ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ. 2A ಮೀಸಲಾತಿಗೆ ಆಗ್ರಹಿಸಿ ಕಳೆದ ಕೆಲವಾರು ದಿನಗಳಿಂದ ನಡೆಯುತ್ತಿರುವ ಪಂಚಮಸಾಲಿ ಹೋರಾಟ ಇಂದು (ಫೆ.21) ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದಾರೆ. ಸಮಾವೇಶದಲ್ಲಿ ಪಂಚಮಸಾಲಿ ಸಮುದಾಯದ ಸಚಿವರು, ಶಾಸಕರು, ಸಮಾಜದ ಮುಖಂಡರು ಹಾಗೂ ಲಕ್ಷಾಂತರ ಜನರು ಭಾಗಿಯಾಗಿದ್ದಾರೆ.
ಸಮಾವೇಶದಲ್ಲಿ ಭಾಗಿಯಾಗಿರುವ ಲಕ್ಷಾಂತರ ಮಂದಿ ರೈತಾಪಿ ವರ್ಗದ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ನೇಗಿಲು ಹಿಡಿದು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಈ ವೇಳೆ, ಪಂಚಮಸಾಲಿಗಳ ಬಲಗೈ ಭಂಟ ವಿಜಯಾನಂದ ಕಾಶಪ್ಪನವರ್ ಎಂದು ಸ್ವಾಮೀಜಿ ಹೊಗಳಿದ್ದಾರೆ. ಬಸವಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಹುರುದುಂಬಿಸಿ, ಜೈ ಪಂಚಮಸಾಲಿ ಎಂದು ಘೋಷಣೆ ಎಂದು ಘೋಷಣೆ ಕೂಗಿದ್ದಾರೆ.
ಗಂಗಮ್ಮ ಎಂಬವರಿಗೆ ವೇದಿಕೆಯಲ್ಲಿ ಗೌರವ
ಸಮಾವೇಶದ ವೇಳೆ, ಸಮುದಾಯದ ಮೀಸಲಾತಿಗಾಗಿ ಸ್ವಾಮೀಜಿಗಳ ಜೊತೆ ಪಾದಯಾತ್ರೆ ಮಾಡಿದ ಗಂಗಮ್ಮ ಎಂಬವರಿಗೆ ವೇದಿಕೆಯಲ್ಲಿ ಗೌರವ ಸಮರ್ಪಿಸಲಾಗಿದೆ. ಸಮುದಾಯದ ಮೀಸಲಾತಿಗಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅವರಿಗೆ ನಮ್ಮ ಸಮುದಾಯದಿಂದ ಗೌರವಪೂರ್ವಕ ನಮನಗಳು ಎಂದು ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಇಂದು ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಇದೆ. ವೀರಶೈವ ಪಂಚಮಸಾಲಿಗಳ ನಾಯಕತ್ವ ಉದಯವಾಗುತ್ತಿದೆ ಎಂದು ಸಮಾವೇಶಕ್ಕೂ ಮುನ್ನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ್ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ನೆರದಿದ್ದ ಜನರು ಹರ್ಷೋದ್ಘಾರ ಮಾಡಿದ್ದಾರೆ. ಜತೆಗೆ, ಸಮಾವೇಶಕ್ಕೆ ಶಾಸಕ ಸಿದ್ದು ಸೌದಿ, ಶಾಸಕ ಶಿವಾನಂದ ಪಾಟೀಲ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿದ್ದಾರೆ.
ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಜಾರಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಫೆ.22ರ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144 ಜಾರಿಯಾಗಿರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾ ವಹಿಸಿದ್ದಾರೆ.
ಇದನ್ನೂ ಓದಿ: ಅರಮನೆ ಮೈದಾನದಲ್ಲಿ ಪಂಚಮಸಾಲಿ ಪರಾಕ್ರಮ.. 10 ಲಕ್ಷ ಜನ, ಇಂದು ಫೈನಲ್ ಫೈಟ್
Published On - 12:35 pm, Sun, 21 February 21