ಧರ್ಮಸ್ಥಳ ಪ್ರಕರಣ: ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯ ಎಸ್ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ
ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಅನಾಮಿಕ ದೂರುದಾರನ ಅಸಲಿ ಮುಖ ಬಹಿರಂಗವಾಗಿದೆ. ದೂರುದಾರ ಸಿಎನ್ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಹೀಗಾಗಿ ಇನ್ನು 10 ದಿನಗಳ ಕಾಲ ಆತನನ್ನು ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸಲಿದೆ.
ಮಂಗಳೂರು, ಆಗಸ್ಟ್ 23: ಧರ್ಮಸ್ಥಳ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದುಕೊಂಡು ಬಂದಿದ್ದ ದೂರುದಾರ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ ವಿಶೇಷ ತನಿಖಾ ತಂಡದ (ಎಸ್ಐಟಿ) ವಶಕ್ಕೆ ಒಪ್ಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯ ಶನಿವಾರ ಆದೇಶಿಸಿದೆ. ಇದರ ಬೆನ್ನಲ್ಲೇ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದಿನಿಂದ ಹತ್ತು ದಿನಗಳ ಕಾಲ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ವಿಚಾರಣೆ ನಡೆಸಲಿದ್ದು, ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಸುತ್ತಾಮುತ್ತ ಹಲವು ಕಡೆ ಕರೆದೊಯ್ದು ಸ್ಥಳ ಮಹಜರು ಕೂಡ ಮಾಡುವ ಸಾಧ್ಯತೆ ಇದೆ. ಆತ ಬುರುಡೆ ತಂದ ಜಾಗಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಆರೋಪಿಯ ಹಿಂದೆ ಸಾಕಷ್ಟು ಜನ ಇದ್ದಾರೆ. ಈ ಬಗ್ಗೆ ವಿವರವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ಹೀಗಾಗಿ ಚಿನ್ನಯ್ಯನನ್ನು ವಶಕ್ಕೆ ನೀಡಬೇಕು ಎಂದು ಎಸ್ಐಟಿ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಎಸ್ಐಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಚಿನ್ನಯ್ಯನನ್ನು ತೀವ್ರ ವಿಚಾರಣೆಯ ನಂತರ ಶನಿವಾರ ಬೆಳಗ್ಗೆ ಎಸ್ಐಟಿ ಬಂಧಿಸಿದೆ.
