ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಲೋಕಾರ್ಪಣೆ ಯಾವಾಗ? ಗಡ್ಕರಿ ಕೊಟ್ಟರು ಮಹತ್ವದ ಮಾಹಿತಿ

Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಯ ಕಾಮಗಾರಿ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಮಾಹಿತಿ ನೀಡಿದ್ದಾರೆ. 15,188 ಕೋಟಿ ರೂ. ವೆಚ್ಚದ 262 ಕಿ.ಮೀ ಉದ್ದದ ಈ ಹೆದ್ದಾರಿಯ ಕರ್ನಾಟಕ ಭಾಗದಲ್ಲಿ ವಾಹನ ಸಂಚಾರ ಈಗಾಗಲೇ ಆರಂಭವಾಗಿದ್ದರೂ ಪೂರ್ತಿ ಕಾಮಗಾರಿ ಮುಗಿದಿಲ್ಲ. 2025 ಡಿಸೆಂಬರ್-2026 ಮಾರ್ಚ್ ನಡುವೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಲೋಕಾರ್ಪಣೆಯಾಗಲಿದೆ.

ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಲೋಕಾರ್ಪಣೆ ಯಾವಾಗ? ಗಡ್ಕರಿ ಕೊಟ್ಟರು ಮಹತ್ವದ ಮಾಹಿತಿ
ನಿತಿನ್ ಗಡ್ಕರಿ ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಭಾಗಶಃ ಸಂಚಾರಕ್ಕೆ ಮುಕ್ತವಾಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ವೈಮಾನಿಕ ನೋಟ

Updated on: Aug 23, 2025 | 2:04 PM

ನವದೆಹಲಿ, ಆಗಸ್ಟ್ 23: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ (Bengaluru-Chennai Expressway) ಲೋಕಾರ್ಪಣೆ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ 15,188 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 262 ಕಿ.ಮೀ ಉದ್ದದ ಎಕ್ಸ್​​ಪ್ರೆಸ್​ ವೇಯಲ್ಲಿ ಕರ್ನಾಟಕ ವ್ಯಾಪ್ತಿಯಲ್ಲಿ ಈಗಾಗಲೇ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸಂಪೂರ್ಣ ಕಾಮಗಾರಿ 2025 ರ ಡಿಸೆಂಬರ್ ಮತ್ತು 2026 ರ ಮಾರ್ಚ್ ನಡುವೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ನಂತರ ಎಕ್ಸ್​​ಪ್ರೆಸ್​​​ ವೇ ಲೋಕಾರ್ಪಣೆಯಾಗಲಿದೆ. ಎಕ್ಸ್​ಪ್ರೆಸ್ ವೇ ಕಾಮಗಾರಿ ಬಗ್ಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.

ಬೆಂಗಳೂರು-ಹೈದರಾಬಾದ್ (512 ಕಿ.ಮೀ) ಮತ್ತು ಬೆಂಗಳೂರು-ಪುಣೆ (700 ಕಿ.ಮೀ) ಎಕ್ಸ್‌ಪ್ರೆಸ್‌ವೇಗಳಿಗೆ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಸಲ್ಲಿಸಲಾಗಿದೆ ಎಂಬುದನ್ನೂ ಕೇಂದ್ರ ಸಚಿವರು ತಿಳಿಸಿದ್ದಾರೆ. ಹೊಸ ಎಕ್ಸ್‌ಪ್ರೆಸ್‌ವೇ ಜಾಲವು ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳು, ರಸ್ತೆಬದಿಯ ಸೌಲಭ್ಯಗಳು ಮತ್ತು ಯುಟಿಲಿಟಿ ಕಾರಿಡಾರ್‌ಗಳನ್ನು ಹೊಂದಿರುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಎಕ್ಸ್​​ಪ್ರೆಸ್ ವೇ ಯೋಜನೆಗಳ ವಿಳಂಬಕ್ಕೆ ಕಾರಣವೇನು?

ಎಕ್ಸ್​​ಪ್ರೆಸ್ ವೇ ಯೋಜನೆಗಳ ವಿಳಂಬಕ್ಕೆ ಕಾರಣಗಳನ್ನು ತಿಳಿಸಿದ ಅವರು, ಭೂಸ್ವಾಧೀನಕ್ಕೆ ವಿರೋಧ, ಪರಿಹಾರ ವಿತರಣೆಯಲ್ಲಿ ನಿಧಾನಗತಿ ಮತ್ತು ಧಾರ್ಮಿಕ ಕಟ್ಟಡಗಳನ್ನು ಸ್ಥಳಾಂತರಿಸುವಲ್ಲಿನ ತೊಂದರೆಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿವೆ ಎಂದು ಹೆದ್ದಾರಿ ಸಚಿವಾಲಯ ಹೇಳಿದೆ.

ಆಂಧ್ರಪ್ರದೇಶದಲ್ಲಿ, ಕೌಂಡಿನ್ಯಾ ವನ್ಯಜೀವಿ ಅಭಯಾರಣ್ಯದ ಬಳಿ ಕಾಮಗಾರಿಗಳಿಗೆ ಅನುಮೋದನೆ ದೊರೆಯದೇ ಇರುವುದು ಹಿನ್ನಡೆ ಉಂಟುಮಾಡಿತು. ತಮಿಳುನಾಡಿನಲ್ಲಿ ಜನವಸತಿಗಳ ಬಳಿ ಬ್ಲಾಸ್ಟಿಂಗ್ ಮೇಲಿನ ನಿರ್ಬಂಧಗಳು, ಆರ್ಥಿಕ ನಿರ್ಬಂಧಗಳು ಮತ್ತಿತರ ಕಾರಣಗಳು ಯೋಜನೆಯನ್ನು ನಿಧಾನಗೊಳಿಸಿದವು ಎಂದು ಸಚಿವಾಲಯ ಹೇಳಿದೆ.

ಬೆಂಗಳೂರು ಚೆನ್ನೈ ಪ್ರಯಾಣದ ಅವಧಿ 3 ಗಂಟೆಗೆ ಇಳಿಕೆ!

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ. ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಸಂಸದ ಪಿಸಿ ಮೋಹನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಅಪಘಾತದ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ

ಈ ಎಕ್ಸ್‌ಪ್ರೆಸ್‌ವೇಯಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಅವಧಿ ಆರು ಗಂಟೆಗಳಿಂದ 3 ಗಂಟೆಗೆ ಇಳಿಕೆಯಾಗಲಿದೆ. NH-44 ಮತ್ತು NH-48 ರ ದಟ್ಟಣೆ ಕಡಿಮೆಯಾಗುತ್ತದೆ. ಸರಕು ಸಾಗಣೆ ವೆಚ್ಚ ಕಡಿಮೆಯಾಗುವುದರಿಂದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಮೋಹನ್ ಹೇಳಿದ್ದಾರೆ. ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಎಂದೂ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಗುರುತಿಸಲ್ಪಡಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ