ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲ್ಯಾನ್ ಏನು?
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಹೀಗಾಗಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹಾಗೂ ಬೆಳಗಾವಿಯಿಂದ ಸಚಿವ ಸತೀಶ್ ಜಾರಕಿಹೊಳಿರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಬೆಳಗಾವಿ, ಆಗಸ್ಟ್ 23: ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ (Lok Sabha Elections) ಗೆಲುವಿನ ನಾಗಾಲೋಟ ಬೀರಲು ರಾಜ್ಯ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಬೇಕೆಂಬ ಗುರಿಯಿಂದ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸಿದ್ದಾರೆ. ಅದರಲ್ಲೂ ರಾಜ್ಯ ರಾಜಕಾರಣದ ಪವರ್ ಸೆಂಟರ್ ನಂತಿರುವ ಬೆಳಗಾವಿ ಜಿಲ್ಲೆಯ ಎರಡೂ ಸ್ಥಾನ ಗೆಲ್ಲಬೇಕೆಂಬ ದೃಷ್ಟಿಯಿಂದ ಚಿಕ್ಕೋಡಿಯಿಂದ ಲಕ್ಷ್ಮಣ್ ಸವದಿ ಹಾಗೂ ಬೆಳಗಾವಿಯಿಂದ ಸಚಿವ ಸತೀಶ್ ಜಾರಕಿಹೊಳಿರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ. ಈಗಾಗಲೇ ತಾವು ರಾಷ್ಟ್ರರಾಜಕಾರಣಕ್ಕೆ ಹೋಗಲ್ಲ ಅಂತಾ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿಯೇ ಉಳಿಯಲು ಹೂಡಿದ ಮಾಸ್ಟರ್ ಪ್ಲ್ಯಾನ್ ಏನು? ಮುಂದೆ ಓದಿ.
ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದ್ದು ರಾಜ್ಯದಲ್ಲಿ ಶತಾಯ ಗತಾಯ 20 ಕ್ಷೇತ್ರಗಳನ್ನಾದರೂ ಗೆಲ್ಲಬೇಕೆಂದು ಕೈ ಪಾಳಯ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಪ್ರಭಾವಿ ಶಾಸಕರು, ಸಚಿವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ರಾಜ್ಯ ರಾಜಕಾರಣದ ಪವರ್ ಸೆಂಟರ್ನಂತಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಹೀಗಾಗಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹಾಗೂ ಬೆಳಗಾವಿಯಿಂದ ಸಚಿವ ಸತೀಶ್ ಜಾರಕಿಹೊಳಿರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಆದರೆ ಯಾವುದೇ ಕಾರಣಕ್ಕೂ ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಲೋಕಸಭೆಗೆ ಸ್ಪರ್ಧಿಸಲ್ಲ ಎಂದು ಇತ್ತೀಚೆಗೆ ಟಿವಿ9 ಜೊತೆ ಮಾತನಾಡುವ ವೇಳೆ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದರು. ಇತ್ತ ಸತೀಶ್ ಜಾರಕಿಹೊಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರಾ ಎಂಬ ಚರ್ಚೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ನಡೆಯುತ್ತಿದೆ. ಹಾಲಿ ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಬೆಳಗಾವಿ, ಚಿಕ್ಕೋಡಿ ಎರಡೆರಡು ಕಡೆ ಲೋಕಸಭೆಗೆ ಟಿಕೆಟ್ ಕೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದು, ಪ್ರಕಾಶ್ ಹುಕ್ಕೇರಿ ಹೆಸರು ಪ್ರಸ್ತಾಪಿಸಿ ರಾಜ್ಯ ರಾಜಕಾರಣದಲ್ಲಿ ಉಳಿಯಲು ಸತೀಶ್ ಜಾರಕಿಹೊಳಿ ಮಾಸ್ಟರ್‌ಪ್ಲ್ಯಾನ್ ಮಾಡಿದ್ರಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿ: ಕಾವೇರಿ ಕಿಚ್ಚು.. ಅನ್ನದಾತರ ಸಿಟ್ಟು: ಸರ್ವಪಕ್ಷ ಸಭೆ ಬಳಿಕ ವಿರೋಧ ಪಕ್ಷಗಳ ನಾಯಕರು ಹೇಳಿದ್ದೇನು?
ಬೆಳಗಾವಿ ಲೋಕಸಭೆಗೆ ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ಕೊಡಿಸಿ, ಚಿಕ್ಕೋಡಿ ಲೋಕಸಭೆಗೆ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರಾ ಎಂಬ ಮಾತು ಕೇಳಿ ಬರ್ತಿದೆ. ಇನ್ನು ಪುತ್ರಿ ಪ್ರಿಯಾಂಕಾ ಲೋಕಸಭೆ ಸ್ಪರ್ಧಿಸುವ ವಿಚಾರ ಇನ್ನೂ ಚರ್ಚಾ ಹಂತದಲ್ಲಿ ಇದೆ ಎಂದು ಸತೀಶ್ ಜಾರಕಿಹೊಳಿ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಇನ್ನು ಪ್ರಕಾಶ್ ಹುಕ್ಕೇರಿ ಸಹ ಹೈಕಮಾಂಡ ನಿರ್ಧಾರಕ್ಕೆ ಬದ್ಧ ಎನ್ನುತ್ತಿದ್ದು, ಬೆಳಗಾವಿ, ಚಿಕ್ಕೋಡಿ ಎಲ್ಲೇ ಟಿಕೆಟ್ ಕೊಟ್ಟರು ಸ್ಪರ್ಧಿಸಲು ಸಿದ್ಧ ಎಂದು ಆಪ್ತರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಳಗಾವಿ ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ ವರ್ಸಸ್ ಅದರ್ಸ್ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಗೊತ್ತಿರುವ ವಿಚಾರ. 2014ರಲ್ಲಿ ಸತೀಶ್ ಜಾರಕಿಹೊಳಿ ಹೂಡಿದ ರಣತಂತ್ರವನ್ನೇ ತಿರುಗುಬಾಣ ಮಾಡಲು ವಿರೋಧಿ ಬಣ ರಣತಂತ್ರ ಹೂಡುತ್ತಿದೆ. ಇತ್ತೀಚೆಗೆ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದ ವಿಚಾರ ಪ್ರಸ್ತಾಪಿಸಿ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ರೆ ಒಳ್ಳೆಯದು ಎಂದು ಹಲವು ನಾಯಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ 2013ರಲ್ಲಿದ್ದಂತೆ 2023ರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರೂ ಸಚಿವರಿದ್ದಾರೆ. 2013ರಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಪ್ರಕಾಶ್ ಹುಕ್ಕೇರಿ ಮಧ್ಯೆ ಕೋಲ್ಡ್‌ವಾರ್ ಇತ್ತು. ಸದ್ಯ 2023ರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಕೋಲ್ಡ್‌ವಾರ್ ಇದೆ. 2013ರಂತೆ ಈಗಲೂ ಜಿಲ್ಲೆಯ ಮೇಲೆ ಕಂಟ್ರೋಲ್ ಸಾಧಿಸಲು ಸಚಿವರ ಮಧ್ಯೆ ಕೋಲ್ಡ್‌ವಾರ್ ಇದೆ.
2013 ರಲ್ಲಿ ಮಂತ್ರಿಯಾಗಿದ್ದ ಪ್ರಕಾಶ ಹುಕ್ಕೇರಿಯನ್ನ 2014ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ರಣತಂತ್ರ ಮಾಡಿ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದರು. ಈಗ ಬೆಳಗಾವಿ ಲೋಕಸಭೆಗೆ ಸತೀಶ್ ಜಾರಕಿಹೊಳಿಯೇ ಸೂಕ್ತ ಎಂದು ವಿರೋಧಿ ಬಣ ಹೇಳುತ್ತಿದ್ದು ಇದಕ್ಕೆ ಟಕ್ಕರ್ ನೀಡಿ ರಾಜ್ಯ ರಾಜಕಾರಣದಲ್ಲಿಯೇ ಉಳಿದುಕೊಳ್ಳಲು ಸತೀಶ್ ಜಾರಕಿಹೊಳಿ ಗೇಮ್ ಪ್ಲ್ಯಾನ್ ಮಾಡಿದ್ರಾ ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ನಾನು ಕಾಂಗ್ರೆಸ್ ಬಿಡುವಾಗ ಬಿಜೆಪಿಗೆ ಅಗತ್ಯ ಇತ್ತು, ಕಾಂಗ್ರೆಸ್ಗೆ ಅಂತಹ ಅಗತ್ಯವಿಲ್ಲ; ಸೋಮಶೇಖರ್ ಹೇಳಿಕೆಯ ಮರ್ಮವೇನು?
ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಹೆಸರು ಪ್ರಸ್ತಾಪಿಸಿ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲು ಸತೀಶ್ ರಣತಂತ್ರ ಹೂಡಿದ್ರಾ ಎಂಬ ಚರ್ಚೆ ನಡೆಯುತ್ತಿದೆ. ಏಕೆಂದರೆ ಒಂದು ವೇಳೆ ಬೆಳಗಾವಿ ಲೋಕಸಭೆಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸದೇ ಇದ್ರೆ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ನ್ನ ಕಣಕ್ಕಿಳಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರೆಮರೆ ಕಸರತ್ತು ನಡೆಸಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆ ಭಾವಿ ಸಂಸದ ಮೃಣಾಲ್ ಹೆಬ್ಬಾಳ್ಕರ್ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಪುತ್ರ ಮೃಣಾಲ್ ಲೋಕಸಭೆಗೆ ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸದ್ಯಕ್ಕೆ ಲೋಕಸಭೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿ ಎಂದಿದ್ದಾರೆ. ನಾನು ಎಂಎಲ್‌ಎ, ಮೊದಲ ಬಾರಿ ಮಂತ್ರಿ ಮಾಡಿದ್ದಾರೆ. ತಮ್ಮನ ಇಡೀ ಜಿಲ್ಲೆ ಮುಖಂಡರು ಆಶೀರ್ವಾದಿಸಿ ಎಂಎಲ್‌ಸಿ ಮಾಡಿದ್ದಾರೆ. ಅತ್ಯಂತ ಹೆಚ್ಚು ಲೋಕಸಭೆ ಸ್ಥಾನ ಗೆಲ್ಲೋದು ಸದ್ಯಕ್ಕೆ ನನ್ನ ಫೋಕಸ್, ಬೇರೆ ಏನೂ ವಿಚಾರ ಇಲ್ಲ’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ವಿಚಾರವಾಗಿ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಯಾವ ನಿರ್ಧಾರ ತಗೆದುಕೊಳ್ಳುತ್ತೆ ಕಾದು ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.