೆಸ್ಟ್ ಮಾಡಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಇತ್ತ ಕಳೆದುಕೊಂಡಿದ್ದ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನ ಹಾಗೂ ಹಣ ಸಮೇತ ಎಲ್ಲವನ್ನೂ ಅದರ ಮಾಲೀಕರಿಗೆ ವಾಪಾಸ್ ನೀಡಿದ್ದಾರೆ. ಪೊಲೀಸರು ಅಲರ್ಟ್ ಆದ ತಕ್ಷಣ ಎಚ್ಚೆತ್ತು, ಕಳ್ಳನ ಹಿಡಿಯುವುದರ ಜತೆಗೆ ಕಳೆದುಕೊಂಡ ಚಿನ್ನವನ್ನೂ ವಾಪಾಸ್ ಕೊಡಿಸಿದ್ದಕ್ಕೆ ಪಂಚಾಕ್ಷರಿ-ಲತಾ ದಂಪತಿ ಒಂದು ಪೊಲೀಸ್ ಸೆಲ್ಯೂಟ್ ಹೊಡೆದು, ಸಂತಸ ವ್ಯಕ್ತಪಡಿಸಿದ್ದಾರೆ.
ಮದುವೆ ಮನೆ ಇರಲಿ ಎಲ್ಲೇ ಇರಲಿ ನಮ್ಮ ಸಾಮಾಗ್ರಿಗಳು ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳಷ್ಟು ಮುಖ್ಯ. ಸ್ವಲ್ಪ ಯಾಮಾರಿದ್ರೂ ನಮ್ಮಲ್ಲೇ ಖದೀಮರು ನುಗ್ಗಿ ಕಷ್ಟಪಟ್ಟು ದುಡಿದು ತೆಗೆದುಕೊಂಡಿದ್ದ ಚಿನ್ನಾಭರಣ ಮತ್ತು ಹಣವನ್ನ ಕ್ಷಣಾರ್ಧದಲ್ಲೇ ದೋಚಿ ಬಿಡ್ತಾರೆ. ಸದ್ಯ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ಕಳೆದುಕೊಂಡಿದ್ದನ್ನ ಮರಳಿ ಕೊಡಿಸುವುದರಲ್ಲಿ ಸಕ್ಸಸ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯಾವುದಕ್ಕೂ ಸಾರ್ವಜನಿಕರು ಅಲರ್ಟ್ ಆಗಿರಿ.