ಅರಮನೆ ಮೈದಾನದಲ್ಲಿ ಪಂಚಮಸಾಲಿ ಪರಾಕ್ರಮ.. 10 ಲಕ್ಷ ಜನ, ಇಂದು ಫೈನಲ್ ಫೈಟ್
ಸರ್ಕಾರಕ್ಕೆ ತಲೆನೋವಾಗಿರೋ ಪಂಚಮಸಾಲಿ ಮೀಸಲಾತಿ ಹೋರಾಟ ಅಂತಿಮ ಘಟ್ಟ ತಲುಪಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ರಣಕಹಳೆ ಮೊಳಗಿಸೋ ಮೂಲಕ ಸರ್ಕಾರದ ಕಿವಿ ಹಿಂಡಲು ಕ್ಷಣಗಣನೆ ಶುರುವಾಗಿದೆ. ಹಾಗಿದ್ರೆ ಪಂಚಮಸಾಲಿ ಪರಾಕ್ರಮ ಇಂದು ಎಷ್ಟೊತ್ತಿಗೆ. ಏನೇನ್ ಪ್ಲ್ಯಾನ್ ರೂಪಿಸಿಕೊಂಡಿದ್ದಾರೆ ಇಲ್ಲಿದೆ ಮಾಹಿತಿ.
ಬೆಂಗಳೂರು: ಒಂದೇ ಕೂಗು.. ಒಂದೇ ಧ್ವನಿ.. ಒಂದೇ ಬೇಡಿಕೆ.. ಲಕ್ಷಾಂತರ ಹೆಜ್ಜೆ.. 700 ಕಿಲೋ ಮೀಟರ್ ಪಾದಯಾತ್ರೆ. 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಡೆಸ್ತಿರೋ ಹೋರಾಟ ಅಂತಿಮ ಘಟ್ಟ ತಲುಪಿದೆ. ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೀತಿರೋ ಹೋರಾಟ ಕ್ಲೈಮ್ಯಾಕ್ಸ್ ತಲುಪಿದೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷ ಪಂಚಮಸಾಲಿ ಸಮುದಾಯದ ಜನ ಸರ್ಕಾರದ ವಿರುದ್ಧ ತೊಡೆ ತಟ್ಟಲಿದ್ದಾರೆ.
ಹೌದು.. ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಲ್ಲ. ಬೇಡಿಕೆ ಈಡೇರೋವರೆಗೂ ಹೋರಾಟ ನಿಲ್ಲಿಸಲ್ಲ. ಹೀಗಂತಾ ಪಟ್ಟು ಹಿಡಿದಿರೋ ಪಂಚಮಸಾಲಿ ಮುಖಂಡರು, ಇಂದು ರಣಕಹಳೆ ಮೊಳಗಿಸಲು ಸನ್ನದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ನಾವೇನು, ನಮ್ಮ ಸಮುದಾಯದ ಪವರ್ ಏನು? ಸಮುದಾಯದ ಡಿಮ್ಯಾಂಡ್ ಏನು ಅನ್ನೋದನ್ನ ಸರ್ಕಾರಕ್ಕೆ ಮುಟ್ಟಿಸಲು ಸಜ್ಜಾಗಿದ್ದಾರೆ.
ಪಂಚಮಸಾಲಿ ಪರಾಕ್ರಮ ಹೇಗಿರಲಿದೆ? ಅಂದಹಾಗೆ ಇಂದು ಬೆಳಗ್ಗೆ 11 ಗಂಟೆಗೆ ಪಂಚಮಸಾಲಿ ಬೃಹತ್ ಸಮಾವೇಶ ಶುರುವಾಗಲಿದೆ. ರಣಕಹಳೆ ಮೊಳಗಿಸಲು ಬೃಹತ್ ವೇದಿಕೆ ಸಿದ್ಧವಾಗಿದ್ದು, ಸಮಾವೇಶದಲ್ಲಿ ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶವೂ ಸೇರಿದಂತೆ ಸುಮಾರು 10 ಲಕ್ಷ ಜನ ಸೇರಲಿದ್ದಾರೆ. ಮಧ್ಯಾಹ್ನ 1 ಗಂಟೆವರೆಗೂ ಸಮಾವೇಶ ನಡೆಯಲಿದ್ದು, ಸಮಾವೇಶ ಮುಗಿಯೋ ಒಳಗೆ 2ಎ ಮೀಸಲಾತಿಗೆ ಸೇರಿಸಿದ ಸರ್ಕಾರದ ಆದೇಶ ಪತ್ರ ಬರಬೇಕು ಅಂತಾ ಒತ್ತಾಯಿಸಲಿದ್ದಾರೆ. ಒಂದ್ವೇಳೆ ಒಂದು ಗಂಟೆಯೊಳಗೆ ಸರ್ಕಾರ ಆದೇಶ ಹೊರಡಿಸದಿದ್ರೆ, ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧ ಚಲೋ ಆರಂಭಿಸಲು ನಿರ್ಧರಿಸಿದ್ದಾರೆ. ಅಲ್ಲದೇ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ಫ್ರೀಡಂಪಾರ್ಕ್ನಿಂದ ಅರಮನೆ ಮೈದಾನವರೆಗಿನ ಪಾದಯಾತ್ರೆ ಕ್ಯಾನ್ಸಲ್ ಹೌದು, ಪಂಚಮಸಾಲಿಯ ಶ್ರೀಗಳ ನೇತೃತ್ವದಲ್ಲಿಂದು ಫ್ರೀಡಂಪಾರ್ಕ್ನಿಂದ ಅರಮನೆ ಮೈದಾನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದ್ರೆ ಟ್ರಾಫಿಕ್ ಉಂಟಾಗಿ ಜನರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನ ರದ್ದುಗೊಳಿಸಲಾಗಿದೆ. ಹಾಗಾಗಿ ಭಕ್ತರಿಗೆ ನೇರವಾಗಿ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ ಎಂದು ಟಿವಿ9ಗೆ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಅಂದಹಾಗೆ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತಯಾರಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ. ಆದ್ರೆ, ನಮಗೆ ಇಂದೇ ಮೀಸಲಾತಿ ಆದೇಶದ ಪ್ರತಿ ಬೇಕು ಅಂತಾ ಪಂಚಮಸಾಲಿ ಪಟ್ಟು ಹಿಡಿದಿದೆ. ಈ ಮೀಸಲಾತಿ ಫೈಟ್ ಎಲ್ಲಿಗೆ ಬಂದು ನಿಲ್ಲುತ್ತೆ ಅಂತಾ ಕಾದು ನೋಡಬೇಕಿದೆ.
ಪಂಚಮಸಾಲಿ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವೀರಶೈವ ಪಂಚಮಸಾಲಿ ಸಮುದಾಯದ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆಯಲಿರುವ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾತ್ರಿಯಿಂದಲೇ ಖಾಕಿ ಪಡೆ ಸಮಾವೇಶ ನಡೆಯುವ ಸ್ಥಳದಲ್ಲಿ ಬೀಡುಬಿಟ್ಟಿದೆ.
ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎಂಟು ಡಿಸಿಪಿಗಳ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಗಿದೆ. ತುಮಕೂರು ರಸ್ತೆ ಮಾರ್ಗದಿಂದ ಅರಮನೆ ಮೈದಾನದ ಮಾರ್ಗದವರೆಗೂ ಮುನ್ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚು ವಾಹನಗಳು ಆಗಮಿಸುವ ಸಾಧ್ಯತೆಯಿದೆ. ಹಾಗಾಗಿ, ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಸಮಾವೇಶಕ್ಕೆ ಭರ್ಜರಿ ಸಿದ್ಧತೆ ಬೈಕ್, ಕಾರಲ್ಲಿ ಬರುವರಿಗೆ ತ್ರಿಪುರವಾಸಿನಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ ವಾಹನಗಳಿಗೆ ಕೃಷ್ಣ ವಿಹಾರ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ರಾತ್ರಿಯಿಂದಲೇ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸುತ್ತಿದ್ದು, 10ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 800 ಜನ ಬಾಣಸಿಗರು ರಾತ್ರಿಯಿಂದಲೇ ಅಡುಗೆ ಕೆಲಸದಲ್ಲಿ ತೊಡಗಿದ್ದಾರೆ.
ಒಟ್ಟಿನಲ್ಲಿ ದೀರ್ಘ ಸಮಯದ ಬಳಿಕ ರಾಜಧಾನಿ ಬೆಂಗಳೂರು ಬೃಹತ್ ಸಮಾವೇಶಕ್ಕೆ ಸಾಕ್ಷಿಯಾಗ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರವಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶ: 1 ಲಕ್ಷ ಮಂದಿ ಭಾಗಿ ಸಾಧ್ಯತೆ
ಅರಮನೆ ಮೈದಾನದಲ್ಲಿ ನಾಳೆ ಪಂಚಮಸಾಲಿ ಬೃಹತ್ ಸಮಾವೇಶ: ಸಂಚಾರ ದಟ್ಟಣೆ ತಗ್ಗಿಸಲು 8 ಪ್ರಮುಖ ಮಾರ್ಗ ಬದಲಾವಣೆ