ಬೆಳಗಾವಿ: ಈ ಬಾರಿಯ ಕಿತ್ತೂರು ಉತ್ಸವವನ್ನು ಜನಪ್ರತಿನಿಧಿಗಳ ಹೊರತಾಗಿಯೂ ಜನರೇ ಗೆಲ್ಲಿಸಿದ್ದಾರೆ. ಸೋಮವಾರ ಬೆಳಗ್ಗೆ ಅದ್ಧೂರಿ ಮೆರವಣಿಗೆ ಮೂಲಕ ನಾಂದಿ ಹಾಡಿದ್ದ ಉತ್ಸವದಲ್ಲಿ ಎರಡು ದಿನ ಜನ ಇನ್ನಿಲ್ಲದಂತೆ ಸಂಭ್ರಮಿಸಿದರು. ಈ ಹಬ್ಬಕ್ಕೆ ನಾಡಿನ ಮೂಲೆಮೂಲೆಯಿಂದ ಕನ್ನಡ ಹೃದಯಗಳು ಸಮಾವೇಶಗೊಂಡವು. ಮೂರು ಸಮಾನಾಂತರ ವೇದಿಕೆಗಳಲ್ಲಿ ತಲಾ 40 ಸಾಂಸ್ಕೃತಿ, ಸಾಹಿತ್ಯದ ಕಾರ್ಯಕ್ರಮಗಳು, ವಿವಿಧ ವಿಚಾರ ಗೋಷ್ಠಿಗಳು, ಐತಿಹಾಸಿಕ ಹಾಗೂ ಸೈದ್ಧಾಂತಿಕ ವಿಚಾರಗಳಿಗೆ ವೇದಿಕೆಯಾದವು. ಜನಪದ, ಲಂಬಾಣಿ, ಶಾಸ್ತ್ರೀಯ ಸಂಗೀತ, ಕಂಟೆಂಪರರಿ ನೃತ್ಯಗಳು, ಸಿನಿಮಾ ಗೀತೆಗಳ ಗಾಯನವನ್ನು ಜನ ತಡರಾತ್ರಿಯವರೆಗೂ ಆಸ್ವಾದಿಸಿದರು.
ಕಿತ್ತೂರು ಉತ್ಸವಕ್ಕೆ ಅದ್ದೂರಿ ತೆರೆ
ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ತೆರೆ ಬಿದ್ದಿದೆ. ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಚನ್ನಮ್ಮನ ಕಿತ್ತೂರು ಉತ್ಸವ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ನಿಧನ ಹಿನ್ನೆಲೆ ಎರಡು ದಿನಗಳ ಕಾಲ ನಡೆಸಲಾಯಿತು. ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ರೆ ಸಿಎಂ ಸ್ಥಾನ ಹೋಗುತ್ತೆ ಎಂಬ ಮೌಢ್ಯತೆಯನ್ನು ಮೆಟ್ಟಿ ಸಿಎಂ ಬಸವರಾಜ ಬೊಮ್ಮಾಯಿ ಸತತವಾಗಿ ಎರಡನೇ ಬಾರಿ ಕಿತ್ತೂರು ಉತ್ಸವಕ್ಕೆ ನಿನ್ನೆ ಚಾಲನೆ ನೀಡಿದ್ದರು. ನಿನ್ನೆ ರಾತ್ರಿ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ತಂಡದಿಂದ ಸಾಂಸ್ಕೃತಿಕ ವೈಭವ ಅನಾವರಣಗೊಂಡರೆ, ಮಧ್ಯರಾತ್ರಿ ಎರಡು ಗಂಟೆಯವರೆಗೂ ಖ್ಯಾತ ಗಾಯಕ ವಿಜಯ ಪ್ರಕಾಶ್ ರಸಮಂಜರಿ ಕಾರ್ಯಕ್ರಮ ನೆರವೇರಿಸಿದ್ರು. ಹಾಗೂ ಕೊನೇ ದಿನ ಕಿತ್ತೂರು ಉತ್ಸವದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಗಮನ ಸೆಳೆಯಿತು. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ 234 ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 55 ಕೆಜಿ ಮಹಿಳೆಯರ ವಿಭಾಗದಲ್ಲಿ ಹಳಿಹಾಳದ ಗಾಯತ್ರಿ ಸುತಾರ್ ಗೆಲ್ಲುವ ಮೂಲಕ ರಾಣಿ ಚನ್ನಮ್ಮ ಕಿಶೋರಿ ಪ್ರಶಸ್ತಿಗೆ ಪಾತ್ರರಾದರು. ತಡರಾತ್ರಿ ವರೆಗೂ ಕುಸ್ತಿ ಪಂದ್ಯಾವಳಿ ನಡೆದವು. ಈ ಬಾರಿ ಕಿತ್ತೂರು ಹೊರವಲುದ ತುಂಬುಕೆರೆಯಲ್ಲಿ ದೋಣಿ ವಿಹಾರ ಹಾಗೂ ಜಲಸಾಹಸ ಕ್ರೀಡೆ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿತು. ಒಟ್ಟು ಮೂರು ಭವ್ಯವಾದ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನೆರವೇರಿದವು.
ಕಿತ್ತೂರು ಉತ್ಸವಕ್ಕೆ ಗೃರಾದ ನಾಯಕರು
ಇನ್ನೂ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಹಲವು ಜನಪ್ರತಿನಿಧಿಗಳು ಕೈ ಕೊಟ್ಟಿದ್ದು ಎದ್ದು ಕಾಣುತ್ತಿತ್ತು. ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಹಲವು ಸಚಿವರು ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದರೂ ಸಮಾರಂಭಕ್ಕೆ ಹಾಜರಾಗಿದ್ದು ಕೆಲವೇ ಕೆಲವು ಜನಪ್ರತಿನಿಧಿಗಳು ಮಾತ್ರ. ಇಂದಿನ ಸಮಾರೋಪ ಸಮಾರಂಭದ ಘನ ಉಪಸ್ಥಿತಿ ವಹಿಸಬೇಕಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಗೈರಾಗಿದ್ದರು. ರಾಜ್ಯಮಟ್ಟದ ಉತ್ಸವ ಮಾಡಿದ್ರೂ ಬೆಳಗಾವಿ ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ಶಾಸಕರು ಉತ್ಸವದಲ್ಲಿ ಭಾಗಿಯಾಗಲಿಲ್ಲ. ಬಿಜೆಪಿ ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಮಹಾದೇವಪ್ಪ ಯಾದವಾಡ, ಶ್ರೀಮಂತ್ ಪಾಟೀಲ್, ಮಹೇಶ್ ಕುಮಟಳ್ಳಿ, ಪಿ.ರಾಜೀವ್, ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಗೈರಾಗಿದ್ದರು. ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಕಿತ್ತೂರು ಉತ್ಸವಕ್ಕೆ ಬಾರದೇ ಬೇಜವಾಬ್ದಾರಿ ತೋರಿದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಅ.25ರ ರಾತ್ರಿ 10 ಗಂಟೆಗೆ ರಘು ದೀಕ್ಷಿತ್ ಮತ್ತು ತಂಡದಿಂದ ಸಂಗೀತ ಸಂಜೆ ಎಲ್ಲರೂ ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಶಾಸಕರನ್ನು ಹೊರತು ಪಡಿಸಿದ್ರೆ ಜಿಲ್ಲೆಯ ಉಳಿದ ಗಣ್ಯರು ಗೈರಾಗಿದ್ದರು. ಈ ವೇಳೆ ಮಾತನಾಡಿದ ಶಾಸಕ ದೊಡ್ಡಗೌಡರ, ರಾಜ್ಯಮಟ್ಟದ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿ ಸುವರ್ಣ ಅಕ್ಷರದಲ್ಲಿ ತಮ್ಮ ಕೊಡುಗೆ ಬರೆದಿಡುವಂತಾಗಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಿಸುವಂತೆ ಬೆಳೆಯಲಿದೆ. ಪ್ರತಿ ವರ್ಷ ವೀರಜ್ಯೋತಿ ಜಿಲ್ಲೆಯಲ್ಲಿ ಸಂಚರಿಸುತಿತ್ತು ಆದರೆ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಘೋಷಿಸಿ, ವೀರಜ್ಯೋತಿ ರಾಜ್ಯಾದ್ಯಂತ ಸಂಚರಿಸುವಂತೆ ಅದ್ದೂರಿ ಉತ್ಸವ ಆಚರಣೆಗೆ ಚಾಲನೆ ನೀಡಿದ ಕೀರ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಕಳೆದ ವರ್ಷ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಕಾರ್ಯಕ್ರಮ ಈಗ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಕಿತ್ತೂರು ಉತ್ಸವ ಆಚರಣೆ ಪ್ರತಿ ವರ್ಷ 3 ಲಕ್ಷ ಅನುದಾನ ಇತ್ತು. ಕಳೆದ ವರ್ಷ 1 ಕೋಟಿ ಅನುದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈಗ ರಾಜ್ಯ ಸರ್ಕಾರ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಘೋಷಣೆ ಮಾಡಿದ ನಂತರ 2 ಕೋಟಿ ಅನುದಾನ ನೀಡಿದೆ. ಕಿತ್ತೂರು ಉತ್ಸವ ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ರೂ.
ಉತ್ಸವದ ಸಮಾರೋಪ ಸಮಾರಂಭದ ಬಳಿಕ ಖ್ಯಾತ ಗಾಯಕ ರಘು ದಿಕ್ಷಿತ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಿಕ್ಕಿರಿದು ಸೇರಿದ್ದ ಜನರು ರಘು ಗಾನಕ್ಕೆ ತಲೆಬಾಗಿ ಕುಣಿದು ಕುಪ್ಪಳಿಸಿದ್ರು. ಮೂರು ಗಂಟೆಗಳ ಕಾಲ ರಘು ದಿಕ್ಷಿತ್ ಸಂಗೀತ ಕಾರ್ಯಕ್ರಮ ನೀಡಿ ರಂಜಿಸಿದರು. ರಾಜ್ಯಮಟ್ಟದ ಉತ್ಸವವಾಗಿ ಆಚರಿಸಲಾದ ಕಿತ್ತೂರು ಉತ್ಸವವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸುವ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇತ್ತ ಈ ಉತ್ಸವಕ್ಕೆ ಎಲ್ಲ ಜನಪ್ರತಿನಿಧಿಗಳು ಜತೆಯಾಗಿ ನಿಂತು ಮುಂದಿನ ಸಾರಿ ಇನ್ನಷ್ಟು ವಿಜೃಂಭಣೆಯಿಂದ ಆಚರಣೆ ಮಾಡುವಂತಾಗಲಿ.
ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ
Published On - 7:49 am, Wed, 26 October 22