ಬೆಂಗಳೂರಲ್ಲಿ ಪಂಚಮಸಾಲಿ ಸಮುದಾಯದ ಬೃಹತ್​ ಸಮಾವೇಶ: 1 ಲಕ್ಷ ಮಂದಿ ಭಾಗಿ ಸಾಧ್ಯತೆ

ಮೀಸಲಾತಿ ಪರಿಷ್ಕರಣೆಗೆ ಆಗ್ರಹಿಸಿ ಜ.14ರಂದು ಕೂಡಲಸಂಗಮದಿಂದ ಹೊರಟಿದ್ದ ಪಾದಯಾತ್ರೆ ಶುಕ್ರವಾರ ಬೆಂಗಳೂರು ಪ್ರವೇಶಿಸಿದೆ. ನಾಳೆಯ ಸಮಾವೇಶದ ಮೂಲಕ ಪಾದಯಾತ್ರೆ ಪೂರ್ಣಗೊಳ್ಳಲಿದೆ.

  • TV9 Web Team
  • Published On - 19:51 PM, 20 Feb 2021
ಬೆಂಗಳೂರಲ್ಲಿ ಪಂಚಮಸಾಲಿ ಸಮುದಾಯದ ಬೃಹತ್​ ಸಮಾವೇಶ: 1 ಲಕ್ಷ ಮಂದಿ ಭಾಗಿ ಸಾಧ್ಯತೆ
ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕವಾಗಿ ಪ್ರಬಲರಾಗಿರುವ ಅನೇಕ ಸಮುದಾಯದವರು ಹೋರಾಟಕ್ಕೆ ಇಳಿದಿದ್ದಾರೆ. ಈ ಹೋರಾಟ ನೇರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಅದೇ ರೀತಿ, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಾಳೆ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್​ ಸಮಾವೇಶ ನಡೆಯಲಿದೆ. ಈ ವೇಳೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದೆ. ಹೀಗಾಗಿ ನಾಳೆ ನಡೆಯುವ ಸಮಾವೇಶ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ.

ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2A ಪಟ್ಟಿಗೆ ಸೇರಿಸಬೇಕೆಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರದ ವಚನಾನಂದ ಸ್ವಾಮೀಜಿ ಆಗ್ರಹವಾಗಿದೆ. ಮೀಸಲಾತಿ ಪರಿಷ್ಕರಣೆಗೆ ಆಗ್ರಹಿಸಿ ಜ.14ರಂದು ಕೂಡಲಸಂಗಮದಿಂದ ಹೊರಟಿದ್ದ ಪಾದಯಾತ್ರೆ ಶುಕ್ರವಾರ ಬೆಂಗಳೂರು ಪ್ರವೇಶಿಸಿದೆ. ನಾಳೆಯ ಸಮಾವೇಶದ ಮೂಲಕ ಪಾದಯಾತ್ರೆ ಪೂರ್ಣಗೊಳ್ಳಲಿದೆ.  ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಬೃಹತ್  ಸಮಾವೇಶ ಸಂಜೆ ನಾಲ್ಕು ಗಂಟೆ ವೇಳೆಗೆ ಮುಗಿಯಲಿದೆ.

ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸುವ ಬಗ್ಗೆ ಯಡಿಯೂರಪ್ಪ ಈಗಲೇ ಕಾರ್ಯಪ್ರವೃತ್ತರಾಗಬೇಕು ಎಂಬುದು ಇವರ ಆಗ್ರಹ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿ ಎಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಆದೇಶಿಸಿದ್ದಾರೆ. ಅಧ್ಯಯನ ಮಾಡಿ, ಅದರ ವರದಿ ಸರ್ಕಾರದ ಕೈ ಸೇರಿ ಇದು ಜಾರಿಗೆ ಬರುವ ವೇಳೆಗೆ ತುಂಬಾನೇ ಸಮಯವಾಗುತ್ತದೆ ಎನ್ನುವುದು ಇವರ ವಾದ.

ಧರಣಿ ಎಚ್ಚರಿಕೆ..
ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ, ಈ ಬಗ್ಗೆ ವರದಿ ನೀಡುವುದು ತುಂಬ ವಿಳಂಬವಾಗುತ್ತದೆ. ಹೀಗಾಗಿ, ಸಮಾವೇಶ ಮುಗಿಯುವ ಮುನ್ನ ರಾಜ್ಯ ಸರ್ಕಾರ ಮೀಸಲಾತಿ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಅರಮನೆ ಮೈದಾನದಿಂದ ವಿಧಾನಸೌಧದವರೆಗೆ ಪಾದಾಯಾತ್ರೆಯಲ್ಲಿ ತೆರಳಿ, ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.

ಮಾರ್ಚ್​​5ರಿಂದ ಉಪವಾಸ ಸತ್ಯಾಗ್ರಹ..
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಪಡೆದೇ ತೀರುತ್ತೇವೆ  ಎಂದು ಜಯಮೃತ್ಯುಂಜಯ ಸ್ವಾಮೀಜಿ  ಹಠ ತೊಟ್ಟಿದ್ದಾರೆ. ಒಂದೊಮ್ಮೆ ಪಾದಯಾತ್ರೆ, ಸಮಾವೇಶ, ಧರಣಿಗೆ ಸರ್ಕಾರ ಬಗ್ಗದಿದ್ದರೆ, ಮಾರ್ಚ್ 5 ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಉದ್ದೇಶ ಇಲ್ಲ..
ಪಂಚಮಸಾಲಿ ಸಮುದಾಯದವರು 2A ಮೀಸಲಾತಿಗೆ ಆಗ್ರಹ ಮಾಡುತ್ತಿರುವದರ ಹಿಂದೆ ಕೆಲ ರಾಜಕೀಯ ಉದ್ದೇಶವಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರವಾಗಿ ಮಾತನಾಡಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಈ ಆಗ್ರಹದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸುವ ಉದ್ದೇಶ ನಮ್ಮದಲ್ಲ. ಸಮುದಾಯದವರ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಮಾತ್ರ ನಾವು ಮೀಸಲಾತಿ ಕೇಳುತ್ತಿದ್ದೇವೆ ಎಂದಿದ್ದಾರೆ.

ಸಂಚಾರ ದಟ್ಟಣೆ ಸಾಧ್ಯತೆ
ಬೃಹತ್​ ಸಮಾವೇಶ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಅರಮನೆ ಮೈದಾನದ ಸುತ್ತಮುತ್ತಲ ಭಾಗದಲ್ಲಿ ಭಾರೀ ಟ್ರಾಫಿಕ್​ ದಟ್ಟಣೆ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ: 2ಎ ಮೀಸಲಾತಿಗೆ ಪಟ್ಟು, ಮುಂದುವರಿದ ಪಾದಯಾತ್ರೆ.. ಫೆಬ್ರವರಿ 21ರಂದು ಪಂಚಮಸಾಲಿ ಸಮುದಾಯದ ಸಮಾವೇಶಕ್ಕೆ ಸಿದ್ಧತೆ ಶುರು