ಲಂಡನ್‌ನಿಂದ ಬಂದವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್: ಉಳಿದವರು ಸಾರ್ವಜನಿಕ ಸಾರಿಗೆ ಬಳಸಿ ಮನೆಗೆ ವಾಪಸ್!

| Updated By: ganapathi bhat

Updated on: Apr 06, 2022 | 9:15 PM

ಇಂಗ್ಲೆಂಡ್​ನಿಂದ 289 ಜನ ಬೆಂಗಳೂರಿಗೆ ಬಂದಿದ್ದಾರೆ. 4 ಜನರ ಗುಂಪಿನಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಯಾರಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಇನ್ನಷ್ಟೇ ತಿಳಿಯಬೇಕಿದೆ.

ಲಂಡನ್‌ನಿಂದ ಬಂದವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್: ಉಳಿದವರು ಸಾರ್ವಜನಿಕ ಸಾರಿಗೆ ಬಳಸಿ ಮನೆಗೆ ವಾಪಸ್!
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೊವಿಡ್ ಪರೀಕ್ಷೆ
Follow us on

ಬೆಂಗಳೂರು: ಲಂಡನ್‌ನಿಂದ ಬೆಂಗಳೂರಿಗೆ ಇಂದು ಮುಂಜಾನೆಯ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಲ್ಲಿ, ನಾಲ್ವರ ಕೊರೊನಾ ವರದಿಯ ಬಗ್ಗೆ ಅನುಮಾನ ಉಂಟಾಗಿದೆ. ಹಾಗಾಗಿ, ಸಿಬ್ಬಂದಿ ನಾಲ್ವರನ್ನು ವಿಮಾನ ನಿಲ್ದಾಣದಲ್ಲೇ ಉಳಿಸಿಕೊಂಡಿದ್ದಾರೆ.

ಲಂಡನ್‌ನಿಂದ ಆಗಮಿಸಿದ 289 ಜನರ ಪೈಕಿ 285 ಜನರ ಕೊವಿಡ್ ವರದಿ ನೆಗೆಟಿವ್ ಆಗಿದೆ. ಹೀಗಾಗಿ, ಅವರೆಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಉಳಿದಂತೆ, 4 ಟೆಸ್ಟ್ ರಿಪೋರ್ಟ್‌ಗಳ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ, ಅವರಿಗೆ ಏರ್‌ಪೋರ್ಟ್‌ನಲ್ಲಿಯೇ ಮತ್ತೊಮ್ಮೆ ಕೊವಿಡ್ ಪರೀಕ್ಷೆ ಮಾಡಲು ಸಿಬ್ಬಂದಿ ನಿರ್ಧರಿಸಿದರು.

ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದರೆ ಹೋಂ ಕ್ವಾರಂಟೈನ್, ಪಾಸಿಟಿವ್ ಬಂದರೆ ಐಸೋಲೇಷನ್‌ಗೆ ಕಳಿಸಲು ನಿರ್ಧಾರ ಮಾಡಲಾಗಿತ್ತು. ಹಾಗಾಗಿ, ಸದ್ಯ ನಾಲ್ವರನ್ನು ಹೊರತುಪಡಿಸಿ ಉಳಿದವರು ಹೋಂ ಕ್ವಾರಂಟೈನ್​ಗೆ ತೆರಳಿದ್ದಾರೆ. ನಾಲ್ವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ.

ವಿಮಾನದಲ್ಲಿ ಒಟ್ಟು 145 ಜನ ಪುರುಷರು, 96 ಜನ ಮಹಿಳೆಯರು, 32 ಮಕ್ಕಳು ಹಾಗೂ 16 ಜನ ವಿಮಾನ ಸಿಬ್ಬಂದಿ ಸೇರಿದಂತೆ ಒಟ್ಟು 289 ಜನರು ಲಂಡನ್​ನಿಂದ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಇಂಗ್ಲೆಂಡ್​ನಿಂದ 289 ಜನರು ಬೆಂಗಳೂರಿಗೆ ಬಂದಿದ್ದಾರೆ. 4 ಜನರ ಗುಂಪಿನಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಯಾರಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಇನ್ನಷ್ಟೇ ತಿಳಿಯಬೇಕಿದೆ. 4 ಜನರಿಗೂ ಮತ್ತೊಮ್ಮೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.

ಕೊವಿಡ್ ವರದಿ ನೆಗೆಟಿವ್ ಬಮದವರು ಸಾರ್ವಜನಿಕ ಸಾರಿಗೆಗಳಲ್ಲಿ ಮನೆಗೆ ತೆರಳಿದರು. ಇಂಗ್ಲೆಂಡ್​ನಿಂದ ಬೆಂಗಳೂರಿಗೆ ಆಗಮಿಸಿದವರಲ್ಲಿ, ಕೊರೊನಾ ನೆಗೆಟಿವ್ ವರದಿ ಪಡೆದವರು ಸಾರ್ವಜನಿಕ ವಾಹನಗಳಲ್ಲಿ ಮನೆಗೆ ತೆರಳಿದ್ದಾರೆ. ಅವರ ಕೈಗೆ ಸೀಲ್ ಹಾಕಿಸಿ ಮನೆಗೆ ಕಳುಹಿಸಲಾಗಿದೆ. ಬ್ರಿಟನ್‌ನಿಂದ ಬಂದ ಪ್ರಯಾಣಿಕರು, ಕ್ಯಾಬ್, ಬಸ್‌ಗಳಲ್ಲಿ ಮನೆಗೆ ತೆರಳಿದ್ದಾರೆ.

ಬ್ರಿಟನ್​ನಿಂದ ಆಗಮಿಸಿ, ಕೊರೊನಾ ನೆಗೆಟಿವ್ ವರದಿ ಪಡೆದವರೂ 14 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು. ಯಾರ ಸಂಪರ್ಕಕ್ಕೂ ಬರಬಾರದು ಎಂಬ ನಿಯಮಗಳಿವೆ. ಆದರೆ, ಇಂದು ಲಂಡನ್​ನಿಂದ ಆಗಮಿಸಿ, ಕೊವಿಡ್ ನೆಗೆಟಿವ್ ವರದಿ ಪಡೆದ ಪ್ರಯಾಣಿಕರು ಸಾರ್ವಜನಿಕ ವಾಹನಗಳಲ್ಲಿ ಸಂಚರಿಸಿದ್ದಾರೆ.

ರೂಪಾಂತರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ, ವರದಿ ನೆಗೆಟಿವ್ ಬಂದವರ ಬಗ್ಗೆಯೂ ಸರ್ಕಾರ ಲಕ್ಷ್ಯ ವಹಿಸಬೇಕಿತ್ತು. ಪ್ರತ್ಯೇಕ ವಾಹನಗಳಲ್ಲಿ ಅವರನ್ನು ಮನೆಗೆ ತಲುಪಿಸಬೇಕಾಗಿತ್ತು. ಆದರೆ ಸರ್ಕಾರದಿಂದ ಇಂತಹ ಯಾವುದೇ ಕೆಲಸವಾಗಿಲ್ಲ. ಅವರಿಗೆ ಇಷ್ಟಬಂದ ವಾಹನದಲ್ಲಿ ಮನೆಗೆ ತೆರಳಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿದ್ದಾರೆ. ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರನ್ನು ಕಳಿಸುತ್ತಿದ್ದೇವೆ. 14 ದಿನಗಳಲ್ಲಿ ಕೊರೊನಾ ಬರುತ್ತದೆಂದು ಹೇಳಲು ಆಗುವುದಿಲ್ಲ. ಎಲ್ಲರ ವಿಳಾಸ ಪಡೆದು, ಮಾನಿಟರ್ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಸುಧಾಕರ್ ಹೇಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊವಿಡ್ ವರದಿ ವಿಳಂಬ: ಪ್ರಯಾಣಿಕರ ಆಕ್ರೋಶ

Published On - 2:08 pm, Sun, 10 January 21