ಬೆಳಗಾವಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ(Gruha Jyothi)ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭವಾಗಿದೆ. ಈ ಹಿನ್ನಲೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ‘ಗೃಹಜ್ಯೋತಿ ಯೋಜನೆಗೆ ಇವತ್ತಿನಿಂದ ಅರ್ಜಿ ಕಾಲ್‌ಫಾರ್ಮ್ ಮಾಡಿದ್ದೇವೆ. ಶೀಘ್ರದಲ್ಲೇ ಗೃಹ ಲಕ್ಷ್ಮೀ(Gruha Lakshmi)ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭವಾಗಲಿದ್ದು, ಸಾಫ್ಟ್‌ವೇರ್, ಌಪ್ ರೆಡಿ ಮಾಡುತ್ತಿದ್ದೇವೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ವಿಳಂಬವಾಗಿದೆ ಎಂದು ಹೇಳಿದರು.
ಇಂದು(ಜೂ.18) ಬೆಳಗಾವಿ ತಾಲೂಕಿನ ಬಸ್ತವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಈಗಾಗಲೇ ಜಾಹೀರಾತು ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮಾಡುತ್ತಿದ್ದೇವೆ. ಗೃಹ ಲಕ್ಷ್ಮೀ ಅಪ್ಲಿಕೇಷನ್ ಕೂಡ ಅತೀ ಬೇಗ ಲಾಂಚ್ ಆಗಲಿದೆ. ಇನ್ನು ಇದಕ್ಕೊಸ್ಕರ ಪ್ರತಿ ಬೂತ್ನಲ್ಲಿ ಓರ್ವ ಮಹಿಳೆ ಸೇರಿ ನಾಲ್ಕು ಜನರನ್ನ ನೇಮಕ ಮಾಡಲಾಗುತ್ತದೆ. ಸರಿಸುಮಾರು 1 ಕೋಟಿ 13 ಲಕ್ಷ ಕುಟುಂಬಗಳು ಇದರ ಉಪಯೋಗ ಪಡೆಯಲಿವೆ. ಇನ್ನು ಲಾಂಚ್ ಮಾಡಿದಾಗ ಗೊಂದಲ ಮೂಡಬಾರದು ಎಂಬ ಒಂದೇ ಕಾರಣಕ್ಕೆ ಸೂಕ್ಷ್ಮವಾಗಿ ಸಾಫ್ಟ್‌ವೇರ್ ರೆಡಿ ಮಾಡುತ್ತಿದ್ದೇವೆ. ಬಹಳ ಬೇಗ ಇದನ್ನ ಬಿಡುಗಡೆ ಮಾಡ್ತೀವಿ ಅದೇ ಕೆಲಸ ಪ್ರಗತಿಯಲ್ಲಿದೆ ಎಂದರು.
ಇದೇ ವೇಳೆ ಶಕ್ತಿ ಯೋಜನೆಯಿಂದ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ತೆರಳಿ ಬಸ್‌ಗಳು ಫುಲ್ ಆಗುತ್ತಿರುವ ವಿಚಾರ ‘ಮಹಿಳೆಯರು ಬರೀ ಮನೆ ಕೆಲಸಕ್ಕೆ, ಮಕ್ಕಳನ್ನ ಹೆರುವುದಕ್ಕೆ ಮಾತ್ರ ಸೀಮಿತವಾಗಬಾರದು, ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಎಲ್ಲಾ ದೇವಸ್ಥಾನಕ್ಕೆ ಹೋಗಿ, ಎಲ್ಲರೂ ಪುನೀತರಾಗಲಿ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲೆಂದು ನಾನೂ ಪ್ರಾರ್ಥಿಸುವೆ ಎಂದಿದ್ದಾರೆ.
ಇನ್ನು ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆಯೆಂಬ ವಿಚಾರವಾಗಿ ‘ ಇದು ಸಂಪೂರ್ಣ ದ್ವೇಷ ರಾಜಕಾರಣ ಬೇರೆ ಏನೂ ಅಲ್ಲ. ಎಫ್‌ಸಿಐದವರು ಮೊದಲು ಕೊಡುತ್ತೇನೆಂದು ಹೇಳಿ, ವಿತ್ ಡ್ರಾ ಮಾಡಿಕೊಂಡಿದ್ದಾರೆ. ರಾಜ್ಯದ ಜನರು ವಿಚಾರ ಮಾಡಬೇಕಾಗಿಲ್ಲ. ನಾವು ಏನು ಭರವಸೆ ಕೊಟ್ಟಿದ್ದೇವೆ ಅದನ್ನ ಈಡೇರಿಸುತ್ತೇವೆ, ಜಾರ್ಖಂಡ್, ತೆಲಂಗಾಣ, ಪಂಜಾಬ್ ಜೊತೆ ಚರ್ಚೆ ಆಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಮ್ಮ ಆಹಾರ ಸಚಿವರು ಕೊಡುತ್ತಾರೆಂದು ಹೇಳಿದರು. ಈ ಸಂದರ್ಭದಲ್ಲಿ ಮಹದಾಯಿ ವಿಚಾರದಲ್ಲಿ ಗೋವಾಕ್ಕೆ ಮಹಾರಾಷ್ಟ್ರ ಬೆಂಬಲ ಕುರಿತು ‘ಅದರ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡ್ತೀನಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ