ಬಳ್ಳಾರಿ: ಕೊರೊನಾ ತಾಜಾ ಅಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಗಡಿ ಭಾಗಗಳಿಂದ ಮಹಾಮಾರಿ ನುಸುಳುತ್ತಿರುವುದು ಹೆಚ್ಚಾಗಿದೆ. ಆದರೆ ಅದು ಆ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ. ಇತ್ತ ಮತ್ತಂದು ನೆರೆ ರಾಜ್ಯವಾದ ಆಂಧ್ರದಿಂದಲೂ ಕೊರೊನಾ ಸೋಂಕು ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದೆ. ಹೈದರಾಬಾದ್ನಿಂದ ಬಂದಿದ್ದ 7 ಜನರಿಗೆ ಕೊರೊನಾ ದೃಢಪಟ್ಟಿದೆ. ಬಳ್ಳಾರಿಯ ಸತ್ಯನಾರಾಯಣಪೇಟೆಗೆ ಬಂದು, ಅಲ್ಲಿನ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ 7 ಜನರಿಗೆ ಕೊರೊನಾ ಸೋಂಕು ತಾಕಿದೆ.
ಬಳ್ಳಾರಿಗೆ ಆತಂಕ ತಂದಿತ್ತ ಹೈದರಾಬಾದ್ ಪ್ರಯಾಣ:
ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಅಪಾರ್ಟ್ಮೆಂಟ್ ಅನ್ನು ಕಂಟೇನ್ಮೆಂಟ್ ಜೋನ್ ಆಗಿ ಮಾಡಿದ್ದಾರೆ. ಅಪಾರ್ಟ್ಮೆಂಟ್ನಲ್ಲಿರುವ 170 ಜನರಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದ್ದು, ಇಂದು ಸಂಜೆ ಎಲ್ಲರ ಕೊವಿಡ್ ಟೆಸ್ಟ್ ವರದಿ ಬರಲಿದೆ.
ಯಲಹಂಕದ ಸಂಭ್ರಮ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸ್ಪೋಟ..
ಯಲಹಂಕದ ಸಂಭ್ರಮ್ ಕಾಲೇಜಿನ ಎಂಬಿಎ ಬ್ಲಾಕ್ ಕಂಟೈನ್ಮೆಂಟ್ ಜೋನ್ ಮಾಡಲಾಗಿತ್ತು. ನಿನ್ನೆ 10 ಕೇಸ್ ಇದ್ದ ಸಂಖ್ಯೆ ಇಂದು 15 ಕ್ಕೆ ಹೆಚ್ಚಳವಾಗಿದೆ. ಕೇರಳ ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಪಿಜಿಯಲ್ಲೂ ಬಿಬಿಎಂಪಿ ಪರೀಕ್ಷೆ ನಡೆಸಿತ್ತು. ಈಗ ಮತ್ತೆ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಎಂಬಿಎ ಬ್ಲಾಕ್ ಮಾತ್ರ ಕಂಟೈನ್ಮೆಂಟ್ ಜೋನ್ ಎಂದು ಮಾಡಲಾಗಿ. ಉಳಿದ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಎಂಬಿಎ ಬ್ಲಾಕ್ಗೆ ಸಂಪೂರ್ಣ ಪ್ರವೇಶ ನಿಷೇಧ ಹೇರಲಾಗಿದೆ. ಬಿಬಿಎಂಪಿ ನಿನ್ನೆ ಕೂಡ ಕ್ಯಾಂಪಸ್ನಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿತ್ತು.
ನಗರದಲ್ಲಿ ಕ್ಲಸ್ಟರ್ ರೀತಿಯ ಕೊರೊನಾ ಪ್ರಕರಣ..
ರಾಜ್ಯ ರಾಜಧಾನಿಯಲ್ಲಿ ಕೊರೊನಾ ಎರಡನೇ ಅಲೆ ಭೀತಿ ಶುರುವಾಗಿದೆ. ಸಾಲು ಸಾಲು ಕ್ಲಸ್ಟರ್ ರೀತಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕ್ಲಸ್ಟರ್ ಕೊರೊನಾ ಪ್ರಕರಣಗಳು 2ನೇ ಅಲೆಯ ಸಂಕೇತ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕ್ಲಸ್ಟರ್ ರೀತಿಯ ಪ್ರಕರಣಗಳಿಗೆ ಬ್ರೇಕ್ ಹಾಕಬೇಕೆಂದು ತಜ್ಞರು ಎಚ್ಚರಿಕೆ ನೀಡಿದ್ದರು.
ಕ್ಲಸ್ಟರ್ ರೀತಿಯ ಪ್ರಕರಣಗಳು ಅಂದರೆ ಒಂದೇ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನರಿಗೆ ವೈರಸ್ ಹರಡುವುದು ಎಂದರ್ಥ. ಕಳೆದ 20 ದಿನಗಳ ಅಂತರದಲ್ಲಿ ರಾಜಧಾನಿಯಲ್ಲಿ 5 ಕಡೆಗಳಲ್ಲಿ ಕ್ಲಸ್ಟರ್ ಪ್ರಕರಣಗಳು ಕಂಡುಬಂದಿವೆ.
ಯಾವುದು ಆ ಕ್ಲಸ್ಟರ್ಗಳು?
– ಮಂಜುಶ್ರೀ ನರ್ಸಿಂಗ್ ಕಾಲೇಜು
– ಸಂಭ್ರಮ್ ಕಾಲೇಜು
– ಬಿಳೇಕಹಳ್ಳಿಯ ಖಾಸಗಿ ಅಪಾರ್ಟ್ಮೆಂಟ್
– ಬೆಳ್ಳಂದೂರು ಖಾಸಗಿ ಅಪಾರ್ಟ್ಮೆಂಟ್
– ಅಗ್ರಗಾಮಿ ಕಾಲೇಜು
ಐದು ಕ್ಲಸ್ಟರ್ಗಳಿಂದ 150ಕ್ಕೂ ಅಧಿಕ ಕೋವಿಡ್ ಕೇಸಸ್ ಪತ್ತೆಯಾಗಿದೆ.ಹೀಗಾಗಿ ಪಾಸಿಟಿವ್ ಬಂದ ಪ್ರಕರಣಗಳ ಬಗ್ಗೆ ಬಿಬಿಎಂಪಿ ತಲೆ ಕೆಡಿಸಿಕೊಂಡಿದೆ. ಸೋಂಕಿತರ ಸ್ವಾಬ್ ಟೆಸ್ಟ್ ಬಗ್ಗೆ ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದು, ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಮಂಜುಶ್ರೀ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿಗಳ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ರಿಪೋರ್ಟ್ ಬಂದಿದೆ. ಅದೃಷ್ಟವಶಾತ್ ಸೋಂಕಿತರಿಗೆ ಬಂದಿರುವುದು ಹಳೆ ಸೋಂಕು ಎಂದು ಧೃಡಪಟ್ಟಿದೆ.
Published On - 12:13 pm, Sat, 27 February 21