ಸಾಲಕ್ಕಾಗಿ ಲೋನ್ ಆ್ಯಪ್ಗಳ ಮೊರೆ ಹೋಗುವ ಮುನ್ನ ಎಚ್ಚರ! ಇದರ ಹಿಂದಿದೆ ದೊಡ್ಡ ಜಾಲ
ಲೋನ್ ಆ್ಯಪ್ಗಳ ಅಸಲಿ ಮುಖ ಕಳಚಿದ್ದ ಸಿಸಿಬಿ ಸಾಲ ಪಡೆದು ಆತಂಕದಲ್ಲಿದ್ದವರ ಕಣ್ಣೀರು ಒರೆಸೊ ಕೆಲಸ ಮಾಡಿತ್ತು. ಪ್ರಕರಣದ ಇಂಚಿಂಚು ಮಾಹಿತಿ ಕೆದಕಿದ ಪೊಲೀಸರಿಗೆ ಸಾವಿರಾರು ಮಂದಿ ಮೋಸ ಹೋದ ವಿಚಾರ ಬಯಲಿಗೆ ಬಂದಿದ್ದು, ಕೋಟಿ ಕೋಟಿ ಹಣದ ಅಸಲಿ ಲೆಕ್ಕಚಾರ ಬಯಲಾಗಿದೆ.
ಬೆಂಗಳೂರು: ಏಸ್ ಪರ್ಲ್ ಕಂಪನಿ ಹೆಸರಲ್ಲಿ ಶುರುವಾಗಿದ್ದ ಮನಿ ಡೇ, ಪೈಸಾ ಪೇ, ಲೋನ್ ಟೈಂ, ರುಪೀಡೇ, ರುಪಿ ಕಾರ್ಟ್, ಇನ್ ಕ್ಯಾಶ್ ಅನ್ನೋ ಲೋನ್ ಆ್ಯಪ್ಗಳು ಜನರಿಗೆ ಸಾಲ ಕೊಟ್ಟು, ವಸೂಲಿ ಹೆಸರಲ್ಲಿ ಕಿರುಕುಳ ನೀಡ್ತಿದ್ರು ಅನ್ನೋ ವಿಚಾರ ಬಯಲು ಮಾಡಿದ್ದ ಸಿಸಿಬಿ, ಕೇಸ್ ಸಂಬಂಧ ಮೂವರು ಡೈರೆಕ್ಟರ್ಗಳನ್ನ ಬಂಧಿಸಿತ್ತು. ಈ ಪ್ರಕರಣ ಈಗ ಸಿಐಡಿಗೆ ವರ್ಗವಾಗಿದ ಬೆನ್ನಲ್ಲೇ ಸಿಐಡಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಹೊಸದಾಗಿ ಬಂಧಿಸಲಾದ ಆರೋಪಿಗಳ ಹಿನ್ನೆಲೆಯ ಬಗ್ಗೆ ವಿಚಾರಣೆ ಮುಂದುವರಿದಿದೆ.
ಚೀನಾ ಮೂಲದ ಇಬ್ಬರು ಕಂಪನಿಯನ್ನ ಶುರು ಮಾಡಿದ್ರು. ಆ ಇಬ್ಬರು ಆರೋಪಿಗಳಿಗಾಗಿ ತಲಾಶ್ ಮುಂದುವರಿದಿದೆ. ಇದರ ಜೊತೆಗೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಆ್ಯಪ್ಗಳ ವ್ಯವಹಾರದ ವಿಚಾರ ಒಂದೊಂದಾಗಿ ಬಯಲಾಗಿದೆ. ಈ ಆ್ಯಪ್ಗಳು ಈವರೆಗೆ 15 ಸಾವಿರ ಮಂದಿಗೆ ಸಾಲ ನೀಡಿರೋ ವಿಚಾರದ ಜೊತೆಗೆ 15 ಕೋಟಿಯಷ್ಟು ಸಾಲ ಹಾಗೂ ವ್ಯವಹಾರ ನಡೆಸಿರೋ ವಿಚಾರ ಪತ್ತೆಯಾಗಿದೆ. ಈ ಹಣ ಬಂದ ಮೂಲ ಬೆನ್ನತ್ತಿರೋ ಸಿಐಡಿ ಪೊಲೀಸರು ಶೀಘ್ರವೇ ಮತ್ತೊಂದು ಬೇಟೆಯಾಡೊ ಸಾಧ್ಯತೆ ಇದೆ.
ಇವರು ಜನರ ಜೀವನದ ಜೊತೆ ಆಟವಾಡಿದ್ದು, ಮಾನಸಿಕ ಒತ್ತಡ ಹೇರೋ ಮೂಲಕ ಸಾಲ ವಸೂಲಿ ಮಾಡ್ತಿದ್ರು. ಸಾಲ ಪಡೆದವರು ಸಂಪೂರ್ಣ ಹಣ ಪಾವತಿ ಮಾಡಿದ್ರೂ ಬಿಡದ ಕಂಪನಿಯವರು ಪೊಲೀಸರ ಹೆಸರು ಹಾಗೂ ನಕಲಿ ವಾರೆಂಟ್ನ ಕಥೆ ಕಟ್ಟಿ ಆತಂಕ ಮೂಡುವಂತೆ ಮಾಡ್ತಿದ್ರು. ಇದರಿಂದ ಅನೇಕ ಮಂದಿ ತಾವು ಪಡೆದ ಸಾಲಕ್ಕಿಂತ ದುಪ್ಪಟ್ಟು ಬಡ್ಡಿ ನೀಡಿರುವ ವಿಚಾರ ಸಹ ಬಯಲಾಗಿದೆ.
ಸದ್ಯ ಸಿಸಿಬಿಯಿಂದ ತನಿಖೆ ಸಿಐಡಿಗೆ ವರ್ಗವಾಗಿದ್ದು, ಕೇಸ್ ಸಂಬಂಧ ಇನ್ಯಾವ ವಿಚಾರಗಳು ಬಯಲಾಗಲಿದೆ ಅನ್ನೊದನ್ನ ಕಾದು ನೋಡಬೇಕಿದೆ.
ಆನ್‌ಲೈನ್ ಆ್ಯಪ್ ಮೂಲಕ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಮೂವರ ಬಂಧನ