Bangalore: ನಿಮಗಿದು ಗೊತ್ತೇ?; 55 ವರ್ಷದ ಹಿಂದೆ ಸಂಚಾರ ಶುರು ಮಾಡಿದ ಕರ್ನಾಟಕದ ಮೊದಲ ಸ್ಲೀಪರ್ ಬಸ್ ಹೀಗಿತ್ತು

| Updated By: ಸುಷ್ಮಾ ಚಕ್ರೆ

Updated on: Sep 27, 2021 | 6:40 PM

ಅದು 1966ರ ಸಮಯ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್​ಗಳ ಸಂಚಾರವನ್ನು ಆರಂಭಿಸಲಾಯಿತು.

Bangalore: ನಿಮಗಿದು ಗೊತ್ತೇ?; 55 ವರ್ಷದ ಹಿಂದೆ ಸಂಚಾರ ಶುರು ಮಾಡಿದ ಕರ್ನಾಟಕದ ಮೊದಲ ಸ್ಲೀಪರ್ ಬಸ್ ಹೀಗಿತ್ತು
55 ವರ್ಷ ಹಿಂದಿನ ಸ್ಲೀಪರ್ ಬಸ್​ನ ಫೋಟೋ
Follow us on

ಬೆಂಗಳೂರು: ಬಸ್​ನಲ್ಲಿ ಬಹಳ ದೂರದ ಪ್ರಯಾಣ ಮಾಡುವವರಿಗೆ ಹಾಗೂ ರಾತ್ರಿ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿ ಎಂದು ಸರ್ಕಾರದಿಂದ ಸ್ಲೀಪರ್ ಕೋಚ್ ಬಸ್​ಗಳ ಸೇವೆಯನ್ನು ಪರಿಚಯಿಸಲಾಗಿತ್ತು. ಈಗ ಕೆಎಸ್​ಆರ್​ಟಿಸಿ ಹಾಗೂ ಖಾಸಗಿಯಲ್ಲಿ ಸ್ಲೀಪರ್ ಬಸ್​ಗಳು ಸಾಮಾನ್ಯ. ಆದರೆ, ಈ ಆರಾಮದಾಯಕ ಬಸ್​ಗಳು ಕರ್ನಾಟಕದಲ್ಲಿ ಸಂಚರಿಸಲು ಶುರುವಾಗಿದ್ದು ಯಾವಾಗ? ಹೇಗೆ? ಎಂಬ ಬಗ್ಗೆ ನಿಮಗೆ ಗೊತ್ತಾ? ಕರ್ನಾಟಕದಲ್ಲಿ ಸ್ಲೀಪರ್ ಬಸ್​ಗಳು ಓಡಾಡಲು ತೊಡಗಿ 55 ವರ್ಷಗಳು ಆಗಿವೆ.

ಅದು 1966ರ ಸಮಯ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್​ಗಳ ಸಂಚಾರವನ್ನು ಆರಂಭಿಸಲಾಯಿತು. ಬೆಂಗಳೂರಿನಿಂದ ಹುಬ್ಬಳ್ಳಿಗೆ 55 ವರ್ಷಗಳ ಹಿಂದೆ ಸ್ಲೀಪರ್ ಬಸ್​ ಸಂಚಾರವನ್ನು ಶುರು ಮಾಡಲಾಯಿತು. ಬಸ್​ನಲ್ಲಿ ಮಲಗಿಕೊಂಡು ಹೋಗಬಹುದು ಎಂಬ ಕಲ್ಪನೆಯೇ ಬಹಳ ಹೊಸದಾಗಿತ್ತು. ಹೀಗಾಗಿ, ಈ ಹೊಸ ರೂಪದ ಬಸ್​ ಅನ್ನು ನೋಡಲು ಶಾಂತಿನಗರ ಬಸ್​ ನಿಲ್ದಾಣಕ್ಕೆ ನೂರಾರು ಜನರು ಸೇರಿದ್ದರು. ಬೆಡ್​ಗಳಿದ್ದ ಬಸ್​ ಅನ್ನು ನೋಡಿ ಜನರು ಪುಳಕಿತರಾಗಿದ್ದರು. ಆ ಬಸ್​ನಲ್ಲಿ ಫ್ಯಾನ್, ರೇಡಿಯೋ ಹಾಗೇ ರೆಕಾರ್ಡ್ ಪ್ಲೇಯರ್ ಮತ್ತು ಟೆಲಿಫೋನ್ ಕೂಡ ಇತ್ತು.

ರಸ್ತೆ ಮೇಲೆ ರೈಲಿನ ರೀತಿಯಲ್ಲಿ ಬ್ಯುಸಿನೆಸ್ ಕ್ಲಾಸ್​ನ ಬಸ್​ ಸಂಚಾರ ಆರಂಭಿಸಿ 55 ವರ್ಷಗಳಾಯಿತು. ಕರ್ನಾಟಕದಲ್ಲಿ ಸಂಚಾರ ಶುರು ಮಾಡಿದ ಮೊದಲ ಸ್ಲೀಪರ್ ಬಸ್ ಇದು. 55 ವರ್ಷಗಳ ಹಿಂದೆ 8 ವರ್ಷದವರಾಗಿದ್ದ ನಿಖಿಲ್ ತಿವಾರಿ ತಮ್ಮ ಅಪ್ಪನೊಂದಿಗೆ ಮೊದಲ ಸ್ಲೀಪರ್ ಬಸ್​ನಲ್ಲಿ ಪ್ರಯಾಣ ಮಾಡಿದ್ದರು. ಅವರು ಅಂದಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾವು ಆ ದೊಡ್ಡ ಬಸ್​ ಅನ್ನು ಹತ್ತಿದಾಗ ಬಹಳ ಆಶ್ಚರ್ಯವಾಗಿತ್ತು. ತಿಳಿ ನೀಲಿ ಮತ್ತು ಕೆಂಪು ಬಣ್ಣದಲ್ಲಿದ್ದ ಬಸ್​ನ ಒಳಭಾಗ ಇನ್ನೂ ನನಗೆ ನೆನಪಿದೆ. ಆ ಬಸ್​ನ ಸಿಬ್ಬಂದಿ ಬೆಡ್​ ದಿಂಬು, ಲೈಟ್ ಮತ್ತು ರೇಡಿಯೋ ವ್ಯವಸ್ಥೆ ಮಾಡಿದ್ದರು. ಆ ಬಸ್​ನ ಫೋಟೋ, ವಿಡಿಯೋವನ್ನು ನನ್ನ ತಂದೆ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು ಎಂದು ನಿಖಿಲ್ ತಿವಾರಿ 55 ವರ್ಷ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್​ಆರ್​ಟಿಸಿ)ಯ ಮಹತ್ವದ ಯೋಜನೆಯಾದ ಸ್ಲೀಪರ್ ಬಸ್ ಬಹಳ ಯಶಸ್ವಿಯಾಯಿತು. ಈ ಸ್ಲೀಪರ್ ಬಸ್​ನ ಬಗ್ಗೆ ತಿಳಿದುಕೊಳ್ಳಲು, ಅಧ್ಯಯನ ಮಾಡಲು ಕಣ್ಣಪ್ಪ ಎಂಬ ಸಿಬ್ಬಂದಿಯನ್ನು ಎಂಎಸ್​ಆರ್​ಟಿಸಿಯಿಂದ ಜರ್ಮನಿಗೆ ಕಳುಹಿಸಲಾಗಿತ್ತು. ಅಲ್ಲಿನ ಬಸ್​ಗಳ ಸಂಚಾರ, ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಬಂದು ಕರ್ನಾಟಕದಲ್ಲೂ ಅಳವಡಿಸಲಾಯಿತು. ಇದಕ್ಕಾಗಿ ವಿಶೇಷವಾಗಿ ತರಬೇತಿ ಪಡೆದ ಚಾಲಕರು, ಕಂಡಕ್ಟರ್ ಅನ್ನು ನೇಮಕ ಮಾಡಲಾಗಿತ್ತು. ಅದಾದ ಬಳಿಕ ಹಲವು ಬದಲಾವಣೆಗಳೊಂದಿಗೆ ಸ್ಲೀಪರ್ ಬಸ್ ಅನ್ನು ಮೇಲ್ದರ್ಜೆಗೆ ಏರಿಸಲಾಯಿತು. ಇದೀಗ ರಾಜ್ಯಾದ್ಯಂತ ಸಾಕಷ್ಟು ಸ್ಲೀಪರ್ ಬಸ್​ಗಳು ಓಡಾಡುತ್ತಿವೆ.

ಇದನ್ನೂ ಓದಿ: ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಕಟ್ಟಡ ಮಾಲೀಕನ ವಿರುದ್ಧ ಎಫ್​ಐಆರ್ ದಾಖಲು

Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಒರಿಸ್ಸಾ, ಆಂಧ್ರದಲ್ಲಿ ಗುಲಾಬ್ ಚಂಡಮಾರುತದ ಭೀತಿ

(Bengaluru News: 55 years ago Karnataka’s First Sleeper bus started Traveling)

Published On - 6:36 pm, Mon, 27 September 21