ಬೀದಿಗಿಳಿದು ಡ್ರಗ್ಸ್​ ಮಾರಲು ಯತ್ನ: ಸಿನಿಮಾ ಸ್ಟೈಲ್​ನಲ್ಲಿ ವಿದೇಶಿ ಮಹಿಳೆ ಲಾಕ್​

Updated on: Nov 03, 2025 | 12:38 PM

ಡ್ರಗ್ಸ್ ಪೆಡ್ಲಿಂಗ್ ಆರೋಪದಡಿ ನೈಜೀರಿಯಾ ಮೂಲದ ಮಹಿಳೆಯನ್ನು ಬೆಂಗಳೂರಿನ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಮಕ್ಕಳು ನೀಡಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸ್ಥಳೀಯರು ಮತ್ತು ಪೊಲೀಸರು, 35 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗುವ ಯತ್ನದಲ್ಲಿ ಡ್ರಗ್ಸ್ ಬಿಸಾಡಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಬೆಂಗಳೂರು, ನವೆಂಬರ್​ 03: ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಸ್ಟೆಫಿನ್ ಬ್ಲೆಸ್ಸಿಂಗ್ ನೋಸ್ಲಿ (35) ಬಂಧಿತ ಮಹಿಳೆಯಾಗಿದ್ದು, ಆರೋಪಿಯಿಂದ 35 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯನ್ನು ಆಟವಾಡುತ್ತಿದ್ದ ಮಕ್ಕಳು ಗಮನಿಸಿದ್ದಾರೆ. ಮಕ್ಕಳಿಂದ ಮಾಹಿತಿ ಪಡೆದ ಸ್ಥಳೀಯರು, ರಾಜೇಶ್ ಎಂಬುವವರ ನೇತೃತ್ವದಲ್ಲಿ ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಮಹಿಳೆ ಮನೆಯೊಂದರ ಸೆಲ್ಲರ್‌ನಲ್ಲಿ ಅಡಗಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಆಕೆಯನ್ನು ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೊಡಿಗೆಹಳ್ಳಿ ಪೊಲೀಸರು ತನಿಖೆ ನಡೆಸಿದಾಗ, ಆರೋಪಿ ಪರಾರಿಯಾಗುವ ಯತ್ನದಲ್ಲಿ ಎಂಡಿಎಂಎ ಕ್ರಿಸ್ಟಲ್ ಪ್ಯಾಕೆಟ್ ಅನ್ನು ಬಕೆಟ್‌ಗೆ ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.