ಸ್ಟಾರ್ಟ್​ಅಪ್​ ಸಂಸ್ಥಾಪಕನ ಒಂದು ಟ್ವೀಟ್​​ನಿಂದ ಏನೆಲ್ಲ ಆಯಿತು ನೋಡಿ !; ಕೆಟಿಆರ್​, ಡಿ.ಕೆ.ಶಿವಕುಮಾರ್, ಅಶ್ವತ್ಥ್​ನಾರಾಯಣ್​ರಿಂದ ಪ್ರತಿಕ್ರಿಯೆ

| Updated By: Lakshmi Hegde

Updated on: Apr 04, 2022 | 7:49 PM

ಟಿ.ರಾಮರಾವ್ ಟ್ವೀಟಿಗೆ ಕರ್ನಾಟಕ ಐಟಿ ಸಚಿವ ಡಾ. ಅಶ್ವತ್ಥ್​ನಾರಾಯಣ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಸ್ಟಾರ್ಟ್​ಅಪ್​​ನ್ನು ಹೈದರಾಬಾದ್​ಗೆ ಸ್ಥಳಾಂತರ ಮಾಡಿ ಎಂದು ಆಫರ್​ ಕೊಟ್ಟಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಟಾರ್ಟ್​ಅಪ್​ ಸಂಸ್ಥಾಪಕನ ಒಂದು ಟ್ವೀಟ್​​ನಿಂದ ಏನೆಲ್ಲ ಆಯಿತು ನೋಡಿ !; ಕೆಟಿಆರ್​, ಡಿ.ಕೆ.ಶಿವಕುಮಾರ್, ಅಶ್ವತ್ಥ್​ನಾರಾಯಣ್​ರಿಂದ ಪ್ರತಿಕ್ರಿಯೆ
ಡಿ.ಕೆ.ಶಿವಕುಮಾರ್​ ಮತ್ತು ಕೆ.ಟಿ.ರಾಮರಾವ್​
Follow us on

ಬೆಂಗಳೂರು ಮೂಲದ ಸ್ಟಾರ್ಟ್​ಅಪ್​ ಖಾತಾಬುಕ್​ನ ಸಂಸ್ಥಾಪಕ ರವೀಶ್​ ನರೇಶ್​ ಎಂಬುವರು ಮಾರ್ಚ್​ 31ರಂದು ಒಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಇದೀಗ ತೆಲಂಗಾಣ​ ಸಚಿವ ಕೆ.ಟಿ.ರಾಮರಾವ್​ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್​ ನಡುವಿನ ಸೌಹಾರ್ದಯುತ ವಾದ-ಪ್ರತಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಕರ್ನಾಟಕ ಐಟಿ ಸಚಿವ ಕೆ.ಅಶ್ವತ್ಥ ನಾರಾಯಣ್ ಕೂಡ ತುಸು ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.  ಅಂದಹಾಗೇ ರವೀಶ್​ ನರೇಶ್​ ಟ್ವೀಟ್​ ಮಾಡಿ, ಬೆಂಗಳೂರಿನಲ್ಲಿ ಹಲವು ಸೌಲಭ್ಯಗಳ ಕೊರತೆ ಇದೆ. ಎಚ್​ಎಸ್​ಆರ್​ ಮತ್ತು ಕೋರಮಂಗಲದಲ್ಲಿರುವ ಹಲವು ನವೋದ್ಯಮಗಳಿಂದ ಸರ್ಕಾರಕ್ಕೆ ಬಿಲಿಯನ್ ಡಾಲರ್​ಗಳಷ್ಟು ತೆರಿಗೆ ಪಾವತಿಯಾಗುತ್ತಿದೆ. ಅಷ್ಟಾಗ್ಯೂ ಕೂಡ ಇಲ್ಲಿ ರಸ್ತೆ ಸೌಕರ್ಯ ಸರಿಯಾಗಿಲ್ಲ. ಪ್ರತಿನಿತ್ಯವೂ ವಿದ್ಯುತ್ ಕಡಿತವಾಗುತ್ತದೆ. ನೀರಿನ ಪೂರೈಕೆ ಸರಿಯಾಗಿಲ್ಲ. ಫೂಟ್​ಪಾತ್​ ವ್ಯವಸ್ಥೆಯಿಲ್ಲ. ಇಲ್ಲಿಗೆ ಹೋಲಿಸಿದರೆ ಅದೆಷ್ಟೋ ಹಳ್ಳಿಗಳಲ್ಲೇ ಇನ್ನೂ ಅತ್ಯುತ್ತಮ ಸೌಕರ್ಯಗಳಿವೆ ಎಂದು  ಹೇಳಿದ್ದರು. 

ರವೀಶ್​ ನರೇಶ್​ ಅವರ ಈ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡ ಹೈದರಾಬಾದ್ ತೆಲಂಗಾಣ​ ಸಚಿವ ಕೆ.ಟಿ.ರಾಮರಾವ್​, ರವೀಶ್​ ನರೇಶ್ ಅವರೇ ನೀವು ನಿಮ್ಮ ಬ್ಯಾಗ್​​ ಪ್ಯಾಕ್​ ಮಾಡಿಕೊಂಡು ನಮ್ಮ ಹೈದರಾಬಾದ್​ಗೆ ಬಂದು ಬಿಡಿ. ಇಲ್ಲಿ ಭೌತಿಕ ಮೂಲಸೌಕರ್ಯ ವ್ಯವಸ್ಥೆ ಅತ್ಯಂತ ಚೆನ್ನಾಗಿದೆ. ಅಷ್ಟೇ ಸಾಮಾಜಿಕ ಮೌಲಸೌಕರ್ಯವೂ ಅತ್ಯುತ್ತಮವಾಗಿದೆ. ವಿಮಾನ ನಿಲ್ದಾಣವೂ ಉತ್ತಮವಾಗಿದೆ. ನಮ್ಮ ಸರ್ಕಾರ ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ ಎಂಬ ಮೂರು ಮಂತ್ರಗಳನ್ನು ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡುತ್ತದೆ ಎಂದು ಹೇಳಿದ್ದರು. ಅಂದರೆ ನೀವು ನಿಮ್ಮ ನವೋದ್ಯಮವನ್ನು ಹೈದರಾಬಾದ್​ಗೆ ಸ್ಥಳಾಂತರ ಮಾಡಿ ಎಂದು ಹೇಳಿದ್ದರು.

ಕೆ.ಟಿ.ರಾಮರಾವ್​ ಟ್ವೀಟ್​ಗೆ ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ ನೀಡಿ, ಸ್ನೇಹಿತರಾದ ಕೆಟಿಆರ್ ಅವರೇ, ಬೆಂಗಳೂರಿಗಿಂತಲೂ ತೆಲಂಗಾಣದಲ್ಲಿ ಅತ್ಯುತ್ತಮ ಮೂಲಸೌಕರ್ಯ ವ್ಯವಸ್ಥೆ ಇದೆ ಎಂದು ನೀವು ನಿಶ್ಚಿತವಾಗಿ ಹೇಳುತ್ತಿದ್ದೀರಿ. ಈ ಮೂಲಕ ಒಂದು ಸವಾಲು ಹಾಕುತ್ತಿದ್ದೀರಿ. ನಾನು ಆ ಸವಾಲನ್ನು ಸ್ವೀಕರಿಸುತ್ತೇನೆ. 2023ರ ಕೊನೆಯಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ನೋಡುತ್ತಿರಿ, ಬೆಂಗಳೂರಿನ ವೈಭವ ಮತ್ತೆ ಮರುಕಳಿಸುವಂತೆ ಮಾಡುತ್ತೇವೆ. ಭಾರತದ ಅತ್ಯುತ್ತಮ ನಗರವನ್ನಾಗಿ ಮಾರ್ಪಾಡು ಮಾಡುತ್ತೇವೆ ಎಂದು ಹೇಳಿದರು.

ಮತ್ತೆ ಡಿಕಶಿ ಟ್ವೀಟ್​ನ್ನು ಮರು ಟ್ವೀಟ್ ಮಾಡಿಕೊಂಡ ಕೆ.ಟಿ.ರಾಮರಾವ್​, ಪ್ರೀತಿಯ ಡಿ.ಕೆ.ಶಿವಕುಮಾರ ಅಣ್ಣ, ನನಗೆ ಕರ್ನಾಟಕ ರಾಜಕಾರಣದ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲ. ಅಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ನನಗೆ ತಿಳಿಯದು. ಹಾಗಿದ್ದಾಗ್ಯೂ ನಿಮ್ಮ ಚಾಲೆಂಜ್​​ ನಾನೂ ಸ್ವೀಕರಿಸಿದ್ದೇನೆ. ನಮ್ಮ ಯುವಕರಿಗಾಗಿ ಉದ್ಯೋಗ ಸೃಷ್ಟಿ ಮಾಡಿಕೊಡುವಲ್ಲಿ, ಈ ದೇಶವನ್ನು ಸಂಪದ್ಭರಿತ ಮಾಡಿಕೊಡುವಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಆರೋಗ್ಯಕರವಾದ ಸ್ಪರ್ಧೆಯಿರಲಿ.   ನಾವು ಮೂಲಸೌಕರ್ಯಗಳು, ಐಟಿ-ಬಿಟಿ ಪ್ರಗತಿ ಬಗ್ಗೆ ಗಮನಹರಿಸೋಣ, ಅದು ಬಿಟ್ಟು ಹಲಾಲ್​, ಹಿಜಾಬ್​ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದಿದ್ದಾರೆ.

ಡಾ. ಅಶ್ವತ್ಥ್​ನಾರಾಯಣ ತಿರುಗೇಟು !

ಈ ಮಧ್ಯೆ ಕೆ.ಟಿ.ರಾಮರಾವ್ ಟ್ವೀಟಿಗೆ ಕರ್ನಾಟಕ ಐಟಿ ಸಚಿವ ಡಾ. ಅಶ್ವತ್ಥ್​ನಾರಾಯಣ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಸ್ಟಾರ್ಟ್​ಅಪ್​​ನ್ನು ಹೈದರಾಬಾದ್​ಗೆ ಸ್ಥಳಾಂತರ ಮಾಡಿ ಎಂದು ಆಫರ್​ ಕೊಟ್ಟಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕರ್ನಾಟಕ ಜಾಗತಿಕವಾಗಿ ಸ್ಪರ್ಧೆಗೆ ಇಳಿದಿದೆಯೇ ಹೊರತು ನೆರೆರಾಜ್ಯದೊಟ್ಟಿಗೆ ಅಲ್ಲ ಎಂದಿದ್ದಾರೆ.  ಎಲ್ಲವೂ ಸರಿಯಾಗಿಯೇ ಇದೆ, ಏನೇನೂ ದೋಷವಿಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಶ್ರಮಿಸುತ್ತಿದೆ. ನಾವೆಲ್ಲರೂ ಮೊದಲು ಭಾರತೀಯರು. ನಮ್ಮ ನೆರೆರಾಜ್ಯದ ಅಭಿವೃದ್ಧಿಯನ್ನು ಸಹಿಸಲಾಗದಷ್ಟು ಕೀಳುಮಟ್ಟದವರಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ರವೀಶ್ ನರೇಶ್​ರ ಒಂದು ಟ್ವೀಟ್​ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Viral Video : ಸಖತ್ ವೈರಲ್ ಆಗುತ್ತಿದೆ ಮದುಮಗಳ ಲೆಜಾ ಲೆಜಾ ಡ್ಯಾನ್ಸ್!