ಬೆಳಗಾವಿ: ವಿಧಾನ ಪರಿಷತ್‌ನಲ್ಲಿ ನಗರಪಾಲಿಕೆ ಹಾಗೂ ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ ಬುಧವಾರ ಅನುಮೋದನೆ ಪಡೆಯಿತು. ಕರ್ನಾಟಕ ನಗರಪಾಲಿಕೆಗಳ ಹಾಗೂ ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆಯಿತು. ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ವಿಧೇಯಕವನ್ನು ಪರಿಷತ್‌ನಲ್ಲಿ ಮಂಡಿಸಿದರು. ವಿವೇಕದ ಮೇಲೆ ಆಡಳಿತ ಪ್ರತಿಪಕ್ಷದ ಸದಸ್ಯರು ಚರ್ಚೆ ನಡೆಸಿದರು.
ಕಾಂಗ್ರೆಸ್ ಸದಸ್ಯ ಪಿಆರ್ ರಮೇಶ್ ಮಾತನಾಡಿ, ಈ ವಿಧೇಯಕ ಸಾರ್ವಜನಿಕರ ಸ್ನೇಹಿ ಅಲ್ಲ. ಸಮರ್ಪಕ ವಿವರಣೆ ಇಲ್ಲ. ಕಟ್ಟಡದ ಮೇಲೆ ಇದೇ ರೀತಿ ತೆರಿಗೆ ವಿಧಿಸುತ್ತವೆ ಆದರೆ ಅಧಿಕೃತ ಕಟ್ಟಡಗಳ ನಿರ್ಮಾಣ ಆಗುವುದಿಲ್ಲ. ಅನಧಿಕೃತ ಕಟ್ಟಡಗಳ ಸಂಖ್ಯೆ ಹೆಚ್ಚಾಗಲಿದೆ. ಅನಗತ್ಯವಾಗಿ ತೆರಿಗೆ ಭಾರ ಹೇರುತ್ತಿರುವುದು, ಕಟ್ಟಡ ನಿರ್ಮಾಣಕ್ಕೆ ಅಂತ ಹೆಚ್ಚಿನ ಮೊತ್ತವನ್ನು ಶುಲ್ಕ ಹಾಗೂ ಇತರೆ ತೆರಿಗೆಗಳಿಗೆ ಜನ ಹಣ ಬಳಸಬೇಕಾಗಿ ಬರಲಿದೆ. ಕೆಎಂಸಿ ಕಾಯ್ದೆಯಡಿ ವ್ಯವಸ್ಥೆ ಇರುವಾಗ ಬಿಬಿಎಂಪಿ ಕಾಯ್ದೆ ಅಡಿ ಹೊಸ ಬಿಲ್ಲನ್ನು ತಂದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಬಿಬಿಎಂಪಿ ಕಾಯ್ದೆ ಇರುವಾಗ ಇಂಥದ್ದೊಂದು ಹೊಸ ತಿದ್ದುಪಡಿ ಕಾಯ್ದೆಯ ಅಗತ್ಯ ಇಲ್ಲ. ದಯವಿಟ್ಟು ಈ ಕಾಯ್ದೆಯನ್ನು ಹಿಂಪಡೆಯಿರಿ. ಇಲ್ಲವಾದರೆ ಇದನ್ನ ಮರುಪರಿಶೀಲಿಸಿ ಎಂದು ಸಲಹೆ ನೀಡಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಕಾಯ್ದೆಯಲ್ಲಿ ತಿದ್ದುಪಡಿ ತರಲು ಹೈಕೋರ್ಟ್ ಒಂದು ಅವಕಾಶವನ್ನು ಮಾಡಿಕೊಟ್ಟಿದೆ. ನ್ಯಾಯಾಲಯ ನೀಡಿದ ಆದೇಶದ ಅನುಸಾರ ಬಿಬಿಎಂಪಿ ಹಾಗೂ ನಗರಪಾಲಿಕೆ ಕಾಯ್ದೆಗಳಲ್ಲಿ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಮಾತನಾಡಿ, ಕಾನೂನು ಇಲ್ಲದೆ ನೀವು ತೆರಿಗೆ ಸಂಗ್ರಹ ಮಾಡಿದ್ದೀರಿ ಎಂದು ಹೈಕೋರ್ಟ್ ಹೇಳಿದೆ. ಇದೊಂದು ವಿಧೇಯಕ ಜಾರಿಗೆ ತರುವಲ್ಲಿ ಒಂದು ಎಷ್ಟು ಚರ್ಚೆಯಾಗುವ ಅಗತ್ಯವಿದೆ ಎಂದು ತಿಳಿಸಿದರು. ಆಡಳಿತ ಪಕ್ಷದ ಸದಸ್ಯರು ವಿಧೇಯಕದ ಪರವಾಗಿ ಮಾತನಾಡಿದರೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ನೀಡಿದರು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸುದೀರ್ಘ ಚರ್ಚೆಯ ಬಳಿಕ ವಿಧೇಯಕ ಅನುಮೋದನೆ ಪಡೆಯಿತು.
ಪರಿಷತ್‌ನಲ್ಲಿ ರಾಜ್ಯ ಆಯುಷ್ ವಿವಿ ವಿಧೇಯಕ ಅಂಗೀಕಾರ
ಪರಿಷತ್‌ನಲ್ಲಿ ರಾಜ್ಯ ಆಯುಷ್ ವಿವಿ ವಿಧೇಯಕ ಅಂಗೀಕಾರ ಆಗಿದೆ. ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ ಮಂಡನೆ ಅಂಗೀಕಾರ ಆಗಿದೆ. ಅಲ್ಲದೆ, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ 2021 ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆಯಿತು. ಸಚಿವ ಡಾ. ಅಶ್ವಥ್ ನಾರಾಯಣ ವಿಧೇಯಕ ಮಂಡನೆ ಮಾಡಿದರು.
ಮಸೂದೆ ವಿಚಾರವಾಗಿ ಸದನದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಉತ್ತಮ ಚಿಂತನೆಯೊಂದಿಗೆ ತಂದರುವ ಈ ತಿದ್ದುಪಡಿ ವಿಧೇಯಕ ಸ್ವಾಗತಿಸುತ್ತೇನೆ. ಈ ವಿವಿಯಲ್ಲಿ ಶೇಕಡಾ 75 ರಷ್ಟು ರಾಜ್ಯದ ವಿದ್ಯಾರ್ಥಿಗಳಿಗೆ ಉಳಿದ ಶೇಕಡಾ 25 ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ನೀಡುವ ಬದಲು ಸಂಪೂರ್ಣ ನಮ್ಮ ರಾಜ್ಯದವರಿಗೇ ಏಕೆ ನೀಡಬಾರದು. ಐಟಿ ಕ್ಷೇತ್ರಕ್ಕೆ ರಾಜ್ಯದ ಕೊಡುಗೆ ಅಪಾರವಾಗಿದೆ. ಇದಕ್ಕೆ ಭೂಮಿ 50 ಎಕರೆಯನ್ನು ಜ್ಞಾನಭಾರತಿ ಆವರಣದಲ್ಲೇ ಸ್ಥಾಪಿಸಿ. ಬೇರೆ ಸ್ಥಳ ಹುಡುಕಬೇಡಿ. ಉಪಕುಲಪತಿ ನಿವೃತ್ತಿ ಅವಧಿ ಯಾವ ಉದ್ದೇಶ ಇಟ್ಟುಕೊಂಡು ಮಾಡಿದ್ದೀರೋ ಗೊತ್ತಿಲ್ಲ. ಇದನ್ನು 70 ರಿಂದ 67ಕ್ಕೆ ಇಳಿಸಿ ಎಂದು ಸಲಹೆ ನೀಡಿದರು.
ಐಐಟಿ ಮಾದರಿಯಲ್ಲಿ 10 ಕೋಟಿ ರೂ. ಅನುದಾನ ನೀಡಿ
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಐಐಟಿ ಮಾದರಿಯಲ್ಲಿ 10 ಕೋಟಿ ರೂ. ಅನುದಾನ ನೀಡಿ. 10 ಲಕ್ಷ ರೂ. ನೀಡಿದರೆ ಉಳಿದ ವಿವಿಗಳ ಮಾದರಿಯಲ್ಲಿ ಇದೂ ಆಗಲಿದೆ. ಸೂಕ್ತ ಅನುದಾನ, ಸಿಬ್ಬಂದಿ, ಶಿಕ್ಷಕರನ್ನು ಒದಗಿಸಿ. ಉತ್ತಮ ಸೌಕರ್ಯ ಕಲ್ಪಿಸಿ ಎಂದು ಸಲಹೆ ನೀಡಿದರು. ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ವಿಶ್ವವಿದ್ಯಾಲಯದ ಇತಿಹಾಸ ವಿವರಿಸಿದರು. ಈ ವಿಶ್ವವಿದ್ಯಾಲಯಕ್ಕೆ ಆಡಳಿತ ಸಮಿತಿಯಲ್ಲಿರುವವರು ಗಣ್ಯರಾಗಿದ್ದಾರೆ. ಉತ್ಕೃಷ್ಟ ವ್ಯಕ್ತಿಗಳನ್ನು ಸೃಷ್ಟಿಸಿದ ಸಂಸ್ಥೆ ಇದು. ಬೇರೆ ಇಂಜನಿಯರಿಂಗ್ ಕಾಲೇಜು ಮಾದರಿಯದ್ದಲ್ಲ. ಈ ಸಂಸ್ಥೆ ಉನ್ನತ ಸಂಸ್ಥೆ. ಹೆಚ್ಚು ಅನುದಾನ ನೀಡಬೇಕು. ಬೆಳೆಸಬೇಕು ಎಂದು ಹೇಳಿದರು.
ಜೆಡಿಎಸ್ ಸಚೇತಕ ಅಪ್ಪಾಜಿಗೌಡ, ಇದು ಉತ್ತಮಶಿಕ್ಷಣ ಸಂಸ್ಥೆ ಆಗಿತ್ತು. ಆದರೆ ವಿವಿಧ ಸಂದರ್ಭಗಳಲ್ಲಿ, ಕಾಲ ಕಾಲಕ್ಕೆ ಸಿಬ್ಬಂದಿ, ಶಿಕ್ಷಕರ ನೇಮಕ ಮಾಡುವ ಕಾರ್ಯ ಆಗಿಲ್ಲ. ಇದನ್ನು ಅಭಿವೃದ್ಧಿ ಪಡಿಸುವ ಯಾವುದೇ ಬೆಳವಣಿಗೆ ಆಗಿಲ್ಲ. ಸಾಕಷ್ಟು ಜ್ವಲಂತ ಸಮಸ್ಯೆ ಇದೆ. ಯಾವುದೇ ರೀತಿ ಇದನ್ನು ರಕ್ಷಿಸಲು ಹೊಸ ಕಾನೂನು ಜಾರಿಗೆ ತನ್ನಿ. ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕದಿದ್ದರೆ, ಇಂತಹ ವಿಶ್ವವಿದ್ಯಾಲಯ ಗಳಿಗೆ ಉಳಿಗಾಲ ಇರಲ್ಲ ಎಂದು ಎಚ್ಚರಿಸಿದರು.
ಸಿ.ಎಂ. ಇಬ್ರಾಹಿಂ ಮಾತನಾಡಿ, ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಅನ್ನುವಂತಾಗುತ್ತೆ. ಉತ್ತಮ ಯೋಜನೆ. ಆದರೆ ಅದಕ್ಕೆ ಅನುದಾನ ಬೇಕಲ್ಲ. ಡೀಮ್ಡ್ ವಿವಿ ಬಂದು ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಇಂತಹ ಸರ್ಕಾರಿ ವಿಶ್ವವಿದ್ಯಾಲಯ ಸದೃಢಗೊಳಿಸಿ ಎಂದು ಸಲಹೆ ಇತ್ತರು. ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಸಿ.ಎಂ. ಲಿಂಗಪ್ಪ, ಪ್ರಕಾಶ್ ರಾಥೋಡ್, ತೇಜಸ್ವಿನಿಗೌಡ, ಶ್ರೀಕಂಠೇಗೌಡ, ಮಹಾಂತೇಶ್ ಕವಟಗಿಮಠ ಮಾತನಾಡಿದರು.
ಕಲಿಕೆಯಲ್ಲಿ ಗುಣಮಟ್ಟ ಇದ್ದಾಗ ಮಾತ್ರ ಅನುಕೂಲ: ಸಚಿವ ಅಶ್ವತ್ಥ ನಾರಾಯಣ ಉತ್ತರ
ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಕಲಿಕೆಯಲ್ಲಿ ಗುಣಮಟ್ಟ ಇದ್ದಾಗ ಮಾತ್ರ ಅನುಕೂಲ ಆಗಲಿದೆ. ಇದರಿಂದ ಅತ್ತ ಗಮನ ಹರಿಸಿದ್ದೇವೆ. ಮುಂದಿನ ಹತ್ತು ವರ್ಷಕ್ಕೆ ಲಕ್ಷಾಂತರ ಯುವ ಎಂಜಿನಿಯರ್ಗಳ ಅಗತ್ಯ ಎದುರಾಗಲಿದೆ. ರಾಜ್ಯದ ಯುವ ಪೀಳಿಗೆಗೆ ಅನುಕೂಲ ಆಗುವ ಮಾದರಿಯ ಶಿಕ್ಷಣ ಒದಗಿಸುತ್ತಿದ್ದೇವೆ. ವಿಶ್ವದಲ್ಲೇ ನಮಗಮ ಶಿಕ್ಷಣ ವ್ಯವಸ್ಥೆ ಇದೆ. ರಾಜ್ಯದ ಶಿಕ್ಷಣ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿ. ವರ್ಚುವಲ್ ಮೂಲಕ ಇಲ್ಲಿದ್ದು ವಿದೇಶದಲ್ಲಿರುವ ಸಂಸ್ಥೆಗೆ ಸೇವೆ ಸಲ್ಲಿಸಬಹುದು. ಇಡೀ ಪ್ರಪಂಚದಲ್ಲಿ ಅವಕಾಶಗಳು ಹೇರಳವಾಗಿದೆ. ಗುಣಮಟ್ಟದ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ನೂ ಏಳು ಸರ್ಕಾರಿ ಕಾಲೇಜನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸುವ ಕಾರ್ಯ ಆಗುತ್ತಿದೆ. ಇದಕ್ಕೆ ಬೆಳಗಾವಿಯಲ್ಲೇ ಒಂದು ಕಾಲೇಜು ಬದಲಾಗಿಸಿದ್ದೇವೆ. ಇನ್ನು ಬೇರೆ ಆರು ಕಾಲೇಜು ಅಭಿವೃದ್ಧಿ ಆಗಲಿದೆ. ಗುಣಮಟ್ಟದ ವೃದ್ಧಿಗೆ ಒಂದು ಸಮಿತಿರಚಿಸಿದ್ದೇವೆ. ಸಮಸ್ಯೆ ಬಗೆಹರಿಸಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ. ಯುಜಿಸಿ ನಿಯಮಾವಳಿಯಲ್ಲಿ ಉಪಕುಲಪತಿ ನಿವೃತ್ತಿ ವಯೋಮಿತಿ 70 ಕ್ಕೆ ಇಡಲಾಗಿದೆ. ಶೇಕಡಾ 100 ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರೇ ಆದರೆ ನಿರೀಕ್ಷಿತ ಗುಣಮಟ್ಟ ಸಿಗದು ಎಂದು ಹೇಳಿದರು.
ಇದನ್ನೂ ಓದಿ: ಉತ್ತರ ಕರ್ನಾಟಕ, ನೀರಾವರಿ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ; ವಿಧಾನಸಭಾ ಕಲಾಪದ ವಿವರಗಳು ಇಲ್ಲಿವೆ
ಇದನ್ನೂ ಓದಿ: ಪಠ್ಯಪುಸ್ತಕಗಳಲ್ಲಿ ಬಾಬಾಬುಡನ್ಗಿರಿ ಉಲ್ಲೇಖಕ್ಕೆ ಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ಆಕ್ಷೇಪ