ಅನ್ನ ಮಾಡಿ ಬೀದಿಗೆ ಹಾಕಿದರೆ ಕೊರೊನಾ ಮಾರಿ ಹೋಗುತ್ತದಾ? ಇದೆಂತಹ ನಂಬಿಕೆಯಲ್ಲಿ ಮುಳುಗಿದ್ದಾರೆ ಜನ

|

Updated on: May 25, 2021 | 2:19 PM

ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಗ್ರಾಮದ ಅಷ್ಟೂ ಜನ ಮೌಢ್ಯ ಆಚರಣೆಯಲ್ಲಿ ಮುಳುಗಿದ್ದಾರೆ. ಕೊರೊನಾವನ್ನ ಓಡಿಸಬೇಕು ಎಂದು ಪ್ರತಿ ಮನೆಯಲ್ಲಿ ಅನ್ನ ಮಾಡಿಸಿ ಊರಿನ ಹೊರಗೆ ಸುರಿದು ಬರಲಾಗುತ್ತಿದೆ.

ಅನ್ನ ಮಾಡಿ ಬೀದಿಗೆ ಹಾಕಿದರೆ ಕೊರೊನಾ ಮಾರಿ ಹೋಗುತ್ತದಾ? ಇದೆಂತಹ ನಂಬಿಕೆಯಲ್ಲಿ ಮುಳುಗಿದ್ದಾರೆ ಜನ
ಗ್ರಾಮದ ಜನರಿಂದ ಅನ್ನ ಸಂಗ್ರಹಿಸುತ್ತಿರುವ ದೃಶ್ಯ
Follow us on

ಬಳ್ಳಾರಿ: ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದರ ಜೊತೆ ಜೊತೆಗೆ ಮೌಢ್ಯ ಆಚರಣೆಗಳು ಕಾಣಿಸಿಕೊಳ್ಳುತ್ತಿವೆ. ಅಥವಾ ಜನರನ್ನು ಮಹಾಮಾರಿ ಕೊರೊನಾ ಅಷ್ಟೊಂದು ಅಸಹಾಯಕವನ್ನಾಗಿಸಿದೆ. ಮಹಾಮಾರಿ ಕೊರೊನಾ ದೂರವಾಗಲಿ ಎಂದು ನೂರಾರು ಕೆಜಿ ಅನ್ನವನ್ನು ಮಾಡಿ, ಅದನ್ನು ಗ್ರಾಮಸ್ಥರು ಮಣ್ಣಿಗೆ ಸುರಿದಿರುವ ಘಟನೆ ಬಳ್ಳಾರಿ ತಾಲೂಕಿನ ಕಗ್ಗಲ್ಲು ಗ್ರಾಮದಲ್ಲಿ ನಡೆದಿದೆ.

ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಗ್ರಾಮದ ಅಷ್ಟೂ ಜನ ಮೌಢ್ಯ ಆಚರಣೆಯಲ್ಲಿ ಮುಳುಗಿದ್ದಾರೆ. ಕೊರೊನಾವನ್ನ ಓಡಿಸಬೇಕು ಎಂದು ಪ್ರತಿ ಮನೆಯಲ್ಲಿ ಅನ್ನ ಮಾಡಿಸಿ ಊರಿನ ಹೊರಗೆ ಸುರಿದು ಬರಲಾಗುತ್ತಿದೆ. ಗ್ರಾಮದ ಒಂದೊಂದು ಮನೆಯಿಂದ 5 ಕೆಜಿ ಅನ್ನ ಮಾಡಿಸಿ ಎಲ್ಲವನ್ನೂ ಒಂದು ಕಡೆ ಒಟ್ಟುಗೂಡಿಸಿ ರಾತ್ರಿ ವೇಳೆ ಅನ್ನವನ್ನು ಊರಿನ ನಾಲ್ಕು ದಿಕ್ಕುಗಳು ಸೇರಿದಂತೆ ಊರಿನ ಸುತ್ತ ಎಸೆದು ಬರುತ್ತಿದ್ದಾರೆ.

ತಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ಧತಿಯನ್ನ ನಾವು ನಡೆಸುತ್ತಿದ್ದೇವೆ
ಅನಾದಿ ಕಾಲದಿಂದಲೂ ಈ ಪದ್ಧತಿ ಚಾಲ್ತಿಯಲ್ಲಿದೆ. ಪ್ಲೇಗ್ ಮಾರಿಯಂತಹ ದೊಡ್ಡ ಸಾಂಕ್ರಾಮಿಕ ರೋಗ ನಮ್ಮ ಹಿರಿಯರು ಈ ನಂಬಿಕೆಯನ್ನು ನಡೆಸಿಕೊಂಡು ಬಂದಿದ್ದರು. ಗ್ರಾಮದ ಜನರು ಮಡಿಯಿಂದ ಚರಗಾ ಸಲ್ಲಿಕೆ (ಮೊಸರು ಸೇರಿಸಿದ ಅನ್ನ) ಮಾಡಲಾಗುತ್ತೆ. ಅದನ್ನು ಊರಿನ ಪ್ರಮುಖ ಗ್ರಾಮಸ್ಥರು ಊರಿನ ಸುತ್ತ ಚರಗಾ ಸಲ್ಲಿಸಿ ಬರುತ್ತಾರೆ. ಹೀಗೆ ಮಾಡುವುದರಿಂದ ಊರಿಗೆ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂಬುವುದು ಊರಿನ ಜನರ ನಂಬಿಕೆಯಾಗಿದೆ. ಹೀಗಾಗಿ ನಮ್ಮ ಹಿರಿಯರು ನಡೆಸಿಕೊಂಡು ಬಂದ ನಂಬಿಕೆಯನ್ನು ನಾವು ನಡೆಸಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಮದ ಜನರಿಂದ ಅನ್ನ ಸಂಗ್ರಹಿಸುತ್ತಿರುವ ದೃಶ್ಯ

ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡು ಅದೆಷ್ಟೂ ಜನ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವಾಗ…

ಕೊರೊನಾ ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡು ಅದೆಷ್ಟೂ ಜನ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇದರ ನಡುವೆ ಮೌಢ್ಯತೆಯಿಂದ ಅನ್ನವನ್ನು ಮಣ್ಣುಪಾಲು ಮಾಡಲಾಗುತ್ತಿದೆ. ಇಂತಹ ನಂಬಿಕೆಗಳನ್ನು ನಾವು ಬೆಂಬಲಿಸಬಾರದು. ಮೂಢನಂಬಿಕೆ ಆಚರಣೆಗಳನ್ನು ಮಾಡಬಾರದು. ನರ ಬಲಿ, ಅನ್ನ ಎಸೆಯುವಂತಹ ನಂಬಿಕೆ ಆಚರಣೆಗಳು ಮರೆಯಾಗಬೇಕು. ಅದೇ ಅನ್ನವನ್ನು ಬಡವರಿಗೆ ನೀಡಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಬೇಕಾಗಿದೆ. ಇದು ಟಿವಿ9 ಡಿಜಿಟಲ್​ ಕಳಕಳಿ.

ಇದನ್ನೂ ಓದಿ: ಮೂಢನಂಬಿಕೆಗೆ ಪೈಶಾಚಿಕ ಕೃತ್ಯ.. ಹೆಣ್ಣು ಮಕ್ಕಳ ದಿನದಂದೆ ದೇವರ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಕೊಂದ ತಂದೆ-ತಾಯಿ

Published On - 12:53 pm, Tue, 25 May 21