ಉತ್ತರ ಕರ್ನಾಟಕ, ನೀರಾವರಿ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ; ವಿಧಾನಸಭಾ ಕಲಾಪದ ವಿವರಗಳು ಇಲ್ಲಿವೆ
ಚುನಾವಣಾ ಕಾರಣದಿಂದ ಮೇಕೆದಾಟು ಪಾದಯಾತ್ರೆ ಆಗುತ್ತಿದೆ. ಜೆಡಿಎಸ್ ಪಾದಯಾತ್ರೆ ಮಾಡುತ್ತೆ ಎಂದು ಆತುರದಲ್ಲಿ ಹೊರಟಿದ್ದಾರೆ. ಚುನಾವಣೆ ಕಾರಣಕ್ಕಾಗಿ ಸುತ್ತಾಡಿಕೊಂಡು ಬರುತ್ತಾರಂತೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ: ಕೃಷ್ಣಾ ನೀರು ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ವ್ಯಾಜ್ಯ ಇದೆ. ನ್ಯಾಯಾಧಿಕರಣಕ್ಕೆ ತೆಲಂಗಾಣ, ಆಂಧ್ರ ಅರ್ಜಿ ಸಲ್ಲಿಸಿವೆ. ಈಗ ತೆಲಂಗಾಣ ಅರ್ಜಿ ಹಿಂಪಡೆದಿದೆ, ನಮ್ಮ ದಾರಿ ಸುಗಮ ಆಗಿದೆ. ಪ್ರತಿ ವಿಚಾರಣೆ ದಿನವೂ ನಾನೇ ವಕೀಲರ ಜತೆ ಚರ್ಚಿಸಿದ್ದೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ,.
ಈ ಬಗ್ಗೆ ಸದನಕ್ಕೆ ಎಷ್ಟು ಹೇಳಬೇಕೋ ಅಷ್ಟನ್ನು ನಾನು ಹೇಳುತ್ತೇನೆ. ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇದೆ. ಹೀಗಾಗಿ ಹೆಚ್ಚು ಏನೂ ಹೇಳುವುದಿಲ್ಲ. ಮುಂದಿನ ವಿಚಾರಣೆಯಲ್ಲಿ ಮುಗಿಯುವ ಸಾಧ್ಯತೆ ಇದೆ ಎಂದು ಸದನದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಶಾಸಕ ಎಂ.ಬಿ. ಪಾಟೀಲ್ ಮಧ್ಯಪ್ರವೇಶ ಮಾಡಿದಾಗ ಬೊಮ್ಮಾಯಿ ಸಿಟ್ಟಾಗಿ ಕುಳಿತಿದ್ದಾರೆ.
ಉತ್ತರ ಕರ್ನಾಟಕ ಸಮಸ್ಯೆ, ನೀರಾವರಿ ಸಮಸ್ಯೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಚರ್ಚೆ ಮಾಡಿದ್ದಾರೆ. ಸುವರ್ಣಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ, ಇದು ಒಳ್ಳೆಯ ಕೆಲಸ. ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಕೆಲಸ ಮಾಡುತ್ತಿದೆ. ನಂಜುಂಡಪ್ಪ ವರದಿಯ ಶಿಫಾರಸ್ಸುಗಳನ್ನು ಹಂತಹಂತವಾಗಿ ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಮಾಡಬೇಕು. ಕೆಎಸ್ ಟಿ ಡಿಸಿ ಸಹಯೋಗದೊಂದಿಗೆ ಶಾಸಕರ ಭವನ ನಿರ್ಮಾಣ ಮಾಡಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಡಿಪಿಆರ್ ಮಾಡಿದ್ದೆವು. ಆದ್ರೆ ಹಿಂದಿನ ಕಾಂಗ್ರೆಸ್ ಆರೂವರೆ ವರ್ಷದಲ್ಲಿ ಸರ್ಕಾರ ಯಾವುದೇ ಯೋಜನೆ ಮಾಡಲಿಲ್ಲ, ಅಗತ್ಯ ಅನುದಾನ ಕೊಡಲಿಲ್ಲ. ನೀರಾವರಿಗೆ ವರ್ಷಕ್ಕೆ 10ಸಾವಿರ ಕೋಟಿ ಕೊಡುವುದಾಗಿ ಕಾಂಗ್ರೆಸ್ ವಾಗ್ದಾನ ನೀಡಿತ್ತು, ಆದ್ರೆ ವಾಗ್ದಾನದಂತೆ ಯಾವುದೇ ಹಣ ನೀಡಲಿಲ್ಲ. ಹಾಗಾಗಿ ಸರ್ಕಾರ ಉತ್ತರ ಕೊಡುವಾಗ ಯಾರ್ಯಾರ ಕಾಲದಲ್ಲಿ ಎಷ್ಟು ಹಣ ಬಿಡುಗಡೆ, ವಿನಿಯೋಗ ಆಗಿತ್ತು ಎಂಬುದರ ಬಗ್ಗೆ ಮಾಹಿತಿ ನೀಡಲಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2013ರ ಕಾಂಗ್ರೆಸ್ ಪ್ರಣಾಳಿಕೆ ಓದಿದ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ 2013ರ ಕಾಂಗ್ರೆಸ್ ಪ್ರಣಾಳಿಕೆ ಓದಿದ್ದಾರೆ. ಕೃಷ್ಣೆ ಕಡೆ ಪಾದಯಾತ್ರೆ ಮಾಡಿ ಹಣ ಕೊಡುವುದಾಗಿ ಪ್ರಮಾಣ ಮಾಡಲಾಗಿತ್ತು 10 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆಂದು ಪ್ರಮಾಣ ಮಾಡಿದ್ದೀರಿ. ನಾನು ಬೆಳಗ್ಗೆಯಿಂದ ಬಾಯಿ ಮುಚ್ಚಿಕೊಂಡು ಕೂತಿದ್ದೆ. ಈಗ ದಾಖಲೆ ಸಮೇತ ಹೇಳುತ್ತಿದ್ದೇನೆ ಎಂದು ಕಾರಜೋಳ ಹೇಳಿದ್ದಾರೆ. ಕಾರಜೋಳ ಮಾತಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಉತ್ತರ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ 2 ಕಡೆ ಹಣ ಖರ್ಚು ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಒಂದು ಕಡೆ ಐವತ್ತು ಸಾವಿರ ಕೋಟಿ ಎಂದು ಹೇಳಿದ್ದೇವೆ. ಅದು ಇಡೀ ರಾಜ್ಯಕ್ಕೆ ಯುಕೆಪಿಗೆ ಅಲ್ಲ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ನೀರಾವರಿ ಯೋಜನೆಗೆ 10 ಸಾವಿರ ಕೊಡುವುದಾಗಿ, ಅಂದರೆ ಪ್ರತಿವರ್ಷ ಹತ್ತು ಸಾವಿರ ಕೊಡುವುದಾಗಿ ಪ್ರಮಾಣ ಮಾಡಿದ್ವಿ ಎಂದು ವಿಧಾನಸಭೆಯಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಪರಮೇಶ್ವರ್ ಮಾತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲ, ಕೃಷ್ಣೆಗೆ ಹತ್ತು ಸಾವಿರ ಕೊಡುತ್ತೇವೆ ಎಂದು ಹೇಳಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಪ್ರಮಾಣ ಮಾಡಿದವರು ನಾನು ಮತ್ತು ಸಿದ್ದರಾಮಯ್ಯ. ನಾನೇ ಹೇಳ್ತಿದ್ದೇನೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜೆಡಿಎಸ್ ಪಾದಯಾತ್ರೆ ಮಾಡುತ್ತೆ ಎಂದು ಕಾಂಗ್ರೆಸ್ನವರು ಆತುರದಲ್ಲಿ ಹೊರಟಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡಲಿರುವ ಬಗ್ಗೆ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಕಾರಣದಿಂದ ಮೇಕೆದಾಟು ಪಾದಯಾತ್ರೆ ಆಗುತ್ತಿದೆ. ಜೆಡಿಎಸ್ ಪಾದಯಾತ್ರೆ ಮಾಡುತ್ತೆ ಎಂದು ಆತುರದಲ್ಲಿ ಹೊರಟಿದ್ದಾರೆ. ಚುನಾವಣೆ ಕಾರಣಕ್ಕಾಗಿ ಸುತ್ತಾಡಿಕೊಂಡು ಬರುತ್ತಾರಂತೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇದು ಬಿಜೆಪಿ ಸರ್ಕಾರ ಅಲ್ಲ, ಕನ್ನಡಿಗರ ಸರ್ಕಾರ. ಸರ್ಕಾರ ಬರುವರೆಗೂ ಮಾತ್ರ ಪಕ್ಷ, ಬಂದ್ಮೇಲೆ ನಮ್ಮ ಸರ್ಕಾರ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ ಎಂದೂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. 4 ವರ್ಷ ಕಳೆದುಬಿಟ್ಟಿದ್ದೇವೆ, ಇನ್ನು ಚುನಾವಣೆಗೆ ಹೋಗ್ತಿದ್ದೇವೆ. ಯಾವಾಗ ನಾವು ಯೋಜನೆಗಳನ್ನು ಪೂರ್ಣ ಮಾಡುವುದು? ನೀರಾವರಿ ಕ್ಷೇತ್ರಕ್ಕೆ ಹೆಚ್.ಡಿ.ದೇವೇಗೌಡರ ಕೊಡುಗೆ ಅಪಾರ. ಈಗ ಕೇಂದ್ರಕ್ಕೆ ಒತ್ತಡ ಹಾಕಿ ಗೆಜೆಟ್ ನೋಟಿಫಿಕೇಷನ್ ಮಾಡಿಸಿ. ಮೂರನೇ ಹಂತದ ಯುಕೆಪಿ ಯೋಜನೆ ಶುರು ಮಾಡಲಿ. ಕಳಸಾ ಬಂಡೂರಿ ಯೋಜನೆಗೆ ಸಿಡಬ್ಲ್ಯುಸಿಗೆ ಅಧಿಕಾರವಿಲ್ಲ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯ ಮಾಡಬೇಕು. ರಾಜ್ಯಕ್ಕೆ ಆಗುವ ಅನ್ಯಾಯ ಸರಿಪಡಿಸಿ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡಿ: ಈಶ್ವರ ಖಂಡ್ರೆ ಒತ್ತಾಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಎಂದು ವಿಧಾನಸಭೆಯಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಒತ್ತಾಯ ಮಾಡಿದ್ದಾರೆ. 10 ದಿನದಲ್ಲಿ ರಚಿಸುವುದಾಗಿ ಹಿಂದಿನ ಕಲಾಪದಲ್ಲಿ ಹೇಳಿದ್ರು. 100 ದಿನ ಕಳೆದರೂ ಅಭಿವೃದ್ಧಿ ಮಂಡಳಿ ರಚನೆಯಾಗಿಲ್ಲ. ಕಲ್ಯಾಣ ಕರ್ನಾಟಕದ ಹೆಸರು ಬದಲಾವಣೆಯಾಗಿದೆ. ಆದರೆ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ. ಹೀಗೆ ಮುಂದುವರಿದ್ರೆ ಪ್ರತ್ಯೇಕ ರಾಜ್ಯದ ಕೂಗು ಏಳುತ್ತೆ. ಸರ್ಕಾರ ಇದಕ್ಕೆ ಹೊಣೆ ಆಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಮತಾಂತರ ನಿಷೇಧ ವಿಧೇಯಕ ಬಗ್ಗೆ ನಾಳೆ ಚರ್ಚೆ: ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ಚರ್ಚೆ ಮುಗಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ಸಂಜೆ 7 ಗಂಟೆವರೆಗೂ ಕಲಾಪ ನಡೆಸಿ ಚರ್ಚಿಸೋಣ ಎಂದು ಹೇಳಿದ್ದಾರೆ. ಸಂಜೆ 5 ಗಂಟೆವರೆಗೆ ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸಂಜೆ 5-6ರವರೆಗೆ ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆ ಮಾಡಲಾಗುವುದು. ನಾಳೆ ಬೆಳಗ್ಗೆ ಮತ್ತೆ ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆ ನಡೆಸಲಾಗುವುದು. ಮಧ್ಯಾಹ್ನದ ನಂತರ ರಾಜ್ಯ ಸರ್ಕಾರದ ಉತ್ತರ ಪಡೆಯೋಣ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಹೇಳಿಕೆ ನೀಡಿದ್ದಾರೆ.
ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆಗೆ ಪ್ರಸ್ತಾಪ ಮಾಡಲಾಗಿದೆ. ವಿಧಾನಸಭೆಯಲ್ಲಿ ನಾಳೆ ಉತ್ತರ ಕರ್ನಾಟಕ ಸಮಸ್ಯೆಗಳು, ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆ ಮಾಡೋಣ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ವೇಳೆ ಸಂಸದೀಯ ಸಚಿವ ಮಾಧುಸ್ವಾಮಿ ಮಧ್ಯಪ್ರವೇಶ ಮಾಡಿದ್ದಾರೆ. ನಾಳೆಯೇ ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆ ಮಾಡಲಾಗುವುದು. ಮಧ್ಯಾಹ್ನದೊಳಗೆ ಚರ್ಚೆ ಮುಗಿಸಲು ಮಾಧುಸ್ವಾಮಿ ಮನವಿ ಮಾಡಿದ್ದಾರೆ.
ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆಗೆ ಪ್ರಸ್ತಾಪ ಹಿನ್ನೆಲೆ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದಾರೆ. ಇಂದು ಸಂಜೆ 6 ಗಂಟೆವರೆಗೆ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡಲಾಗುವುದು. ಮತಾಂತರ ನಿಷೇಧ ವಿಧೇಯಕ ಬಗ್ಗೆ ನಾಳೆ ಚರ್ಚಿಸೋಣ. ನಾಳೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಚರ್ಚಿಸೋಣ. ವಿಧೇಯಕ ಬಗ್ಗೆ ರಾಜ್ಯ ಸರ್ಕಾರದಿಂದ ಮಧ್ಯಾಹ್ನ ಉತ್ತರ ಪಡೆಯಲಾಗುತ್ತದೆ. ಬಳಿಕ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ನಡೆಸೋಣ. ನಾಳೆ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಚರ್ಚೆ ಮಾಡೋಣ. ನಾಳೆ ಸಂಜೆ 5 ಗಂಟೆಗೆ ಪ್ರಶ್ನೋತ್ತರ ಕಲಾಪ ನಡೆಸೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯಿಂದ ಭಯವಿಲ್ಲ; ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶ: ಮೈಸೂರು ಕ್ರೈಸ್ತ ಧರ್ಮಾಧಿಕಾರಿ
ಇದನ್ನೂ ಓದಿ: ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಣಕು ಶವಯಾತ್ರೆ ನಡೆಸಿ, ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟ ಶಿವಸೇನೆ ಪುಂಡರು
Published On - 5:54 pm, Wed, 22 December 21